Divorce 
ಸುದ್ದಿಗಳು

ಮನೆಯ ಮೆಟ್ಟಿಲಿನಿಂದ ಕೆಳಗೆ ತಳ್ಳಿ ಕೊಲೆಗೆ ಯತ್ನ: ಪತ್ನಿ ವಿರುದ್ಧ ಪತಿ ದಾಖಲಿಸಿರುವ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ಯೋಗೀಶ್‌ ಖುದ್ದು ಹಾಜರಾಗಿ “ಸ್ವಾಮಿ.. ಪತ್ನಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದರು. ಇದರಿಂದ ಆಶ್ಚರ್ಯಗೊಂಡ ಪೀಠವು “ಕೊಲೆ ಯತ್ನವೇ? ಯಾರ ಮೇಲೆ?” ಎಂದು ಪ್ರಶ್ನಿಸಿತು.

Bar & Bench

ಕೌಟುಂಬಿಕ ಕಲಹ ಇತ್ಯರ್ಥಕ್ಕಾಗಿ ಮಾತುಕತೆಗೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ ಮನೆಯ ಮೆಟ್ಟಿಲುಗಳ ಮೇಲಿಂದ ಕೆಳಗೆ ತಳ್ಳಿ ಪತಿ ಕೊಲೆಗೆ ಯತ್ನಿಸಿದ ಆರೋಪ ಸಂಬಂಧ ಮೇಲೆ ಮಹಿಳೆ ಮತ್ತವರ ಕುಟುಂಬದ ಏಳು ಮಂದಿ ಸದಸ್ಯರ ವಿರುದ್ಧ ಪತಿ ದಾಖಲಿಸಿದ್ದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಈಚೆಗೆ ತಡೆ ನೀಡಿದೆ.

ಕೊಲೆ ಯತ್ನ, ಜೀವ ಬೆದರಿಕೆ ಮತ್ತು ಅಕ್ರಮ ಕೂಟ, ಕಾನೂನುಬಾಹಿರ ಸಭೆ, ಹಲ್ಲೆ ಮತ್ತು ಮನೆಯ ಅತಿಕ್ರಮ ಪ್ರವೇಶ ಸೇರಿದಂತೆ ಹಲವು ಅಪರಾಧ ಕೃತ್ಯಗಳ ಸಂಬಂಧ ಪತಿ ದಾಖಲಿಸಿರುವ ಎಫ್‌ಐಆರ್‌ ಮತ್ತು ಅದಕ್ಕೆ ಸಂಬಂಧಿಸಿದ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಶಿವಮೊಗ್ಗದ ಲಕ್ಷ್ಮಿ (ಹೆಸರು ಬದಲಿಸಲಾಗಿದೆ-ದೂರುದಾರನ ಪತ್ನಿ) ಮತ್ತವರ ಕುಟುಂಬದ ಏಳು ಸದಸ್ಯರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಪತ್ನಿ ಪೂಜಾ ಅವರ ಪರ ವಕೀಲರು ಮತ್ತು ಪತಿ ಯೋಗೀಶ್‌ ಖುದ್ದಾಗಿ ಮಂಡಿಸಿದ ಪ್ರತಿವಾದ ಆಲಿಸಿದ ಪೀಠವು ಅರ್ಜಿದಾರರ ವಿರುದ್ಧದ ಎಫ್‌ಐಆರ್‌ ಮತ್ತು ವಿಚಾರಣಾಧೀನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಿ ಮಧ್ಯಂತರ ಆದೇಶ ಮಾಡಿತು.

ಯೋಗೀಶ್‌ ಖುದ್ದು ಹಾಜರಾಗಿ “ಸ್ವಾಮಿ.. ಪತ್ನಿ ಕೊಲೆ ಮಾಡಲು ಯತ್ನಿಸಿದ್ದಾರೆ ಎಂದರು. ಇದರಿಂದ ಆಶ್ಚರ್ಯಗೊಂಡ ಪೀಠವು “ಕೊಲೆ ಯತ್ನವೇ? ಯಾರ ಮೇಲೆ?” ಎಂದು ಪ್ರಶ್ನಿಸಿತು.

