Naresh Goyal and ED 
ಸುದ್ದಿಗಳು

ನರೇಶ್ ಗೋಯಲ್ ವೈದ್ಯಕೀಯ ಜಾಮೀನು ಅರ್ಜಿ ತಿರಸ್ಕರಿಸಿದ ಮುಂಬೈ ನ್ಯಾಯಾಲಯ

ಆದಾಗ್ಯೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದನ್ನುಮುಂದುವರೆಸುವಂತೆ ಜೆಟ್ ಏರ್‌ವೇಸ್‌ ಸಂಸ್ಥಾಪಕರಾದ ಗೋಯಲ್ ಅವರಿಗೆ ನ್ಯಾಯಾಲಯ ಅನುಮತಿಸಿತು.

Bar & Bench

ತಮ್ಮ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅವರು ವೈದ್ಯಕೀಯ ಕಾರಣಗಳಿಗಾಗಿ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಮುಂಬೈ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ [ನರೇಶ್‌ ಗೋಯಲ್‌ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].

ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುವಂತೆ ನರೇಶ್‌ ಅವರಿಗೆ ವಿಶೇಷ ನ್ಯಾಯಾಧೀಶ ಎಂ ಜಿ ದೇಶಪಾಂಡೆ ಅವರು ಅನುಮತಿಸಿದರಾದರೂ ವೈದ್ಯಕೀಯ ಆಧಾರದಲ್ಲಿ ಶಾಶ್ವತ ಜಾಮೀನು ನೀಡಲು ನಿರಾಕರಿಸಿದರು.

“ಗೋಯಲ್ ಅವರ ಆಸ್ಪತ್ರೆ ದಾಖಲಾತಿ ಮುಂದುವರೆಯಬೇಕು. ಅವರು ಗುಣಮುಖರಾಗುವುದಕ್ಕಾಗಿ ಮುಂಬೈನ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿರುವ ಕ್ಯಾನ್ಸರ್ ತಜ್ಞರೊಂದಿಗೆ ಸಮಾಲೋಚಿಸಿ ಅಭಿಪ್ರಾಯ ಪಡೆಯಬಹುದು, ಇಲ್ಲವೇ ಇ ಡಿ ಗೋಯಲ್ ಅವರ ಎಲ್ಲಾ ವೈದ್ಯಕೀಯ ದಾಖಲೆಗಳೊಂದಿಗೆ ಆಸ್ಪತ್ರೆಯನ್ನು ಸಂಪರ್ಕಿಸಬಹುದು . ಟಾಟಾ ಆಸ್ಪತ್ರೆಯ ವೈದ್ಯರು ಗೋಯಲ್‌ ಅವರಿಗೆ ದೈಹಿಕ ಪರೀಕ್ಷೆಯ ಅಗತ್ಯವಿದೆ ಎನ್ನುವುದಾದರೆ ಆ ಹೊಸ ಪರೀಕ್ಷೆಗಳನ್ನು ಇ ಡಿ ವಿರೋಧಿಸುವಂತಿಲ್ಲ ಮತ್ತು ಈ ಸಂಬಂಧ ಎಲ್ಲರಿಗೂ ಅದು ಸಹಕರಿಸಬೇಕು” ಎಂದು ನ್ಯಾಯಾಲಯ ತಾಕೀತು ಮಾಡಿದೆ. ವಿವರವಾದ ಆದೇಶ ಇನ್ನಷ್ಟೇ ದೊರೆಯಬೇಕಿದೆ.

ಸಾಲ ಸುಸ್ತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ನರೇಶ್‌ ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಅದನ್ನು ಹೈಕೋರ್ಟ್‌ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರು ಸೆಷನ್ಸ್‌ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.

ಜನವರಿ 6 ರಂದು, ಗೋಯಲ್ ವಿಶೇಷ ನ್ಯಾಯಾಲಯದ ಮುಂದೆ ಹತಾಶೆ ವ್ಯಕ್ತಪಡಿಸುತ್ತಾ ತನಗೆ ಯಾವುದೇ ಚಿಕಿತ್ಸೆ ನೀಡದಂತೆ ಕೋರಿದ್ದರು. ತಾನು ಎಲ್ಲಾ ಭರವಸೆ ಕಳೆದುಕೊಂಡಿರುವೆ, ತನ್ನನ್ನು ಜೈಲಿನಲ್ಲೇ ಸಾಯಲು ಬಿಡಿ ಎಂದಿದ್ದರು. ನಂತರ, ಜನವರಿ 9ರಂದು, ವಿಶೇಷ ನ್ಯಾಯಾಧೀಶರು ವೈದ್ಯಕೀಯ ತಪಾಸಣೆಗಾಗಿ ಖಾಸಗಿ ವೈದ್ಯರನ್ನು ಸಂಪರ್ಕಿಸುವಂತೆ ಗೋಯಲ್‌ ಅವರಿಗೆ ಅನುಮತಿ ನೀಡಿದ್ದರು.

ತನ್ನ ದೇಹದಲ್ಲಿ ಮಾರಣಾಂತಿಕ ಗಡ್ಡೆಗಳು ಬೆಳೆದಿರುವುದು ವೈದ್ಯಕೀಯ ವರದಿಗಳಲ್ಲಿ ಕಂಡುಬಂದಿರುವುದರಿಂದ ತನಗೆ ವೈದ್ಯಕೀಯ ನೆಲೆಯಲ್ಲಿ ಮಧ್ಯಂತರ ಜಾಮೀನು ನೀಡುವಂತೆ ಗೋಯಲ್‌ ಕೋರಿದ್ದರು.

ಫೆಬ್ರವರಿ 29ರಂದು ಅವರ ಮಧ್ಯಂತರ ಅರ್ಜಿಯನ್ನು ತಿರಸ್ಕರಿಸಲಾಯಿತಾದರೂ ಕ್ಯಾನ್ಸರ್ ಚಿಕಿತ್ಸೆ ಪಡೆಯಲು ನರೇಶ್ ಅವರನ್ನು ಎರಡು ತಿಂಗಳ ಕಾಲ ಆಸ್ಪತ್ರೆಗೆ ದಾಖಲಿಸಲು ನ್ಯಾಯಾಧೀಶ ದೇಶಪಾಂಡೆ ಅನುಮತಿ ನೀಡಿದರು.

ಇದೀಗ, ಅವರ ವೈದ್ಯಕೀಯ ಜಾಮೀನು ಅರ್ಜಿಯನ್ನು ಬುಧವಾರ ತಿರಸ್ಕರಿಸಲಾಗಿದೆ. ಆದರೂ ಗೋಯಲ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಮುಂದುವರಿಸಲು ಅನುಮತಿಸಲಾಗಿದೆ.

ಅರ್ಹತೆಯ ಮೇಲೆ ಜಾಮೀನು ಕೋರಿ ಗೋಯಲ್ ಅವರು ಸಲ್ಲಿಸಿರುವ ಅರ್ಜಿ ಇನ್ನೂ ಬಾಕಿ ಇದೆ. ಅದನ್ನು ವಿಶೇಷ ನ್ಯಾಯಾಲಯ ಏಪ್ರಿಲ್ 22, 2024ರಂದು ವಿಚಾರಣೆ ನಡೆಸಲಿದೆ.