ಬೀದಿ ನಾಯಿಗಳ ದಾಳಿಯಿಂದ ಜನರು ಗಾಯಗೊಂಡರೆ ಅಥವಾ ಸಾವಿಗೀಡಾದರೆ ಸ್ಥಳೀಯ ಸಂಸ್ಥೆಗಳು ಹೊಣೆಯಾಗುತ್ತವೆ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಮಹತ್ವದ ಆದೇಶ ಮಾಡಿದೆ. ನ್ಯಾಯಾಲಯವು ಹಾಲಿ ಆದೇಶದಲ್ಲಿ ಹೇಳಿರುವಂತೆ ಬೀದಿ ನಾಯಿಗಳ ದಾಳಿಯಿಂದ ಹಾನಿಯಾದರೆ ಸಂಬಂಧಪಟ್ಟ ಜಿಲ್ಲಾ ಪಂಚಾಯಿತಿ, ಜಿಲ್ಲಾ ದಂಡಾಧಿಕಾರಿ ಮತ್ತು ಗ್ರಾಮ ಪಂಚಾಯಿತಿ ಹೊಣೆ ಹೊರಬೇಕಿದೆ.
ಬೀದಿ ನಾಯಿಗಳ ದಾಳಿಯಿಂದ ಸಾವನ್ನಪ್ಪಿದ ಎರಡು ವರ್ಷದ ಗಂಡು ಮಗುವನ್ನು ಕಳೆದುಕೊಂಡಿದ್ದ ಬೆಳಗಾವಿಯ ಬಾಳೆಕುಂದ್ರಿ ನಿವಾಸಿ ಯೂಸುಬ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ.
ಬೀದಿ ನಾಯಿಗಳ ದಾಳಿಯಿಂದ ಸಾವನ್ನಪ್ಪಿದ ಬಾಲಕನ ಕುಟುಂಬಕ್ಕೆ ಒಂದು ತಿಂಗಳ ಒಳಗೆ 10 ಲಕ್ಷ ರೂಪಾಯಿ ಪರಿಹಾರ ಮೊತ್ತದ ಜೊತೆಗೆ ವಾರ್ಷಿಕ ಶೇ. 6ರಷ್ಟು ಬಡ್ಡಿಯನ್ನು 2018ರ ನವೆಂಬರ್ 29ರಿಂದ ಅನ್ವಯವಾಗುವಂತೆ ಪಾವತಿ ಮಾಡಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ. ಅಲ್ಲದೇ, ಈಗಾಗಲೇ ಪರಿಹಾರದ ರೂಪದಲ್ಲಿ ಸಾವನ್ನಪ್ಪಿದ ಬಾಲಕನ ಕುಟುಂಬಕ್ಕೆ ನೀಡಲಾಗಿರುವ 1.5 ಲಕ್ಷ ರೂಪಾಯಿಯನ್ನು ಕಡಿತ ಮಾಡಬಹುದು ಎಂದು ಆದೇಶದಲ್ಲಿ ಹೇಳಲಾಗಿದೆ.
ಸಾವನ್ನಪ್ಪಿದ ಬಾಲಕನಿಗೆ ಚಿಕಿತ್ಸೆಗಾಗಿ ವೆಚ್ಚ ಮಾಡಲಾದ ವೈದ್ಯಕೀಯ ಬಿಲ್‌ಗಳನ್ನು ಬೆಳಗಾವಿ ಜಿಲ್ಲಾ ಪಂಚಾಯಿತಿಗೆ ಅರ್ಜಿದಾರರು ಸಲ್ಲಿಸಬಹುದಾಗಿದ್ದು, ಇದನ್ನು ಪರಿಗಣಿಸಿ ನಾಲ್ಕು ವಾರಗಳಲ್ಲಿ ಜಿಲ್ಲಾ ಪಂಚಾಯಿತಿಯು ವೆಚ್ಚದ ಹಣ ಪಾವತಿಸಬೇಕು. ಈ ಆದೇಶದ ಒಂದು ತಿಂಗಳ ಒಳಗೆ ಕಾನೂನು ಪ್ರಕ್ರಿಯೆಯ ಭಾಗವಾಗಿ 20 ಸಾವಿರ ರೂಪಾಯಿಯನ್ನು ಜಿಲ್ಲಾ ಪಂಚಾಯಿತಿಯು ಪಾವತಿಸಬೇಕು ಎಂದು ನ್ಯಾಯಾಲಯವು ಆದೇಶಿಸಿದ್ದು, 2022ರ ನವೆಂಬರ್ 7ರಂದು ಅನುಪಾಲನಾ ವರದಿ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ಆದೇಶ ಮಾಡಿದೆ.
