ಸುದ್ದಿಗಳು

ಮುರ್ಷಿದಾಬಾದ್ ಹಿಂಸಾಚಾರ: ಅರೆಸೇನಾ ಪಡೆ ನಿಯೋಜನೆಗೆ ನಿರ್ದೇಶನ ನೀಡಲು ಸುಪ್ರೀಂ ನಕಾರ

ಪ್ರಕರಣವನ್ನು ತುರ್ತಾಗಿ ಆಲಿಸಿ ನಿರ್ದೇಶನ ನೀಡುವಂತೆ ಮತ್ತು ಸಂವಿಧಾನದ 355ನೇ ವಿಧಿ ಜಾರಿಗೊಳಿಸುವಂತೆ ಕೋರಿ ಹೊಸದಾಗಿ ಮಧ್ಯಂತರ ಅರ್ಜಿಗಳನ್ನು ಪೀಠಕ್ಕೆ ಸಲ್ಲಿಸಲಾಗಿತ್ತು.

Bar & Bench

ವಕ್ಫ್ (ತಿದ್ದುಪಡಿ) ಕಾಯಿದೆ ವಿರೋಧಿಸಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಅರೆಸೇನಾ ಪಡೆ ನಿಯೋಜಿಸುವಂತೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಪ್ರಕರಣವನ್ನು ತುರ್ತಾಗಿ ಆಲಿಸಿ ನಿರ್ದೇಶನ ನೀಡುವಂತೆ ಮತ್ತು ಸಂವಿಧಾನದ 355ನೇ ವಿಧಿ ಜಾರಿಗೊಳಿಸುವಂತೆ  ಹೊಸದಾಗಿ ಮಧ್ಯಂತರ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠಕ್ಕೆ ಸಲ್ಲಿಸಲಾಯಿತು.

"ಅರೆ ಸೇನಾಪಡೆಗಳನ್ನು ತಕ್ಷಣ ನಿಯೋಜಿಸುವ ಅವಶ್ಯಕತೆಯಿದೆ. ಪ್ರಕರಣವನ್ನು ನಾಳೆಗೆ ಪಟ್ಟಿ ಮಾಡಲಾಗಿದೆ. ಸಂವಿಧಾನದ 355 ನೇ ವಿಧಿ ಜಾರಿಗೆ ತರುವಂತೆ ಕೋರಿ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದೇನೆ" ಎಂದು ಅರ್ಜಿದಾರರ ಪರ ವಕೀಲ ವಿಷ್ಣುಶಂಕರ್ ಜೈನ್ ಹೇಳಿದರು. ಸಂವಿಧಾನದ 355ನೇ ವಿಧಿಯು ಪ್ರತಿಯೊಂದು ರಾಜ್ಯವನ್ನು ಬಾಹ್ಯ ಶಕ್ತಿಗಳು ಹಾಗೂ ಆಂತರಿಕ ಸಂಘರ್ಷಗಳಿಂದ ರಕ್ಷಿಸುವ ಕೇಂದ್ರ ಸರ್ಕಾರದ ಕರ್ತವ್ಯದ ಬಗ್ಗೆ ವಿವರಿಸುತ್ತದೆ.

ಈ ವೇಳೆ ನ್ಯಾಯಾಲಯವು "ಇದನ್ನು ಹೇರಲು (355ನೇ ವಿಧಿ) ನಾವು ರಾಷ್ಟ್ರಪತಿಗಳಿಗೆ ರಿಟ್ ಮ್ಯಾಂಡಮಸ್‌ ಹೊರಡಿಸಬೇಕೆಂದು ಬಯಸುತ್ತೀರಾ? ಈಗಾಗಲೇ ಕಾರ್ಯಾಂಗವನ್ನು ಅತಿಕ್ರಮಿಸಿದ ಆರೋಪ ಎದುರಿಸುತ್ತಿದ್ದೇವೆ” ಎಂದ ನ್ಯಾ. ಗವಾಯಿ ತುರ್ತಾಗಿ ಪ್ರಕರಣ ಪಟ್ಟಿ ಮಾಡಲು ನಿರಾಕರಿಸಿದರು.

ಈಗಾಗಲೇ ಸುಪ್ರೀಂ ಕೋರ್ಟ್‌ ಕಾರ್ಯಾಂಗವನ್ನು ಅತಿಕ್ರಮಿಸಿದ ಆರೋಪ ಎದುರಿಸುತ್ತಿದೆ.
ನ್ಯಾಯಮೂರ್ತಿ ಬಿ.ಆರ್. ಗವಾಯಿ

ರಾಜ್ಯ ಶಾಸಕಾಂಗ ಅಂಗೀಕರಿಸಿದ ಮಸೂದೆಗಳನ್ನು ನಿರ್ದಿಷ್ಟ ಸಮಯದೊಳಗೆ‌ ಇತ್ಯರ್ಥಪಡಿಸುವಂತೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳಿಗೆ ಸುಪ್ರೀಂ ಕೋರ್ಟ್‌ ಈಚೆಗೆ ನೀಡಿದ್ದ ನಿರ್ದೇಶನಕ್ಕೆ ಸಂಬಂಧಿಸಿದಂತೆ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಮಾಡಿದ ಆರೋಪಗಳನ್ನು ನ್ಯಾ. ಗವಾಯಿ ಪರೋಕ್ಷವಾಗಿ ಪ್ರಸ್ತಾಪಿಸಿದರು.

ಪಶ್ಚಿಮ ಬಂಗಾಳದ ನಿವಾಸಿ ದೇವದತ್ತ ಮಜೀದ್ ಅವರು ಸಲ್ಲಿಸಿರುವ ಮತ್ತೊಂದು ಅರ್ಜಿ ವಕ್ಫ್ ತಿದ್ದುಪಡಿ ಕಾಯಿದೆ ಹಿನ್ನೆಲೆಯಲ್ಲಿ ಮುರ್ಷಿದಾಬಾದ್‌ನಲ್ಲಿ ನಡೆದ ಹಿಂಸಾಚಾರದ ತನಿಖೆಗಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ತ್ರಿಸದಸ್ಯ ಸಮಿತಿಯನ್ನು ರಚಿಸುವಂತೆ ಕೋರಿದೆ. ಪಶ್ಚಿಮ ಬಂಗಾಳದಲ್ಲಿ ಅರೆಸೇನಾ ಪಡೆಗಳನ್ನು ನಿಯೋಜಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದೂ ಅರ್ಜಿ ಮನವಿ ಮಾಡಿದ್ದು ಅದರ ವಿಚಾರಣೆ ನಾಳೆ (ಮಂಗಳವಾರ) ನಡೆಯಲಿದೆ.