ಬಹುಪತ್ನಿತ್ವಕ್ಕೆ ಮುಸ್ಲಿಂ ಕಾನೂನು ಅವಕಾಶ ನೀಡುತ್ತದೆಯಾದರೂ ಪತಿ ತನ್ನ ಎಲ್ಲಾ ಪತ್ನಿಯರನ್ನು ಸಮನಾಗಿ ಪರಿಗಣಿಸಬೇಕು, ಇಲ್ಲದೇ ಹೋದರೆ ಅದು ಕ್ರೌರ್ಯವಾಗುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಈಚೆಗೆ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಆರ್‌ಎಂಟಿ ಟೀಕಾ ರಾಮನ್ ಮತ್ತು ಪಿಬಿ ಬಾಲಾಜಿ ಅವರಿದ್ದ ಪೀಠ ತಿರುನೆಲ್ವೇಲಿಯ ಕೌಟುಂಬಿಕ ನ್ಯಾಯಾಲಯ ಪ್ರಕರಣದ ಸಂಬಂಧ ನೀಡಿದ್ದ ತೀರ್ಪನ್ನು ಎತ್ತಿಹಿಡಿದಿದೆ.
ಪತಿ ಮತ್ತು ಆತನ ಕುಟುಂಬ ಸದಸ್ಯರು ಆರಂಭದಲ್ಲಿ ಆತನ ಮೊದಲ ಹೆಂಡತಿಗೆ ಚಿತ್ರಹಿಂಸೆ ಮತ್ತು ಕಿರುಕುಳ ನೀಡಿದ್ದರು. ನಂತರ ಪತಿಯು ಇನ್ನೊಬ್ಬ ಮಹಿಳೆಯೊಂದಿಗೆ ಎರಡನೇ ವಿವಾಹವಾಗಿ ಅಂದಿನಿಂದ ಆ ಪತ್ನಿಯೊಂದಿಗೆ ವಾಸಿಸುತ್ತಿದ್ದಾನೆ ಎಂಬ ವಿಚಾರವನ್ನು ನ್ಯಾಯಾಲಯ ಗಮನಿಸಿತು.
"... ಮುಸ್ಲಿಂ ಕಾನೂನಿನ ನಿಯಮಾವಳಿಗಳಂತೆ ಆತ (ಪತಿ) ಮೊದಲ ಹೆಂಡತಿ ಮತ್ತು ಎರಡನೇ ಹೆಂಡತಿಯನ್ನು ಅಗತ್ಯವಿದ್ದಷ್ಟು ಸಮಾನವಾಗಿ ಪರಿಗಣಿಸಿಲ್ಲ. ಇಸ್ಲಾಮಿಕ್ ಕಾನೂನಿನ ಪ್ರಕಾರ, ಪತಿ ಬಹುಪತ್ನಿತ್ವ ವಿವಾಹಕ್ಕೆ ಅರ್ಹನಾಗಿದ್ದರೂ ಆತ ಎಲ್ಲಾ ಹೆಂಡತಿಯರನ್ನು ಸಮಾನವಾಗಿ ಪರಿಗಣಿಸಬೇಕು" ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಪತಿ, ಆತನ ತಾಯಿ ಹಾಗೂ ಸಹೋದರಿ ತನಗೆ ಕಿರುಕುಳ ನೀಡುತ್ತಿದ್ದರು. ತಾನು ಗರ್ಭಿಣಿಯಾಗಿದ್ದಾಗ ಪತಿ ಮತ್ತು ಅತ್ತೆ ಮಾವಂದಿರು ಸೂಕ್ತ ರೀತಿಯಲ್ಲಿ ತನ್ನನ್ನು ನೋಡಿಕೊಳ್ಳಲಿಲ್ಲ. ಅಲರ್ಜಿ ಉಂಟಾಗುವಂತಹ ಆಹಾರ ನೀಡಿ ಕ್ರೌರ್ಯ ಎಸಗುತ್ತಿದ್ದರು. ಗರ್ಭಿಣಿಯಾಗಿದ್ದ ವೇಳೆ ಸೀರೆ ಸರಿಯಾಗಿ ಉಡಲಿಲ್ಲ ಎಂದು ಅತ್ತೆ ತನ್ನನ್ನು ನಿಂದಿಸಿದ್ದರು. ಗರ್ಭಪಾತವಾದ ನಂತರ ಮಗು ಹೆರಲಿಲ್ಲವೆಂದು ನಾದಿನಿ ತನಗೆ ಕಿರುಕುಳ ನೀಡಿದರು. ಚಿತ್ರ ಹಿಂಸೆ ಹಾಗೂ ಕಿರುಕುಳ ಅಸಹನೀಯವಾದಾಗ ತಾನು ವೈವಾಹಿಕ ಗೃಹ ತೊರೆದೆ. ತಾನು ಮರಳದೇ ಹೋದರೆ ಎರಡನೇ ಮದುವೆಯಾಗುವುದಾಗಿ ಪತಿ ಬೆದರಿಸಿದ್ದ. ಈಗ ಆತ ಎರಡನೇ ಪತ್ನಿಯೊಂದಿಗೆ ಸಂತೋಷದಿಂದ ವಾಸಿಸುತ್ತಿದ್ದಾನೆ ಎಂದು ಮೊದಲ ಪತ್ನಿ ದೂರಿದ್ದರು. ಪತಿ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು.
ಆದರೆ ಸಲ್ಲಿಸಲಾಗಿದ್ದ ಸಾಕ್ಷ್ಯಗಳನ್ನು ಪರಿಶೀಲಿಸಿದ ನ್ಯಾಯಾಲಯ ಎರಡನೇ ಪತ್ನಿಗೆ ಹೋಲಿಸಿದರೆ ತನ್ನನ್ನು ಅಸಮಾನವಾಗಿ ಕಂಡಿದ್ದಾನೆ. ತನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂಬುದನ್ನು ಸಾಬೀತುಪಡಿಸುವಲ್ಲಿ ಮೊದಲನೇ ಪತ್ನಿ ಯಶಸ್ವಿಯಾಗಿದ್ದಾರೆ. ಮೊದಲ ಪತ್ನಿಗೆ ಸಂಬಂಧಿಸಿದ ವೈವಾಹಿಕ ಬಾಧ್ಯತೆಗಳನ್ನು ನಿರ್ವಹಿಸಲು ಪತಿ ವಿಫಲನಾಗಿದ್ದಾನೆ ಎಂದು ಅಭಿಪ್ರಾಯಪಟ್ಟಿತು. ಈ ಅವಲೋಕನಗಳೊಂದಿಗೆ ಪತಿಯ ಮನವಿಯನ್ನು ಪೀಠ ವಜಾಗೊಳಿಸಿತು.
[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]