Sanjay Raut
Sanjay Raut Facebook
ಸುದ್ದಿಗಳು

[ಅಕ್ರಮ ಹಣ ವರ್ಗಾವಣೆ] ಸಂಜಯ್‌ ರಾವುತ್‌ಗೆ ಮುಂಬೈ ನ್ಯಾಯಾಲಯದ ಜಾಮೀನು; ಹೈಕೋರ್ಟ್‌ ಮೆಟ್ಟಿಲೇರಿದ ಜಾರಿ ನಿರ್ದೇಶನಾಲಯ

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಶಿವಸೇನೆಯ ಉದ್ಧವ್‌ ಠಾಕ್ರೆ ಬಣದ ರಾಜ್ಯಸಭಾ ಸದಸ್ಯ ಸಂಜಯ್‌ ರಾವುತ್ ಅವರಿಗೆ ಬುಧವಾರ ಮುಂಬೈ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ವಿಶೇಷ ನ್ಯಾಯಾಧೀಶರಾದ ಎಂ ಜಿ ದೇಶಪಾಂಡೆ ಅವರು ಇಂದು ಆದೇಶ ಪ್ರಕಟಿಸಿದ್ದು, ಸಹ ಆರೋಪಿಯಾದ ಪ್ರವೀಣ್‌ ರಾವುತ್ ಅವರಿಗೂ ಜಾಮೀನು ಮಂಜೂರು ಮಾಡಿದ್ದಾರೆ. ಸಂಜಯ್‌ ರಾವುತ್‌ ಅವರನ್ನು ಜುಲೈ 31ರಂದು ಜಾರಿ ನಿರ್ದೇಶನಾಲಯವು ಬಂಧಿಸಿತ್ತು.

“ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿಲು ನನಗೆ ಸ್ವಲ್ಪ ಕಾಲಾವಕಾಶ ನೀಡಬೇಕು. ಈ ನಮ್ಮ ಕೋರಿಕೆಯು ತರ್ಕರಹಿತವಾಗಿದೆಯೇ? ನಿಮ್ಮ ಆದೇಶಕ್ಕೆ ಶುಕ್ರವಾರದವರಗೆ ತಡೆ ನೀಡಿ” ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ನ್ಯಾಯಾಲಯಕ್ಕೆ ಮನವಿ ಮಾಡಿದರು. ಇದಕ್ಕೆ ನ್ಯಾಯಾಲಯವು ನಿರಾಕರಿಸಿತು.

ಆದೇಶ ತಡೆಗೆ ಹೈಕೋರ್ಟ್‌ ನಕಾರ

ಸಂಜಯ್‌ ರಾವುತ್‌ಗೆ ಜಾಮೀನು ನೀಡಿರುವ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಜಾರಿ ನಿರ್ದೇಶಾಲಯವು ಬಾಂಬೆ ಹೈಕೋರ್ಟ್‌ ಮೆಟ್ಟಿಲೇರಿದೆ. ನ್ಯಾಯಮೂರ್ತಿ ಭಾರತಿ ಡಂಗ್ರೆ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಪ್ರಕರಣವನ್ನು ಉಲ್ಲೇಖಿಸಲಾಯಿತು. ಆದರೆ, ಪೀಠವು ಆದೇಶ ಅಮಾನತು ಮಾಡಲು ನಿರಾಕರಿಸಿದ್ದು, ನಾಳೆ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಲು ಒಪ್ಪಿತು.

ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿ ಅರ್ಜಿ ಸಲ್ಲಿಸಿ, ಸಿಆರ್‌ಪಿಸಿ ಸೆಕ್ಷನ್‌ 439(2)ರ ಆದೇಶ ಮಾಡುವಂತೆ ಜಾರಿ ನಿರ್ದೇಶನಾಲಯ ಕೋರಿರುವುದನ್ನು ಪುರಸ್ಕರಿಸಲಾಗದದು ಎಂದು ಪೀಠವು ಹೇಳಿದೆ.