Karnataka HC and Justice K Natarajan
Karnataka HC and Justice K Natarajan 
ಸುದ್ದಿಗಳು

81 ವರ್ಷದ ಅಪರಾಧಿಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ 2 ವರ್ಷ ಜೈಲು ಶಿಕ್ಷೆಯನ್ನು ಮೂರು ದಿನಕ್ಕೆ ಇಳಿಸಿದ ಹೈಕೋರ್ಟ್

Bar & Bench

ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಪ್ರಕರಣವೊಂದರಲ್ಲಿ 81 ವರ್ಷದ ಅಪರಾಧಿಗೆ ವಿಚಾರಣಾಧೀನ ನ್ಯಾಯಾಲಯ ವಿಧಿಸಿದ್ದ ಎರಡು ವರ್ಷ ಜೈಲು ಶಿಕ್ಷೆಯನ್ನು ಮೂರು ದಿನಕ್ಕೆ ಇಳಿಕೆ ಮಾಡಿರುವ ಹೈಕೋರ್ಟ್, ಅಪರಾಧಿಗೆ ಅಂಗನವಾಡಿ ಕೇಂದ್ರದಲ್ಲಿ ಒಂದು ವರ್ಷ ಸ್ವಯಂ ಸೇವಕನಾಗಿ ಕೆಲಸ ಮಾಡುವ ಶಿಕ್ಷೆ ವಿಧಿಸಿದೆ.

ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕರೋಪಾಡಿ ಗ್ರಾಮದ ಐತಪ್ಪ ನಾಯ್ಕ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ಆರ್ ನಟರಾಜ್ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಮಾನ್ಯ ಮಾಡಿದೆ.

ಅರ್ಜಿದಾರನ ವಯಸ್ಸನ್ನು ಪರಿಗಣಿಸಿ ಎರಡು ವರ್ಷ ಜೈಲು ಶಿಕ್ಷೆಯನ್ನು ಮಾರ್ಪಾಡು ಮಾಡಿ, ಮೂರು ದಿನಕ್ಕೆ ಇಳಿಸಿರುವ ಪೀಠವು ಕರೋಪಾಡಿ ಗ್ರಾಮದ ಮಿತನಡ್ಕ ಅಂಗನವಾಡಿ ಕೇಂದ್ರದಲ್ಲಿ ಯಾವುದೇ ವೇತನ ನಿರೀಕ್ಷಿಸದೆ ಒಂದು ವರ್ಷ ಸೇವೆ ಸಲ್ಲಿಸುವಂತೆ ಆದೇಶಿಸಿದೆ.

