Sanjay Raut, ED  Facebook
ಸುದ್ದಿಗಳು

ಅಕ್ರಮ ಹಣ ವರ್ಗಾವಣೆ: ಶಿವಸೇನಾ ಸಂಸದ ಸಂಜಯ್ ರಾವುತ್ ಅವರನ್ನು ಆ. 4ರವರೆಗೆ ಇ ಡಿ ವಶಕ್ಕೆ ಒಪ್ಪಿಸಿದ ಮುಂಬೈ ನ್ಯಾಯಾಲಯ

ಮುಂಬೈನ ಪತ್ರಾ ಚಾಲ್ ಭೂ ಹಗರಣ ಹಾಗೂ ರಾವುತ್ ಪತ್ನಿ ಮತ್ತು ಗೆಳೆಯನನ್ನು ಒಳಗೊಂಡ ವಹಿವಾಟುಗಳ ಕುರಿತಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾವತ್ ಅವರನ್ನು ವಿಚಾರಣೆಗೆ ಕರೆಸಲಾಗಿತ್ತು.

Bar & Bench

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಸಂಸದ ಸಂಜಯ್ ರಾವುತ್ ಅವರನ್ನು ಮುಂಬೈ ವಿಶೇಷ ನ್ಯಾಯಾಲಯವೊಂದು ಆಗಸ್ಟ್ 4ರವರೆಗೆ ಜಾರಿ ನಿರ್ದೇಶನಾಲಯದ (ಇ ಡಿ) ವಶಕ್ಕೆ ಒಪ್ಪಿಸಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ ಜಿ ದೇಶಪಾಂಡೆ ತನಿಖೆಗಾಗಿ 8 ದಿನಗಳ ಕಾಲ ರಾವುತ್‌ ಅವರನ್ನು ವಶಕ್ಕೆ ಕೋರಿ ಇ ಡಿ ಮಾಡಿದ್ದ ಮನವಿಯನ್ನು ತಿರಸ್ಕರಿಸಿ, ಬದಲಿಗೆ ಆಗಸ್ಟ್ 4ರವರೆಗೆ ವಶಕ್ಕೆ ನೀಡಿ ಆದೇಶಿಸಿದರು.

ರಾವುತ್ ಹೃದ್ರೋಗಿಯಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಾಲಯ ತಡರಾತ್ರಿಯವರೆಗೆ ಅವರನ್ನು ವಿಚಾರಣೆ ನಡೆಸುವ ಬದಲು ಸ್ವಲ್ಪ ವಿಶ್ರಾಂತಿ ನೀಡಬಹುದು ಎಂದು ಅಭಿಪ್ರಾಯಪಟ್ಟಿತು.

ಮುಂಬೈನ ಪತ್ರಾ ಚಾಲ್‌ ಭೂ ಹಗರಣ ಹಾಗೂ ರಾವುತ್ ಪತ್ನಿ ವರ್ಷಾ ಮತ್ತು ಗೆಳೆಯನನ್ನು ಒಳಗೊಂಡ ವಹಿವಾಟುಗಳ ಕುರಿತಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದ ರಾವುತ್ ಅವರನ್ನು ಇ ಡಿ ನಿನ್ನೆ (ಭಾನುವಾರ) ಸಂಜೆ ಬಂಧಿಸಿತ್ತು. ಸಂಜಯ್‌ ನಿಕಟವರ್ತಿ ಪ್ರವೀಣ್‌ ರಾವುತ್‌ ಅವರನ್ನು ಬಂಧಿಸಿತ್ತು. ತನಿಖೆಯ ಭಾಗವಾಗಿ ಏಪ್ರಿಲ್‌ನಲ್ಲಿ ರಾವುತ್ ಅವರ ಪತ್ನಿ ಮತ್ತು ಅವರ ಇಬ್ಬರು ಸಹಚರರ 11.15 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು. ಅಲಿಬಾಗ್‌ ಭೂ ಹಗರಣಕ್ಕೆ ಸಂಬಂಧಿಸಿದಂತೆಯೂ ತನಿಖೆ ನಡೆಯುತ್ತಿದೆ.

ಅಕ್ರಮ ಹಣ ವರ್ಗಾವಣೆ ಕಾಯಿದೆ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ಇತ್ತೀಚಿನ ತೀರ್ಪುಗಳನ್ನು ಅವಲಂಬಿಸಿ ವಾದ ಮಂಡಿಸಿದ ಜಾರಿ ನಿರ್ದೇಶನಾಲಯದ ಪರ ವಕೀಲ ಹಿತೆನ್‌ ವೆಣೆಗಾಂವ್‌ಕರ್‌ “ರಾವುತ್ ಸೂಕ್ತ ರೀತಿಯಲ್ಲಿ ವಿಚಾರಣೆಗೆ ಹಾಜರಾಗಲಿಲ್ಲ. ಸಮನ್ಸ್‌ ಆದೇಶ ಪಾಲಿಸಲಿಲ್ಲ. ಅಲ್ಲದೆ ನಿರ್ಣಾಯಕ ಸಾಕ್ಷಿಗಳನ್ನು ತಿರುಚಿದರು. ತನಿಖೆ ನಡೆಯುತ್ತಿರುವುದರಿಂದ ವಿವರಗಳನ್ನು ಒದಗಿಸಲಾಗುವುದು” ಎಂದರು.

ರಾವುತ್‌ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಅಶೋಕ್‌ ಮುಂಡರಗಿ ರಿಮಾಂಡ್ ಅರ್ಜಿಯಲ್ಲಿನ ಎಲ್ಲಾ ಆರೋಪಗಳು ಅಸ್ಪಷ್ಟವಾಗಿದ್ದು, ರಾಜಕೀಯ ದ್ವೇಷದಿಂದ ಮೊಕದ್ದಮೆ ಹೂಡಲಾಗಿದೆ. 2018ರ ಪ್ರಕರಣವನ್ನು ರಾಜಕೀಯ ಬದಲಾವಣೆಗಳ ಕಾರಣಕ್ಕೆ ಮುನ್ನೆಲೆಗೆ ತರಲಾಗಿದೆ. ” ಎಂದರು. ಅಲ್ಲದೆ ಸಂಜಯ್‌ ರಾವುತ್‌ ತನಿಖೆಯಿಂದ ತಪ್ಪಿಸಿಕೊಳ್ಳುವುದಿಲ್ಲ ಎಂಬ ಅಂಶಗಳನ್ನು ಆಧಾರಸಹಿತವಾಗಿ ವಿವರಿಸಿದರು.