ಮುಂಬೈನ ಬಾಂದ್ರಾ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ ನಟ ಶಾರುಖ್ ಖಾನ್‌ಗೆ ಜೀವ ಬೆದರಿಕೆ ಹಾಕಿದ್ದ ಛತ್ತೀಸ್‌ಗಢದ ವಕೀಲನೊಬ್ಬನನ್ನು ಮುಂಬೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ನವೆಂಬರ್ 5 ರಂದು ಬೆದರಿಕೆ ಕರೆ ಮಾಡಿದ್ದ ವಕೀಲ ಫೈಜಾನ್ ಖಾನ್ ₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಎಂದು ತಿಳಿದುಬಂದಿದೆ, ಅದೇ ದಿನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಕರೆಯನ್ನು ಕಾನ್‌ಸ್ಟೆಬಲ್ ಸಂತೋಷ್ ಘೋಡ್ಕೆ ಸ್ವೀಕರಿಸಿದ್ದರು.
ಬಾಂದ್ರಾದ ಬ್ಯಾಂಡ್‌ಸ್ಟಾಂಡ್ ಬಳಿಯ ಮನ್ನತ್ ಬಂಗಲೆಯಲ್ಲಿರುವ ಶಾರೂಖ್ ಖಾನ್ ನನಗೆ 50 ಲಕ್ಷ ರೂಪಾಯಿ ನೀಡದಿದ್ದರೆ ಆತನನ್ನು ಕೊಲ್ಲುವುದಾಗಿ ಆರೋಪಿಯು ಕಾನ್‌ಸ್ಟೇಬಲ್‌ಗೆ ದೂರವಾಣಿ ಮೂಲಕ ತಿಳಿಸಿದ್ದ.
ಕಾನ್‌ಸ್ಟೇಬಲ್ ಆರೋಪಿಯ ಗುರುತು ಮತ್ತು ವಿಳಾಸದ ಕುರಿತು ಪ್ರಶ್ನಿಸಿದಾಗ ಆತ “ಅದರ ಅಗತ್ಯವಿಲ್ಲ, ಬೇಕಿದ್ದರೆ ನನ್ನ ಹೆಸರನ್ನು ಹಿಂದೂಸ್ತಾನಿ ಎಂದು ಬರೆದುಕೊಳ್ಳಬಹುದು” ಎಂದಿದ್ದ.
ಕರೆಯ ಬೆನ್ನತ್ತಿದ್ದ ಮುಂಬೈ ಪೊಲೀಸರು ನವೆಂಬರ್ 7 ರಂದು ರಾಯಪುರಕ್ಕೆ ದೌಡಾಯಿಸಿದ್ದರು. ಫೈಜಾನ್ ಖಾನ್ ಸಿಕ್ಕನಾದರೂ ನವೆಂಬರ್ 2ರಂದೇ ತನ್ನ ಫೋನ್ ಕಳೆದುಹೋಗಿದ್ದು ಅಪರಿಚಿತರು ಬೆದರಿಕೆ ಹಾಕಿದ್ದಾರೆ ಎಂದಿದ್ದ.
ಮುಂಬೈ ಪೊಲೀಸರೆದುರು ಹಾಜರಾಗಲು ಫೈಜಾನ್ ನಿರಾಕರಿಸಿದ್ದ. ಮಂಗಳವಾರ ರಾಯ್‌ಪುರದ ಪಾಂಡ್ರಿ ಪ್ರದೇಶದಲ್ಲಿ ಆತನನ್ನು ಬಂಧಿಸಲಾಗಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಬೆದರಿಕೆಗಳೊಂದಿಗೆ ಈ ಬೆದರಿಕೆಯನ್ನು ಆರಂಭದಲ್ಲಿ ತಳಕು ಹಾಕಲಾಗಿತ್ತು.