“ಅಪ್ರಾಪ್ತ ಮಗು ಅಕಾಲಿಕವಾಗಿ ಸಾವನ್ನಪ್ಪಿದ್ದು, ಅರ್ಜಿದಾರರ ಅಂತ್ಯ ಕಾಲದಲ್ಲಿ ಮಗು ಅವರಿಗೆ ನೆರವಾಗುವ ಸಾಧ್ಯತೆ ಮತ್ತು ಮಗುವಿನ ಪ್ರೀತಿ ಮತ್ತು ಬಾಂಧವ್ಯದ ನಷ್ಟ, ಅತ್ಯಂತ ಕ್ರೂರ ಮತ್ತು ಹೀನ ರೀತಿಯಲ್ಲಿ ಮಗು ಕಳೆದುಕೊಂಡಿರುವುದರಿಂದ ಕುಟುಂಬದ ಸದಸ್ಯರಿಗೆ ಆಗಿರುವ ನೋವನ್ನು ಪರಿಗಣಿಸಿ 10 ಲಕ್ಷ ರೂಪಾಯಿ ಪರಿಹಾರ ಪಾವತಿಸಲು ಆದೇಶ ಮಾಡಲಾಗಿದೆ” ಎಂದು ಪೀಠ ಆದೇಶದಲ್ಲಿ ವಿವರಿಸಿದೆ.
“ಸಮಾಜದಲ್ಲಿ ನಾಯಿಗಳಿಗೂ ಬದುಕುವ ಹಕ್ಕು ಇದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ನಾಯಿಗಳ ಮೇಲೆ ಕಲ್ಲಿನಿಂದ ದಾಳಿ ಮಾಡುವುದು, ಅವುಗಳನ್ನು ಥಳಿಸುವುದನ್ನು ನಿಲ್ಲಿಸಬೇಕು. ಆಟವಾಡಲು ಅಥವಾ ಬೀದಿ ನಾಯಿಗಳಿಗೆ ತಿನಿಸು ನೀಡಲು ಮಕ್ಕಳು ಬೀದಿ ನಾಯಿಗಳ ಬಳಿ ಹೋಗದಂತೆ, ಹಿರಿಯರು ಗಮನ ಹರಿಸಬೇಕು” ಎಂಬುದು ಸೇರಿದಂತೆ ಹಲವು ನಿರ್ದೇಶನಗಳನ್ನು ನ್ಯಾಯಾಲಯ ನೀಡಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರನ ಎರಡು ವರ್ಷದ ಮಗ ಅಬ್ಬಸಾಲಿ ಯೂಸುಬ್ ಸನಾದಿ 2018ರ ನವೆಂಬರ್ 29ರಂದು ಮನೆ ಹಿಂದೆ ಬಹಿರ್ದೆಸೆಗೆ ಹೋಗಿದ್ದನು. ಅಲ್ಲಿ ನಾಲ್ಕೈದು ನಾಯಿಗಳು ಏಕ ಕಾಲದಲ್ಲಿ ಮಗುವಿನ ಮೇಲೆ ದಾಳಿ ನಡೆಸಿ ಪಕ್ಕದ ಕೃಷಿ ಜಮೀನಿಗೆ ಎಳೆದೊಯಿದ್ದವು. ಘಟನೆಯಿಂದ ಮಗುವಿನ ಮುಖ, ತಲೆ ಮತ್ತು ತೊಡೆಯ ಭಾಗದಲ್ಲಿ ಗಂಭೀರ ಗಾಯವಾಗಿತ್ತು. ಕೂಡಲೇ ಮಗುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿತ್ತು.
ಘಟನೆ ನಂತರ ಬೆಳಗಾವಿಯ ಜಿಲ್ಲಾಡಳಿತದ ಅಧಿಕಾರಿಗಳು ಪರಿಹಾರ ಘೋಷಣೆ ಮಾಡಿದ್ದರು. ಆದರೆ, ಸೂಕ್ತ ಪರಿಹಾರ ನೀಡಿಲ್ಲ ಎಂದು ಆಕ್ಷೇಪಿಸಿ ಮಗುವಿನ ತಂದೆ ಯೂಸುಬ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, 25 ಲಕ್ಷ ರೂಪಾಯಿ ಪರಿಹಾರ ನೀಡಲು ಬೆಳಗಾವಿ ಜಿಲ್ಲಾಡಳಿತಕ್ಕೆ ಆದೇಶಿಸಬೇಕು. ಬೀದಿ ನಾಯಿಗಳ ಹಾವಳಿಯಿಂದ ಇಂತಹ ದುರ್ಘಟನೆ ಮರುಕಳಿಸದಂತೆ ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಪ್ರಾಧಿಕಾರಗಳು ಹೊರಡಿಸಿರುವ ಮಾರ್ಗಸೂಚಿಗಳು ಮತ್ತು ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿದ್ದರು.
