ರಾಣಾ ಕಪೂರ್, ಮುಂಬೈ ಸೆಷನ್ಸ್ ಕೋರ್ಟ್ ಮತ್ತು ಇಡಿ ಲೋಗೋ 
ಸುದ್ದಿಗಳು

ಯೆಸ್ ಬ್ಯಾಂಕ್ ಮುಖ್ಯಸ್ಥ ರಾಣಾಗೆ ಮುಂಬೈ ನ್ಯಾಯಾಲಯ ಜಾಮೀನು; ಜಾರಿ ನಿರ್ದೇಶನಾಲಯಕ್ಕೆ ಚಾಟಿ

ವಿಚಾರಣೆ ಇನ್ನೂ ಪ್ರಾರಂಭ ಆಗದಿದ್ದರೂ ಕನಿಷ್ಠ ಅವಧಿಗಿಂತ ಹೆಚ್ಚಿನ ಜೈಲು ಶಿಕ್ಷೆಯನ್ನು ಕಪೂರ್‌ ಅನುಭವಿಸಿದ್ದಾರೆ ಎಂದಿದೆ ಪೀಠ.

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರಿಗೆ ಮುಂಬೈ ನ್ಯಾಯಾಲಯ ಗುರುವಾರ ಜಾಮೀನು ನೀಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ (ಪಿಎಂಎಲ್ಎ) ಅಡಿಯಲ್ಲಿ ವಿಶೇಷ ನ್ಯಾಯಾಲಯ ಸಿಆರ್‌ಪಿಸಿ ಸೆಕ್ಷನ್ 436 ಎ ಅಡಿಯಲ್ಲಿ ಕಪೂರ್‌ಗೆ ಜಾಮೀನು ನೀಡಿತು.

ವಿಚಾರಣಾಧೀನ ಕೈದಿಯನ್ನು ಬಂಧಿಸಬಹುದಾದ ಗರಿಷ್ಠ ಅವಧಿ ಬಗ್ಗೆ ಹೇಳುವ ಸೆಕ್ಷನ್ 436 ಎ, ಗರಿಷ್ಠ ಜೈಲು ಶಿಕ್ಷೆಯ ಅರ್ಧಕ್ಕಿಂತ ಹೆಚ್ಚು ಅವಧಿಗೆ ಅಂತಹ ಯಾವುದೇ ವ್ಯಕ್ತಿಯನ್ನು ಬಂಧಿಸುವಂತಿಲ್ಲ ಎನ್ನುತ್ತದೆ.

ಕಪೂರ್ ಅವರನ್ನು ಮೂರು ವರ್ಷ ಒಂಬತ್ತು ತಿಂಗಳು ಬಂಧನದಲ್ಲಿರಿಸಲಾಗಿದ್ದು ಇದು ಅವರಿಗೆ ವಿಧಿಸಬಹುದಾದ ಗರಿಷ್ಠ ಜೈಲು ಶಿಕ್ಷೆಯ (ಏಳು ವರ್ಷಗಳು) ಅರ್ಧಕ್ಕಿಂತ ಹೆಚ್ಚು ಎಂದು ವಿಶೇಷ ನ್ಯಾಯಾಧೀಶ ಎಂ ಜಿ ದೇಶಪಾಂಡೆ ಅವರು ಡಿಸೆಂಬರ್ 21ರಂದು ನೀಡಿದ ಆದೇಶದಲ್ಲಿ ತಿಳಿಸಿದ್ದಾರೆ.

ಕಪೂರ್ ಬಂಧನವಾಗಿ ಮೂರು ವರ್ಷಗಳಿಗಿಂತ ಹೆಚ್ಚು ಅವಧಿ ಸಂದಿದ್ದರೂ ತನಿಖೆ ನಡೆಸದೆ ಜಾಮೀನು ಅರ್ಜಿ ವಿರೋಧಿಸಿದ ಜಾರಿ ನಿರ್ದೇಶನಾಲಯವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು. ಅವರನ್ನು ದೀರ್ಘಕಾಲ ಬಂಧನದಲ್ಲಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು.

