ರಾಷ್ಟ್ರಗೀತೆಗೆ ಅಗೌರವ ತೋರಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯವು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮಂಗಳವಾರ ಸಮನ್ಸ್ ಜಾರಿ ಮಾಡಿದೆ. ಭಾರತೀಯ ಜನತಾ ಪಕ್ಷದ ಮುಂಬೈ ಕಾರ್ಯದರ್ಶಿ ವಿವೇಕಾನಂದ ಗುಪ್ತಾ ಅವರು ಸಲ್ಲಿಸಿರುವ ಕ್ರಿಮಿನಲ್ ದೂರಿಗೆ ಸಂಬಂಧಿಸಿದಂತೆ ಮಮತಾ ಅವರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ಮುಂಬೈನ ಕಫ್ ಪರೇಡ್‌ನ ಯಶ್ವಂತ್‌ರಾವ್ ಚವಾಣ್ ಸಭಾಂಗಣದಲ್ಲಿ ಏರ್ಪಡಿಸಿಲಾಗಿದ್ದ ಸಮಾರಂಭವೊಂದರಲ್ಲಿ ಬ್ಯಾನರ್ಜಿ ಅವರು ಕುಳಿತಿರುವ ಭಂಗಿಯಲ್ಲಿಯೇ ರಾಷ್ಟ್ರಗೀತೆಯನ್ನು ಹಾಡಿದರು. ಆನಂತರ ಅವರು ಎರಡು ಚರಣಗಳನ್ನು ನಿಂತು ಹಾಡಿದರು. ಅಂತಿಮವಾಗಿ ಅದನ್ನು ಮಧ್ಯದಲ್ಲಿಯೇ ನಿಲ್ಲಿಸಿ ಸ್ಥಳದಿಂದ ಹೊರನಡೆದರು ಎಂದು ಗುಪ್ತಾ ಅವರು ತಮ್ಮ ದೂರಿನಲ್ಲಿ ಆಪಾದಿಸಿದ್ದಾರೆ.
ಮಮತಾ ಅವರ ಈ ನಡೆಯು ರಾಷ್ಟ್ರಗೀತೆಗೆ ಅವಮಾನ ಮಾಡುವಂತಹುದಾಗಿದ್ದು, ರಾಷ್ಟ್ರಗೌರವದ ಅಪಮಾನ ನಿವಾರಣೆ ಅಧಿನಿಯಮ, 1971ರ ಅಡಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಹೇಳಿದ್ದಾರೆ. ಗುಪ್ತಾ ಅವರು ಕಫ್ ಪರೇಡ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದರು. ಅದರೆ, ಪೊಲೀಸರು ದೂರಿನ ಆಧಾರದಲ್ಲಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.
ಪ್ರಕರಣವನ್ನು ಆಲಿಸಿದ ಹಾಗೂ ಈ ಕುರಿತಾದ ವಿಡಿಯೊ ಸಾಕ್ಷ್ಯಗಳನ್ನು ಪರಿಶೀಲಿಸಿದ ಮ್ಯಾಜಿಸ್ಟ್ರೇಟ್ ಪಿ ಐ ಮೊಕಾಶಿ ಅವರು, ರಾಷ್ಟ್ರಗೌರವದ ಅಪಮಾನ ನಿವಾರಣೆ ಅಧಿನಿಯಮ, 1971ರ ಸೆಕ್ಷನ್ 3ರ ಅಡಿ ಮಮತಾ ಅವರು ಅಪರಾಧ ಎಸಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ಹೇಳಿ ಮಾರ್ಚ್ 2, 2022ರಂದು ಮಮತಾ ಬ್ಯಾನರ್ಜಿ ಅವರ ಖುದ್ದು ಹಾಜರಾತಿಗೆ ಸೂಚಿಸಿ ಸಮನ್ಸ್ ಜಾರಿಗೊಳಿಸಿದೆ.