ಅರ್ಜಿದಾರನ ಆಧಾರ್ ಪ್ರತಿಯಲ್ಲಿರುವ ಜನ್ಮ ದಿನಾಂಕದಿಂದ ಅವರು 1942ರ ಏಪ್ರಿಲ್‌ 1ರಂದು ಜನಿಸಿದ್ದಾರೆ ಎನ್ನುವುದು ತಿಳಿದುಬಂದಿದೆ. ಅಪರಾಧಿ ತನ್ನ ತಪ್ಪನ್ನು ಒಪ್ಪಿಕೊಂಡು ಈಗಾಗಲೇ ಮೂರು ದಿನ ಸಾಧಾರಣ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಮಕ್ಕಳಿಲ್ಲದ 81 ವರ್ಷದ ಆತ ತನ್ನ ಪತ್ನಿಯನ್ನೂ ನೋಡಿಕೊಳ್ಳಬೇಕಿದೆ. ಸಾಮಾಜಿಕ ಸೇವೆ ಸಲ್ಲಿಸಲು ಸಿದ್ಧವಿರುವುದಾಗಿ ಆತನೇ ಒಪ್ಪಿಕೊಂಡಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ವಿಚಾರಣಾಧೀನ ನ್ಯಾಯಾಲಯ ನೀಡಿದ್ದ ಶಿಕ್ಷೆಯ ಪ್ರಮಾಣವನ್ನು ಮಾರ್ಪಾಡು ಮಾಡಲಾಗುತ್ತಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಐತಪ್ಪ ನಾಯ್ಕನಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಐದು ಸಾವಿರ ರೂಪಾಯಿ ದಂಡ ವಿಧಿಸಿ 2014ರ ಜುಲೈ 21ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹೊರಡಿಸಿದ್ದ ಆದೇಶ ರದ್ದುಪಡಿಸಿದ ಹೈಕೋರ್ಟ್, ಶಿಕ್ಷೆಯ ಪ್ರಮಾಣವನ್ನು ಮೂರು ದಿನಕ್ಕೆ ಇಳಿಕೆ ಮಾಡಿದೆ. ಅರ್ಜಿದಾರ ಈಗಾಗಲೇ ಮೂರು ದಿನ ಶಿಕ್ಷೆ ಅನುಭವಿಸಿರುವ ಹಿನ್ನೆಲೆಯಲ್ಲಿ, ಶಿಕ್ಷೆ ಪ್ರಮಾಣ ಹೊಂದಾಣಿಕೆಯಾಗಲಿದೆ ಎಂದಿರುವ ನ್ಯಾಯಾಲಯವು ಅರ್ಜಿದಾರ ಒಪ್ಪಿಕೊಂಡಿರುವಂತೆ ಅಂಗನವಾಡಿ ಕೇಂದ್ರದಲ್ಲಿ ಒಂದು ವರ್ಷ ಸ್ವಯಂಸೇವಕನಾಗಿ ಕೆಲಸ ಮಾಡಬೇಕು ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಅವರ ಜೀವಕ್ಕೆ ಅಪಾಯವಾಗುಂತೆ ಗಾಯಗೊಳಿಸಿದ್ದ ಆರೋಪದಲ್ಲಿ 2008ರಲ್ಲಿ ಐತಪ್ಪ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ್ದ ಬಂಟ್ವಾಳದ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರು ಐತಪ್ಪ ನಾಯ್ಕನನ್ನು ದೋಷಿ ಎಂದು ತೀರ್ಮಾನಿಸಿ, 2012ರ ಜುಲೈ 7ರಂದು ತೀರ್ಪು ನೀಡಿತ್ತಲ್ಲದೆ, ಆತನಿಗೆ ಮೂರು ದಿನ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಇದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ದಕ್ಷಿಣ ಕನ್ನಡದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಐತಪ್ಪ ನಾಯ್ಕನ ಶಿಕ್ಷೆಯ ಪ್ರಮಾಣವನ್ನು ಎರಡು ವರ್ಷಕ್ಕೆ ಹೆಚ್ಚಳ ಮಾಡಿ, ಐದು ಸಾವಿರ ರೂಪಾಯಿ ದಂಡ ವಿಧಿಸಿ, 2014ರ ಜುಲೈ 21ರಂದು ಆದೇಶಿಸಿತ್ತು.

ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಪ್ರಕರಣದಲ್ಲಿ ಅರ್ಜಿದಾರನ ವಯಸ್ಸನ್ನು ಪ್ರಮುಖವಾಗಿ ಪರಿಗಣಿಸಬೇಕಿದೆ. ಜತೆಗೆ, ಮಕ್ಕಳಿಲ್ಲದ ವೃದ್ದನೇ ತನ್ನ ಪತ್ನಿಯನ್ನೂ ನೋಡಿಕೊಳ್ಳಬೇಕಿದೆ. ಸಿವಿಲ್ ನ್ಯಾಯಾಲಯ ನೀಡಿದ್ದ ಮೂರು ದಿನ ಜೈಲು ಶಿಕ್ಷೆಯನ್ನು ಆತ ಈಗಾಗಲೇ ಅನುಭವಿಸಿದ್ದು, ದಂಡವನ್ನೂ ಪಾವತಿಸಿದ್ದಾರೆ. ತಪ್ಪು ಒಪ್ಪಿಕೊಂಡು ಸಾಮಾಜಿಕ ಸೇವೆ ಸಲ್ಲಿಸುವುದಕ್ಕೂ ಸಿದ್ಧರಿದ್ದಾರೆ. ಆದ್ದರಿಂದ, ಶಿಕ್ಷೆ ರದ್ದುಪಡಿಸಬೇಕು ಎಂದು ಐತಪ್ಪ ನಾಯ್ಕ ಪರ ವಕೀಲರು ಮನವಿ ಮಾಡಿದ್ದರು.