ಸುದ್ದಿಗಳು

ಕೊಲೆಯೋ ಅಲ್ಲವೋ ನಿರ್ಧರಿಸುವುದು ಹೇಗೆ? ಇಲ್ಲಿದೆ ಸುಪ್ರೀಂ ಕೋರ್ಟ್ ವಿವರಣೆ

Bar & Bench

ಐಪಿಸಿ ಸೆಕ್ಷನ್‌ 302ರ ಅಡಿ ವ್ಯಕ್ತಿಯೊಬ್ಬರ ವಿರುದ್ಧದ ಕೊಲೆ ಅಪರಾಧ ನಿರ್ಧರಿಸಲು ಅಗತ್ಯವಾದ ವಾಸ್ತವಾಂಶ ಮತ್ತು ಸನ್ನಿವೇಶಗಳ ಬಗ್ಗೆ ಸುಪ್ರೀಂಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪೊಂದರಲ್ಲಿ ಬೆಳಕು ಚೆಲ್ಲಿದೆ [ಉತ್ತರಾಖಂಡದ ಸರ್ಕಾರ ಮತ್ತು ಸಚೇಂದ್ರ ಸಿಂಗ್ ರಾವತ್ ನಡುವಣ ಪ್ರಕರಣ].

ಪುಲಿಚೆರ್ಲಾ ನಾಗರಾಜು ಮತ್ತು ಆಂಧ್ರಪ್ರದೇಶ ಸರ್ಕಾರ ನಡುವಣ ಪ್ರಕರಣದಲ್ಲಿ 2006ರಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ಬಹುತೇಕ ಆಧರಿಸಿ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. 2006 ರ ತೀರ್ಪಿನಲ್ಲಿ ನ್ಯಾಯಾಲಯ ಈ ಕೆಳಗಿನ ಸಂದರ್ಭ ಮತ್ತು ಸನ್ನಿವೇಶಗಳನ್ನು ಅನುಸರಿಸಿ ಸಾವಿಗೆ ಕಾರಣವಾದ ಉದ್ದೇಶವನ್ನು ತಿಳಿಯಬಹುದು ಎಂದು ಹೇಳಿತ್ತು. ಆ ಅಂಶಗಳು ಹೀಗಿವೆ:

  1. ಬಳಸಿದ ಆಯುಧದ ಸ್ವರೂಪ;

  2. ಆಯುಧವನ್ನು ಆರೋಪಿಗಳು ಹೊತ್ತೊಯ್ದಿದ್ದಾರೆಯೇ ಅಥವಾ ಸ್ಥಳದಲ್ಲೇ ಇದ್ದುದನ್ನು ಬಳಸಿದ್ದಾರೆಯೇ;

  3. ಹೊಡೆತವು ದೇಹದ ಪ್ರಮುಖ ಭಾಗವನ್ನು ಗುರಿಯಾಗಿಸಿಕೊಂಡಿತ್ತೇ?

  4. ಗಾಯಗೊಳಿಸಲು ಬಳಸಲಾದ ಶಕ್ತಿಯ ಪ್ರಮಾಣ;

  5. ಕೃತ್ಯವು ಹಠಾತ್ ಜಗಳ ಅಥವಾ ಹಠಾತ್ ಹೊಡೆದಾಟದ ಸಂದರ್ಭದಲ್ಲಿ ನಡೆದಿತ್ತೇ ಅಥವಾ ಹೊಡೆದಾಟಕ್ಕೆ ಹೊರತಾದುದಾಗಿತ್ತೆ?

  6. ಘಟನೆಯು ಆಕಸ್ಮಿಕವಾಗಿ ಸಂಭವಿಸಿದೆಯೇ ಅಥವಾ ಪೂರ್ವಯೋಜಿತವೇ?

  7. ಯಾವುದೇ ಪೂರ್ವ ದ್ವೇಷವಿದೆಯೇ ಅಥವಾ ಸತ್ತವರು ಅಪರಿಚಿತರೇ;

  8. ಯಾವುದೇ ತೀವ್ರ ಮತ್ತು ಹಠಾತ್ ಪ್ರಚೋದನೆ ಇದೆಯೇ. ಹಾಗಿದ್ದಲ್ಲಿ, ಅಂತಹ ಪ್ರಚೋದನೆಗೆ ಕಾರಣವೇನು?;

  9. ಅದು ಭಾವೋದ್ರೇಕದ ಬಿಸಿಯಲ್ಲಿ ನಡೆಯಿತೇ;

  10. ಗಾಯಗೊಳಿಸಿದ ವ್ಯಕ್ತಿ ಅಸಮಂಜಸ ಲಾಭ ಪಡೆದಿದ್ದಾನೆಯೇ ಅಥವಾ ಕ್ರೂರ ಮತ್ತು ಅಸಾಮಾನ್ಯ ರೀತಿಯಲ್ಲಿ ವರ್ತಿಸಿದ್ದಾನೆಯೇ;

  11. ಆರೋಪಿಯು ಒಂದೇ ಏಟಿಗೆ ಕೊಂದನೇ ಅಥವಾ ಹಲವಾರು ಹೊಡೆತಗಳನ್ನು ನೀಡಿದನೆ;

ಕೊಲೆ ಅಪರಾಧಿಯೊಬ್ಬರ ಜೀವಾವಧಿ ಶಿಕ್ಷೆಯನ್ನು ಹತ್ತು ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಇಳಿಸಿದ ಉತ್ತರಾಖಂಡ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್‌ ಈ ತೀರ್ಪು ನೀಡಿತು. ಆ ಮೂಲಕ ಹೈಕೋರ್ಟ್‌ ತೀರ್ಪನ್ನು ನಿರಾಕರಿಸಿ ಜೀವಾವಧಿ ಶಿಕ್ಷೆಯನ್ನು ಪುನರ್‌ಸ್ಥಾಪಿಸಿತು.