ಇದಕ್ಕೆ ಯೋಗೀಶ್‌ “ಸ್ವಾಮಿ.. ನನ್ನ ಮೇಲೆಯೇ. ಪತ್ನಿ ಒಮ್ಮೆ ನನ್ನನ್ನು ಮೆಟ್ಟಿಲುಗಳ ಮೇಲಿಂದ ಕೆಳಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದರು. ಘಟನೆಯಲ್ಲಿ ನನ್ನ ಎಡಗೈಗೆ ತೀವ್ರ ಗಾಯವಾಗಿತ್ತು. ಕೈಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡೆ. ಎರಡನೇ ಬಾರಿಗೆ ಅರ್ಜಿದಾರಾಗಿರುವ ಎಂಟು ಜನ ನನ್ನ ಮನೆಗೆ ಅತಿಕ್ರಮ ಪ್ರವೇಶ ಮಾಡಿ ನನ್ನ ಸಾಯಿಸಲು ಯತ್ನಿಸಿದರು. ಪತ್ನಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ನನ್ನ ಕೈಯನ್ನು ಪತ್ನಿ ಹಿಡಿದು ಎಳೆದಾಡಿದರು. ಪೊಲೀಸರು ಸಹ ಪೂರ್ಣವಾದ ಆರೋಪಪಟ್ಟಿ ಸಲ್ಲಿಸಿಲ್ಲ” ಎಂದು ತಿಳಿಸಿದರು.

ಅರ್ಜಿದಾರರ ಪರ ವಕೀಲರು “ಯೋಗೀಶ್‌ ಸುಳ್ಳು ಆರೋಪ ಮಾಡುತ್ತಿದ್ದಾರೆ. ಯೋಗೀಶ್‌ ವಿರುದ್ಧ ಅರ್ಜಿದಾರರು ಕೌಟುಂಬಿಕ ದೌರ್ಜನ್ಯ ಕಾಯಿದೆ ಸೇರಿದಂತೆ ವಿವಿಧ ಅಪರಾಧಗಳ ಸಂಬಂಧ ದೂರು ದಾಖಲಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಯೋಗೀಶ್‌ ತಮ್ಮ ಪತ್ನಿ ಮತ್ತವರ ಕುಟುಂಬ ಸದಸ್ಯರು (ಅರ್ಜಿದಾರರ) ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ” ಎಂದು ಪೀಠದ ಗಮನಕ್ಕೆ ತಂದರು.

ಆಗ ಮಧ್ಯಪ್ರವೇಶಿಸಿದ ಯೋಗೀಶ್‌ “ಸ್ವಾಮಿ.. ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ. ಸಾಕ್ಷ್ಯಗಳನ್ನೆಲ್ಲಾ ಬದಲಾಯಿಸಿದ್ದಾರೆ” ಎಂದು ದೂರಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ಅರ್ಜಿಗೆ ಮೊದಲು ನೀವು (ಯೋಗೀಶ್‌) ಆಕ್ಷೇಪಣೆ ಸಲ್ಲಿಸಿ. ನಂತರ ಪೂರ್ಣ ಪ್ರಮಾಣದ ವಿಚಾರಣೆ ನಡೆಸೋಣ. ಅಲ್ಲಿಯವರೆಗೆ ನಿಮ್ಮ ದೂರಿಗೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧದ ವಿಚಾರಣಾಧೀನ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಲಾಗುವುದು ಎಂದು ತಿಳಿಸಿ, ಮಧ್ಯಂತರ ಆದೇಶ ಮಾಡಿತು.

ಅರ್ಜಿದಾರರ ವಿರುದ್ಧ ಯೋಗೀಶ್‌ 2024ರ ನವೆಂಬರ್‌ 15ರದು ಶಿವಮೊಗ್ಗದ ತುಂಗಾ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣವು ಶಿವಮೊಗ್ಗದ 5ನೇ ಹೆಚ್ಚುವರಿ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.