ಬೆಂಗಳೂರು ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರಮ್ಯಾ ಎಂಬ ಮಹಿಳೆಯ ಕೊಲೆ ಪ್ರಕರಣದಲ್ಲಿ ಮೊದಲ ಆರೋಪಿಯಾಗಿದ್ದ ಆಕೆಯ ಪತಿಗೆ ದೇವನಹಳ್ಳಿಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಮೃತ ಮಹಿಳೆಯ ಪತಿ ಎಂ ಅರುಣ್ ಕುಮಾರ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಕೆ ಎಸ್ ಮುದಗಲ್ ಮತ್ತು ಟಿ ವೆಂಟಕೇಶ್ ನಾಯಕ್ ನೇತೃತ್ವದ ವಿಭಾಗೀಯ ಪೀಠ ಈಚೆಗೆ ಪ್ರಕಟಿಸಿದೆ.
“ಪ್ರಕರಣ ಎಷ್ಟೇ ಗಂಭೀರವಾಗಿದ್ದರೂ ಕೇವಲ ಸಂಶಯವು ಸಾಕ್ಷ್ಯದ ಪರ್ಯಾಯ ಆಗಲಾರದು. ಸಾಂದರ್ಭಿಕ ಸಾಕ್ಷ್ಯಗಳ ಆಧಾರದಡಿ ದೋಷಾರೋಪಣೆ ಹೊರಿಸಲು ವಿಶ್ವಾಸಾರ್ಹ ಹಾಗೂ ದೃಢವಾದ ಸಾಕ್ಷ್ಯಗಳಿರಬೇಕು ಎಂಬುದು ಸ್ಥಾಪಿತ ತತ್ತ್ವ. ಹಾಗೆ ಸಾಬೀತಾದ ಸಂದರ್ಭಗಳು ಬೇರೆ ಯಾವುದೇ ಊಹೆಗೆ ಹೊಂದಿಕೊಳ್ಳುವಂತಿರಬಾರದು. ಆದ್ದರಿಂದ, ಸಾಂದರ್ಭಿಕ ಸಾಕ್ಷ್ಯಗಳನ್ನು ಮಾತ್ರವೇ ಆಧರಿಸಿ ಆರೋಪಿಯನ್ನು ದೋಷಿ ಎಂದು ನಿರ್ಧರಿಸುವಾಗ ವಿಚಾರಣಾಧೀನ ನ್ಯಾಯಾಲಯ ಅತ್ಯಂತ ಎಚ್ಚರಿಕೆ ವಹಿಸಬೇಕು. ಈ ನಿಟ್ಟಿನಲ್ಲಿ ಅರ್ಜಿದಾರರನ್ನು ದೋಷಿ ಎಂದು ತೀರ್ಮಾನಿಸುವಲ್ಲಿ ವಿಚಾರಣಾ ನ್ಯಾಯಾಲಯ ತಪ್ಪು ಎಸಗಿದೆ” ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.
ಐಪಿಎಸ್ ಸೆಕ್ಷನ್‌ಗಳಾದ 498ಎ, 302 ಮತ್ತು 201ರ ಅಡಿಯಲ್ಲಿ ದೇವನಹಳ್ಳಿಯ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅವರು ಅರುಣ್ ಕುಮಾರ್‌ಗೆ, 2024ರ ಮಾರ್ಚ್ 14ರಂದು ಜೀವಾವಧಿ ಶಿಕ್ಷೆ ಮತ್ತು ₹75 ಸಾವಿರ ದಂಡ ವಿಧಿಸಿದ್ದರು. ಅರುಣ್ ಕುಮಾರ್ 2015ರಿಂದ ನ್ಯಾಯಾಂಗ ಬಂಧನದಲ್ಲಿದ್ದರು.