Mumbai Sessions Court and Couple  
ಸುದ್ದಿಗಳು

ಪತಿಗಿಂತ ಹೆಚ್ಚು ಸಂಪಾದನೆ: ಪತ್ನಿಯ ಜೀವನಾಂಶ ರದ್ದುಗೊಳಿಸಿದ ಮುಂಬೈ ನ್ಯಾಯಾಲಯ

ಕೌಟುಂಬಿಕ ಹಿಂಸಾಚಾರದ ದೂರು ದಾಖಲಿಸುವಾಗ ಪತ್ನಿಯ ಒಟ್ಟು ವಾರ್ಷಿಕ ಆದಾಯ ₹ 89 ಲಕ್ಷ ಇದ್ದು ಪತಿ ₹ 3.5 ಲಕ್ಷ ಸಂಪಾದಿಸುತ್ತಿದ್ದರು ಎಂಬುದನ್ನು ನ್ಯಾಯಾಲಯ ಗಮನಿಸಿದೆ.

Bar & Bench

ಪತಿಗಿಂತಲೂ ಹೆಂಡತಿ ಗಣನೀಯ ಪ್ರಮಾಣದಲ್ಲಿ ಆದಾಯ ಗಳಿಸುತ್ತಿರುವ ಹಿನ್ನೆಲೆಯಲ್ಲಿ ಮುಂಬೈನ ಸೆಷನ್ಸ್‌ ನ್ಯಾಯಾಲಯ ಪರಿತ್ಯಕ್ತ ಪತ್ನಿಗೆ ಪತಿ ₹ 10,000 ಜೀವನಾಂಶ ನೀಡಬೇಕೆಂದು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ಈಚೆಗೆ ರದ್ದುಗೊಳಿಸಿದೆ.

ಜೀವನಾಂಶ ನೀಡುವುದರ ಗುರಿ ವಿವಾಹ ವೈಫಲ್ಯದಿಂದಾಗಿ ಸಂಗಾತಿಯನ್ನು ನಿರ್ಗತಿಕ ಅಥವಾ ಅಲೆಮಾರಿಯನ್ನಾಗಿ ಮಾಡದಂತೆ ನೋಡಿಕೊಳ್ಳುವುದಾಗಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್‌ ಬಿ ಪವಾರ್ ತಿಳಿಸಿದ್ದಾರೆ.

ನಿರ್ವಹಣಾ ಮೊತ್ತ ನಿರ್ಧರಿಸಲು ಹೆಂಡತಿಯ ಸಮಂಜಸ ಅಗತ್ಯಗಳು, ಆಕೆ ಸ್ವತಂತ್ರ ಆದಾಯ ಮೂಲ ಹಾಗೂ ಗಂಡನ ಆರ್ಥಿಕ ಸಾಮರ್ಥ್ಯ ಇತ್ಯಾದಿ ಅಂಶಗಳು ಅಗತ್ಯವಾಗಿರುತ್ತವೆ. ಆದರೆ, ಪ್ರಸ್ತುತ ಪ್ರಕರಣದಲ್ಲಿ, ಪತ್ನಿ ಮತ್ತು ಪತಿ ಗಳಿಸುವ ಆದಾಯದ ನಡುವಿನ ವ್ಯತ್ಯಾಸ  ಅಗಾಧವಾಗಿದ್ದು ಪತ್ನಿ ತನ್ನ ಪತಿಗಿಂತ ಹೆಚ್ಚು ಸಂಪಾದಿಸುತ್ತಾಳೆ ಎಂದು ನ್ಯಾಯಾಲಯ ನುಡಿದಿದೆ.

“ಎರಡೂ ಪಕ್ಷಕಾರರ ನಡುವಿನ ಆದಾಯ ಅಸಮಾನತೆಯಿಂದ ಕೂಡಿದ್ದು ಪತ್ನಿ ವ್ಯಾಪಾರ ನಡೆಸುತ್ತಿದ್ದು ಆಕೆಯ 2020-2021ರ ವಾರ್ಷಿಕ ಆದಾಯ ₹ 89,35,720 ಎಂದು ತಿಳಿದು ಬಂದಿದೆ. ಗಂಡನ ಆದಾಯ ಸುಮಾರು ₹3,50,000 ಇದ್ದು ಅದೂ ಕೂಡ ಪತ್ನಿಯ ವ್ಯವಹಾರದಿಂದ ದೊರೆತ ಸಂಬಳವಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಈ ಹಿನ್ನೆಲೆಯಲ್ಲಿ ಹೆಂಡತಿ ಆರ್ಥಿಕವಾಗಿ ಸದೃಢವಾಗಿದ್ದು ತನ್ನನ್ನು ಸಲಹಿಕೊಳ್ಳಬಲ್ಲ ಸ್ವತಂತ್ರ ಆದಾಯ ಮೂಲ ಹೊಂದಿದ್ದಾರೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಜೀವನಾಂಶ ಆದೇಶವನ್ನು ರದ್ದುಗೊಳಿಸಿದೆ.