Anil Deshmukh, CBI
Anil Deshmukh, CBI  
ಸುದ್ದಿಗಳು

ಭ್ರಷ್ಟಾಚಾರ ಪ್ರಕರಣ: ಎನ್‌ಸಿಪಿ ನಾಯಕ ಅನಿಲ್‌ ದೇಶಮುಖ್‌ ಜಾಮೀನು ಅರ್ಜಿ ತಿರಸ್ಕರಿಸಿದ ಮುಂಬೈ ನ್ಯಾಯಾಲಯ

Bar & Bench

ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಹಾಗೂ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ನಾಯಕ ಅನಿಲ್‌ ದೇಶಮುಖ್‌ ಅವರ ಜಾಮೀನು ಅರ್ಜಿಯನ್ನು ಶುಕ್ರವಾರ ಮುಂಬೈನ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ವಿಚಾರವಿದ್ದು, ದೇಶದ ಆರ್ಥಿಕತೆಯ ಮೇಲೆ ಪ್ರಕರಣ ಬೀರುವ ಪರಿಣಾಮವನ್ನು ನ್ಯಾಯಾಲಯ ಪರಿಗಣಿಸಬೇಕಿದೆ ಎಂದು ವಿಶೇಷ ನ್ಯಾಯಾಧೀಶರಾದ ಎಸ್‌ ಎಚ್‌ ಗ್ವಾಲನಿ ಅವರು ಹೇಳಿದ್ದಾರೆ.

“ಪ್ರಕರಣದಲ್ಲಿ ಸಾಕಷ್ಟು ಹಣದ ವಿಚಾರವಿದ್ದು, ಇದರಲ್ಲಿ ದೇಶದ ಆರ್ಥಿಕತೆ ಸೇರಿದೆ. ಇಲ್ಲಿ ದೇಶದ ಆರ್ಥಿಕತೆಯನ್ನು ಪರಿಗಣಿಸಬೇಕಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ಜಾಮೀನಿನ ಸಂದರ್ಭದಲ್ಲಿ ಪ್ರಕರಣದ ಅರ್ಹತೆಯ ಕುರಿತು ವಿಸ್ತೃತ ವಿಶ್ಲೇಷಣೆ ನಡೆಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಆರೋಪಿಯ ಅಗತ್ಯಕ್ಕೆ ತಕ್ಕಂತೆ ವೈದ್ಯಕೀಯ ಸೌಲಭ್ಯ ಸಿಗುತ್ತಿರುವುದನ್ನೂ ನ್ಯಾಯಾಲಯವು ಗಮನಿಸಿತು.

“ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬಾರದು ಎಂಬ ಅಭಿಪ್ರಾಯ ಹೊಂದಿರುವುದರಿಂದ ಹಾಲಿ ಜಾಮೀನು ಕೋರಿಕೆ ಅರ್ಜಿಯನ್ನು ವಜಾ ಮಾಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

2019 ಮತ್ತು 2021ರ ಅವಧಿಯಲ್ಲಿನ ನಡೆದಿದ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಮುಖ್‌ ಮತ್ತು ಅವರ ಸಹವರ್ತಿಗಳನ್ನು ತನಿಖೆಗೆ ಒಳಪಡಿಸಲಾಗುತ್ತಿದೆ. ವಕೀಲೆ ಡಾ. ಜೈಶ್ರೀ ಪಾಟೀಲ್‌ ಅವರ ದೂರಿನ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದ ವಿಚಾರಗಳನ್ನು ಆಧರಿಸಿ, ದೇಶಮುಖ್‌ ಮತ್ತು ಇತರರ ವಿರುದ್ದ ಸಿಬಿಐ ಪ್ರಕರಣ ದಾಖಲಿಸಿದೆ.

ಮುಂಬೈ ಪೊಲೀಸ್‌ ಆಯುಕ್ತ ಪರಮ್‌ ಬೀರ್‌ ಸಿಂಗ್‌ ಅವರ ಅರ್ಜಿ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್‌ 2021ರ ಏಪ್ರಿಲ್‌ 5ರಂದು ನೀಡಿದ್ದ ನಿರ್ದೇಶನದ ಭಾಗವಾಗಿ ತನಿಖೆ ನಡೆಸಲಾಗುತ್ತಿದೆ. ಸಿಬಿಐ ಎಫ್‌ಐಆರ್‌ ದಾಖಲಿಸಿದ್ದನ್ನು ಆಧರಿಸಿ, ಜಾರಿ ನಿರ್ದೇಶನಾಲಯವು (ಇ ಡಿ) ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ದೂರು ದಾಖಲಿಸಿತ್ತು. ಇದರ ಭಾಗವಾಗಿ 2021ರ ನವೆಂಬರ್‌ನಲ್ಲಿ ದೇಶಮುಖ್‌ ಅವರನ್ನು ಇ ಡಿ ಬಂಧಿಸಿತ್ತು. ಅಲ್ಲಿಂದ ಇಲ್ಲಿಯವರೆಗೂ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.