ಬೀದಿ ನಾಯಿಗಳ ಸಂಖ್ಯೆ ನಿಯಂತ್ರಿಸಬೇಕು. ಪ್ರಾಣಿ ಜನನ ನಿಯಂತ್ರಣ ನಿಯಮಗಳ ಅಡಿ ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಮತ್ತು ಲಸಿಕೆಯನ್ನು ಪ್ರಾಣಿ ಕಲ್ಯಾಣ ಸಂಸ್ಥೆಗಳು ಮತ್ತು ಮೇಲ್ವಿಚಾರಣಾ ಸಮಿತಿಗಳು ಖಾತರಿಪಡಿಸಬೇಕು. ವಿಶೇಷವಾಗಿ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಈ ಕೆಲಸವಾಗಬೇಕು. ಅದಕ್ಕೆ ವಿಕೇಂದ್ರಿಕರಣ ವ್ಯವಸ್ಥೆಯಡಿ ಎನ್‌ಜಿಒ ಮತ್ತು ಇತರೆ ಸಂಸ್ಥೆಗಳನ್ನು ಬಳಸಿಕೊಳ್ಳಬೇಕು. ಈ ಸಂಬಂಧ ಕೈಗೊಂಡ ಕ್ರಮಗಳ ಕುರಿತು ಜಿಲ್ಲಾಧಿಕಾರಿಗಳ ಕಚೇರಿಗೆ ವರದಿ ಸಲ್ಲಿಸಬೇಕು.
ಪ್ರಾಣಿಗಳ ಜನನ ನಿಯಂತ್ರಣ ಕಾಯಿದೆಯ ನಿಯಮ 9 ಪ್ರಕಾರ ವಾಸಿಯಾಗದ ಕಾಯಿಲೆ ಅಥವಾ ಮಾರಣಾಂತಿಕ ಗಾಯಗಳಿಂದ ನರಳುತ್ತಿರುವ ಬೀದಿ ನಾಯಿಗಳಿಗೆ ತಜ್ಞ ಪಶು ವೈದ್ಯರಿಂದ ದಯಾ ಮರಣ ಕಲ್ಪಿಸಬೇಕು.
ಆಕ್ರಮಣಕಾರಿ ನಾಯಿಗಳ ಮತ್ತು ರೇಬಿಸ್ ರೋಗದಿಂದ ನರಳುತ್ತಿರುವ ನಾಯಿಗಳ ಕುರಿತು ದೂರುಗಳು ಬಂದರೆ ಸ್ಥಳೀಯ ಪೌರಾಡಳಿತ ಸಂಸ್ಥೆಗಳ ಶ್ವಾನ ದಳವು ಪರಿಶೀಲಿಸಬೇಕು. ನಾಯಿಗೆ ರೇಬಿಸ್ ಇದ್ದರೆ ಸಹಜ ಸಾವು ಬರುವವರೆಗೂ ಅದನ್ನು ಪ್ರತ್ಯೇಕವಾಗಿ ಇಡಬೇಕು.
ಬೀದಿ ನಾಯಿಗಳ ಕುರಿತು ನಾಗರಿಕರು ದೂರು ಸಲ್ಲಿಸಲು ದೂರು ಘಟಕ ಸ್ಥಾಪಿಸಬೇಕು.
ಜನ ವಸತಿ ಪ್ರದೇಶದಲ್ಲಿ ನಾಯಿಗಳು ಹಾವಳಿ ಹೆಚ್ಚಾಗದಂತೆ ಸಮರ್ಪಕವಾಗಿ ಕಸ ಸಂಗ್ರಹಿಸಿ ವಿಲೇವಾರಿ ಮಾಡಬೇಕು
ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿಗಳು ನಾಯಿ ದಾಳಿಗೆ ತುತ್ತಾದವರಿಗೆ ಪರಿಹಾರ ಕಲ್ಪಿಸಲು ಸೂಕ್ತ ಮಾರ್ಗಸೂಚಿ ರಚಿಸಬೇಕು.