Karnataka High Court 
ಸುದ್ದಿಗಳು

ಮೈಸೂರಿನಲ್ಲಿ ಲೈಂಗಿಕ ಕಾರ್ಯಕರ್ತೆ ಹತ್ಯೆ: ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್‌

ದಂಡದ ಮೊತ್ತದ ಪೈಕಿ 35 ಸಾವಿರ ರೂಪಾಯಿಯನ್ನು ಮೃತ ಮಹಿಳೆಯ ಪುತ್ರನಿಗೆ ಪಾವತಿಸಬೇಕು. ಇನ್ನುಳಿದ 5 ಸಾವಿರ ರೂಪಾಯಿಯನ್ನು ರಾಜ್ಯ ಸರ್ಕಾರಕ್ಕೆ ಪಾವತಿ ಮಾಡುವಂತೆ ಸೂಚನೆ ನೀಡಿರುವ ನ್ಯಾಯಾಲಯ.

Bar & Bench

ದಶಕದ ಹಿಂದೆ ಮೈಸೂರಿನಲ್ಲಿ ಲೈಂಗಿಕ ಕಾರ್ಯಕರ್ತೆಯೊಬ್ಬರನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಅಪರಾಧಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಜೀವಾವಧಿ ಶಿಕ್ಷೆ ನೀಡಿ ಆದೇಶಿಸಿದೆ.

ಅತ್ಯಾಚಾರ, ದರೋಡೆ, ಕೊಲೆ ಆರೋಪದಲ್ಲಿ ಅಪರಾಧಿಯನ್ನು ಖುಲಾಸೆಗೊಳಿಸಿದ್ದ ಮೈಸೂರಿನ ಸತ್ರ​ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೈಸೂರಿನ ಲಷ್ಕರ್​  ಪೊಲೀಸ್​ ಠಾಣೆ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು  ನ್ಯಾಯಮೂರ್ತಿಗಳಾದ ಎಚ್​ ಬಿ ಪ್ರಭಾಕರ್​ ಶಾಸ್ತ್ರಿ ಮತ್ತು ಅನಿಲ್​ ಬಿ ಕಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಭಾಗಶಃ ಪುರಸ್ಕರಿಸಿದೆ.

ನ್ಯಾಯಾಲಯವು ಅತ್ಯಾಚಾರ ಪ್ರಕರಣದಿಂದ ಆರೋಪಿಯನ್ನು ಮುಕ್ತಗೊಳಿಸಿದ್ದು, ಕೊಲೆ ಮತ್ತು ದರೋಡೆ ಆರೋಪದಲ್ಲಿ ಶಿಕ್ಷೆ ವಿಧಿಸಿದೆ. ಕೊಲೆ ಆರೋಪಕ್ಕೆ ಜೀವಾವಧಿ ಶಿಕ್ಷೆಯ ಜೊತೆಗೆ 30 ಸಾವಿರ ರೂಪಾಯಿ ದಂಡ, ಕೊಲೆ ಮಾಡುವುದಕ್ಕೂ ಮುನ್ನ ಆಕೆಯನ್ನು ಅಪಹರಣ ಮಾಡಿದ್ದ ಆರೋಪದಲ್ಲಿ 7 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಎರಡು ಶಿಕ್ಷೆಗಳೂ ಒಟ್ಟಿಗೆ ಜಾರಿಯಾಗಲಿವೆ. ದಂಡದ ಮೊತ್ತದ ಪೈಕಿ 35 ಸಾವಿರ ರೂಪಾಯಿಯನ್ನು ಮೃತ ಮಹಿಳೆಯ ಪುತ್ರನಿಗೆ ಪಾವತಿಸಬೇಕು. ಇನ್ನುಳಿದ 5 ಸಾವಿರ ರೂಪಾಯಿಯನ್ನು ರಾಜ್ಯ ಸರ್ಕಾರಕ್ಕೆ ಪಾವತಿ ಮಾಡುವಂತೆ ಸೂಚನೆ ನೀಡಿರುವ ಪೀಠವು ಮುಂದಿನ 45 ದಿನಗಳಲ್ಲಿ ವಿಚಾರಣಾಧೀನ ನ್ಯಾಯಾಲಯದ ಮುಂದೆ ಶರಣಾಗುವಂತೆ ದೋಷಿಗೆ ಸೂಚಿಸಿದೆ.

