Chief Justice Dipankar Datta and Justice GS Kulkarni  
ಸುದ್ದಿಗಳು

ವೈಯಕ್ತಿಕ ಭಿನ್ನಾಭಿಪ್ರಾಯ ನ್ಯಾಯಾಲಯಕ್ಕೆ ಏಕೆ ತರುವಿರಿ? ಕೇಂದ್ರ, ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ತರಾಟೆ

ಮುಂಬೈ ಮೆಟ್ರೋ ಕಾರ್ ಶೆಡ್ ನಿರ್ಮಾಣ ಸ್ಥಳದ ವಿವಾದಕ್ಕೆ ಅಂತ್ಯ ಹಾಡುವಂತೆ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಗಳಿಗೆ ಸೂಚಿಸಿದ ನ್ಯಾಯಾಲಯ.

Bar & Bench

ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರ ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳಬೇಕು ಮತ್ತು ಮುಂಬೈ ಮೆಟ್ರೊ ನಿಲ್ದಾಣದ ಕಾರ್‌ ಶೆಡ್‌ ಅನ್ನು ನಗರದ ಕಾಂಜುರ್‌ಮಾರ್ಗ್ ಪ್ರದೇಶದಿಂದ ಕಳೆದ ವರ್ಷ ಅರಣ್ಯ ಭೂಮಿಯ ಭಾಗ ಎಂದು ಘೋಷಿಸಲಾದ ಆರೆ ಕಾಲೋನಿಗೆ ಸ್ಥಳಾಂತರಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಬೇಕು ಎಂದು ಬಾಂಬೆ ಹೈಕೋರ್ಟ್‌ ಸೂಚಿಸಿದೆ.

ಯೋಜನೆ ಸಾರ್ವಜನಿಕರಿಗೆ ಸಂಬಂಧಿಸಿದ್ದಾಗಿದ್ದು ಅಧಿಕಾರಿಗಳು ಹಿಂದಿನದನ್ನು ಮರೆತು ಸಾರ್ವಜನಿಕ ಸೇವೆಯತ್ತ ಗಮನ ಹರಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ ಎಸ್ ಕುಲಕರ್ಣಿ ಅವರಿದ್ದ ಪೀಠ ತಿಳಿಸಿತು.

ಮುಂಬೈ ಮೆಟ್ರೋಗಾಗಿ ಕಾರ್ ಶೆಡ್ ನಿರ್ಮಿಸುವ ಸ್ಥಳದ ವಿಚಾರದಲ್ಲಿ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರ ಒಮ್ಮತಕ್ಕೆ ಬಂದಿಲ್ಲ. ಈ ಪ್ರದೇಶದಲ್ಲಿ ಸಾವಿರಾರು ಮರಗಳನ್ನು ಕಡಿಯಲು ಆದೇಶಿಸಿದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ನಿರ್ಧರಿಸಿದಂತೆ ಆರೆ ಕಾಲೋನಿಯಲ್ಲಿ ಯೋಜನೆಯನ್ನು ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ಬಯಸುತ್ತಿದೆ. ಆದರೆ, ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವು ಯೋಜನೆಯನ್ನು ಆರೆಯಿಂದ ಕಾಂಜುರ್‌ಮಾರ್ಗ್‌ಗೆ ಸ್ಥಳಾಂತರಿಸಲು ನಿರ್ಧರಿಸಿತ್ತು.

ಕೇಂದ್ರ ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್, ತಾಂತ್ರಿಕ ಸಮಸ್ಯೆಗಳು ಉದ್ಭವಿಸಿದ್ದು, ಹೀಗಾಗಿ ಯೋಜನೆಗೆ ತಡೆ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಆದರೆ ಮುಖ್ಯ ನ್ಯಾಯಮೂರ್ತಿ ಅವರು “ಏನು ನಡೆಯುತ್ತಿದೆ ಎಂದು ನಮಗೆ ತಿಳಿದಿದೆ... ನಾವೆಲ್ಲರೂ ಸಾರ್ವಜನಿಕರ ಸೇವೆಗೆ ಬಂದಿದ್ದೇವೆ. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ನ್ಯಾಯಾಲಯಕ್ಕೆ ಏಕೆ ತರಬೇಕು? ಎರಡೂ ಸರ್ಕಾರಗಳು ತಮ್ಮ ಸಮಸ್ಯೆಗಳನ್ನು ನ್ಯಾಯಾಲಯದ ಹೊರಗೆ ಏಕೆ ಪರಿಹರಿಸಿಕೊಳ್ಳಬಾರದು?" ಎಂದು ಪ್ರಶ್ನಿಸಿದರು.

ಈ ವೇಳೆ ಎಸ್‌ಜಿ ಅವರು ಅಂತಹ ಯಾವುದೇ ಭಿನ್ನಾಭಿಪ್ರಾಯಗಳು ಕೇಂದ್ರ ಹಾಗೂ ರಾಜ್ಯದ ನಡುವೆ ಇಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.