"ಒಂದು ವೇಳೆ, ಭವಿಷ್ಯದಲ್ಲಿ, ಆರೋಪಿಯನ್ನು ಖುಲಾಸೆಗೊಳಿಸಿದರೆ, ಯಾವುದೇ ಕಾರಣವಿಲ್ಲದೆ ಆತ ಅನುಭವಿಸಿದ ಕನಿಷ್ಠ ಶಿಕ್ಷೆ ಅವಧಿಗೂ ಹೆಚ್ಚಾಗಿರುವ ಅನಗತ್ಯ ಸೆರೆವಾಸದ ಬಗ್ಗೆ ಏನು ಹೇಳುವಿರಿ? ಇದು ನಿಜವಾಗಿಯೂ ಗಂಭೀರ ಪ್ರಶ್ನೆ. ಪಿಎಂಎಲ್ ಕಾಯಿದೆಯ ಸೆಕ್ಷನ್ 44 (1) (ಸಿ) ಅಡಿಯಲ್ಲಿ ಕಡ್ಡಾಯಗೊಳಿಸಲಾದಂತೆ ಅರ್ಜಿದಾರರನ್ನು (ಎ 1) ವಿಚಾರಣೆಯಿಲ್ಲದೆ ಮತ್ತು ಆರೋಪ ನಿಗದಿಪಡಿಸುವ ಆರಂಭಿಕ ಹಂತವನ್ನು ಸಹ ಪ್ರಾರಂಭಿಸದೆ ಮತ್ತು ಇಡಿ ತ್ವರಿತ ಕ್ರಮ ಕೈಗೊಳ್ಳದೆ 3 ವರ್ಷ 9 ತಿಂಗಳ ಕಾಲ ಅನಗತ್ಯವಾಗಿ ಬಂಧನದಲ್ಲಿಡುವುದು ಪಿಎಂಎಲ್ ಕಾಯ್ದೆಯ ಸೆಕ್ಷನ್ 45 (1) ರ ಅಡಿಯಲ್ಲಿ ಅವಳಿ ಷರತ್ತುಗಳ ಕಠಿಣತೆಯನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ, ಜಾಮೀನು ಅರ್ಜಿಯನ್ನು ತಿರಸ್ಕರಿಸುವಂತೆ ಮಂಡಿಸಲಾದ ಇಡಿಯ ವಾದವು 7 ವರ್ಷಗಳ ಅವಧಿಯವರೆಗೆ ಮತ್ತು ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ತಮ್ಮ ತನಿಖೆಯನ್ನು ಮುಂದುವರಿಸಲು ಇ ಡಿಗೆ ಅನುಮತಿ ನೀಡಿದಂತೆಯೇ ಹೊರತು ಬೇರೇನೂ ಅಲ್ಲ" ಎಂದು ನ್ಯಾಯಾಲಯ ಹೇಳಿದೆ.

ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕ ಮತ್ತು 66 ವರ್ಷ ವಯಸ್ಸಿನ ಕಪೂರ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ನ್ಯಾಯಮೂರ್ತಿಗಳು ತೀರ್ಪು ನೀಡಿದರು. ಅವರು ಈಗಾಗಲೇ ವಿಚಾರಣೆಗೆ ಒಳಗಾಗದೆ ತಮ್ಮ ಅಪರಾಧಕ್ಕೆ ಅನ್ವಯವಾಗುವ ಕನಿಷ್ಠ ಶಿಕ್ಷೆಯನ್ನು ಅನುಭವಿಸಿದ್ದಾರೆ ಎಂದು ಪೀಠ ನುಡಿಯಿತು.

ಕಪೂರ್ ಅವರು ಯೆಸ್ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹುದ್ದೆಯನ್ನು ದುರುಪಯೋಗಪಡಿಸಿಕೊಂಡು ತಮ್ಮ ಕುಟುಂಬಕ್ಕೆ ಸಂಬಂಧಿಸಿದ ಕಂಪನಿಯ ಮೂಲಕ 600 ಕೋಟಿ ರೂ.ಗಳ ಅನಗತ್ಯ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ಆರೋಪಿಸಿ ಕಪೂರ್ ಅವರನ್ನು ಮಾರ್ಚ್ 8, 2020 ರಂದು ಜಾರಿ ನಿರ್ದೇಶನಾಲಯ (ಇ ಡಿ) ಬಂಧಿಸಿತ್ತು.