ಆರೋಪಿ ಗ್ರಾಹಕರಂತೆ ಲೈಂಗಿಕ ಕಾರ್ಯಕರ್ತೆಯನ್ನು ಲಾಡ್ಜ್‌ಗೆ ಕರೆದೊಯಿದ್ದು, ಆಕೆಯೂ ಕೂಡಾ ಆತನನ್ನು ಗ್ರಾಹಕನಂತೆ ಪರಿಗಣಿಸಿದ್ದಳು. ಆಕೆ ಸಾವಿಗೂ ಮುನ್ನಾ ಎಷ್ಟು ಬಾರಿ ಬಲವಂತದಿಂದ ಲೈಂಗಿಕತೆಗೆ ಒಳಗಾಗಿದ್ದಳು ಎಂಬುದಕ್ಕೆ ಪುರಾವೆ ಇಲ್ಲ. ಮೃತಪಟ್ಟಿರುವ ಮಹಿಳೆಯು ಲೈಂಗಿಕ ಕಾರ್ಯಕರ್ತೆ ಎಂಬುದಕ್ಕೆ ಆರೋಪಿಯು ಆಕೆಯನ್ನು ಕೊಲೆ ಮಾಡುವ ಮೊದಲು ಅತ್ಯಾಚಾರ ಮಾಡಿದ್ದಾನೆ ಎಂದು ತೀರ್ಮಾನಿಸುವುದು ಸುರಕ್ಷಿತವಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.

ಐಪಿಸಿ ಸೆಕ್ಷನ್ 302 ಮತ್ತು 397ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಕ್ಕೆ ಗುರಿಪಡಿಸಲು ಪ್ರಾಸಿಕ್ಯೂಷನ್ ಸಮರ್ಥವಾಗಿದ್ದರೂ, ಐಪಿಸಿ ಸೆಕ್ಷನ್ 376ರ  ಅಡಿ ಶಿಕ್ಷಾರ್ಹ ಅಪರಾಧವನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ಪೀಠ ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: 2010ರ ಸೆಪ್ಟೆಂಬರ್ 18ರಂದು ಸಂತ್ರಸ್ತೆ ಮೈಸೂರಿನ ಎಸ್‌ಆರ್ ರಸ್ತೆಯಲ್ಲಿ ಗ್ರಾಹಕರೊಂದಿಗೆ ವ್ಯವಹರಿಸುತ್ತಿರುವಾಗ  ಅಪರಾಧಿ ಗಿರೀಶ ಆಕೆಯನ್ನು ಆಟೊರಿಕ್ಷಾದಲ್ಲಿ ಸಬ್ ಅರ್ಬನ್ ಬಸ್ ನಿಲ್ದಾಣದ ಪಕ್ಕದಲ್ಲಿರುವ ಲಾಡ್ಜ್‌ಗೆ ಕರೆದೊಯ್ದಿದ್ದ. ದೇವಸ್ಥಾನಕ್ಕೆ ಬಂದಿದ್ದ ಪತಿ-ಪತ್ನಿ ಎಂದು ಪರಿಚಯಿಸಿಕೊಂಡು ಲಾಡ್ಜ್ ರಿಜಿಸ್ಟರ್‌ನಲ್ಲಿ ಹೆಸರನ್ನು ರವಿ ಎಂದು ನಮೂದು ಮಾಡಿ ಕೊಠಡಿ  ಪಡೆದುಕೊಂಡು ಅಂದು ರಾತ್ರಿ  ಕೊಠಡಿಗೆ ಆಹಾರ ಮತ್ತು ಪಾನೀಯಗಳನ್ನು ತರಿಸಿಕೊಂಡಿದ್ದರು.

ಸಂಭೋಗದ ಬಳಿಕ ಅಪರಾಧಿ ಗೀರೀಶ್​ ಮಹಿಳೆಯನ್ನು ಕತ್ತು ಹಿಸುಕಿ ಆಕೆಯ ಚಿನ್ನಾಭರಣಗಳು, ನೋಕಿಯಾ ಮೊಬೈಲ್ ಫೋನ್ ಮತ್ತು ಸ್ವಲ್ಪ ಹಣ ಕಸಿದು ಪರಾರಿಯಾಗಿದ್ದ. ಬಳಿಕ ಚಿನ್ನಾಭರಣಗಳನ್ನು ಗಿರಿವಿ ಇಟ್ಟು ಹಣ ಪಡೆದುಕೊಂಡಿದ್ದನು.

ಮರು ದಿನ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದ ಬಳಿಕ ಲಷ್ಕರ್‌​ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯ ವಿರುದ್ಧ  ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ್ದ ಮೈಸೂರಿನ ಏಳನೇ ಹೆಚ್ಚುವರಿ ಸತ್ರ ನ್ಯಾಯಾಧೀಶರು ಏಪ್ರಿಲ್ 25, 2016 ರಂದು ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್​ ಹೈಕೋರ್ಟ್ ಮೆಟ್ಟಿಲೇರಿತ್ತು.

Lashkar Police Station Vs K C Girisha.pdf
Preview