ಮುಸ್ಲಿಂ ವೈಯಕ್ತಿಕ ಕಾನೂನು ತಮ್ಮ ಎಲ್ಲಾ ಪತ್ನಿಯರನ್ನು ನ್ಯಾಯಯುತವಾಗಿ ಮತ್ತು ಸಮಾನವಾಗಿ ನೋಡಿಕೊಳ್ಳಬಲ್ಲ ಪುರುಷರಿಗೆ ಮಾತ್ರ ಬಹುಪತ್ನಿತ್ವವನ್ನು ಅನುಮತಿಸುತ್ತದೆ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಅವಲೋಕಿಸಿದೆ.
ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಅವರು ಎಲ್ಲಾ ಮುಸ್ಲಿಂ ಪುರುಷರಿಗೂ ಬಹುಪತ್ನಿತ್ವವನ್ನು ಅನುಮತಿಸಲಾಗಿದೆ ಎಂಬುದು ತಪ್ಪು ಕಲ್ಪನೆ ಎಂದು ಹೇಳಿದರು. ಕುರಾನ್‌ನ (ಅಧ್ಯಾಯ 4, ಪಂಕ್ತಿ 3 ಮತ್ತು ಪಂಕ್ತಿ 129) ಪಂಕ್ತಿಗಳನ್ನು ಉಲ್ಲೇಖಿಸಿ, ಒಬ್ಬ ಹೆಂಡತಿಯನ್ನು ಸೂಕ್ತವಾಗಿ ನೋಡಿಕೊಳ್ಳಲಾಗದವರು ಮತ್ತೆ ಇನ್ನೊಂದು ಮದುವೆಯಾಗಲು ಅನುಮತಿ ಇಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.
"ಮುಸ್ಲಿಂ ಪುರುಷನು ಬಯಸಿದಲ್ಲಿ ಯಾವುದೇ ಸಂದರ್ಭಗಳಲ್ಲಿಯೂ ಸಹ ಒಬ್ಬರಿಗಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗಬಹುದು ಎಂಬ ತಪ್ಪು ಕಲ್ಪನೆ ಇದೆ... ಈ ಪಂಕ್ತಿಗಳ ಉದ್ದೇಶ ಮತ್ತು ತಿರುಳು ಏಕಪತ್ನಿತ್ವವಾಗಿದೆ, ಬಹುಪತ್ನಿತ್ವವು ಕೇವಲ ಒಂದು ಅಪವಾದ ಮಾತ್ರ. ಪವಿತ್ರ ಕುರಾನ್ 'ನ್ಯಾಯ'ದ ಕುರಿತಾಗಿ ಹೆಚ್ಚು ಒತ್ತಿಹೇಳುತ್ತದೆ. ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ನ್ಯಾಯವನ್ನು ನೀಡಲು ಸಾಧ್ಯವಾದರೆ, ಅದೇ ರೀತಿ ಎರಡನೇ, ಮೂರನೇ ಮತ್ತು ನಾಲ್ಕನೇ ಪತ್ನಿಗೆ ನ್ಯಾಯ ನೀಡಬಹುದಾದರೆ ಮಾತ್ರ ಆತನಿಗೆ ಒಂದಕ್ಕಿಂತ ಹೆಚ್ಚು ಬಾರಿ ಮದುವೆಗೆ ಅನುಮತಿಸಲಾಗಿದೆ" ಎಂದು ನ್ಯಾಯಮೂರ್ತಿಗಳು ವಿವರಿಸಿದರು.
ಮುಸ್ಲಿಂ ಪುರುಷನು ತನ್ನ ಮೊದಲ ಪತ್ನಿಗೆ ನ್ಯಾಯ ನೀಡಲು ಸಾಧ್ಯವಾದರೆ, ಅದೇ ರೀತಿ ಎರಡನೇ, ಮೂರನೇ ಮತ್ತು ನಾಲ್ಕನೇ ಪತ್ನಿಯಂದಿರಿಗೂ ನ್ಯಾಯ ನೀಡಬಹುದಾದರೆ, ಆಗ ಮಾತ್ರ ಒಂದಕ್ಕಿಂತ ಹೆಚ್ಚು ಬಾರಿ ಮದುವೆಗೆ ಅನುಮತಿಸಲಾಗಿದೆ.ಕೇರಳ ಹೈಕೋರ್ಟ್
ಮುಸ್ಲಿಂ ಸಮುದಾಯದ ಹೆಚ್ಚಿನ ಸದಸ್ಯರು ಏಕಪತ್ನಿತ್ವವನ್ನು ಪಾಲಿಸುತ್ತಾರೆ ಮತ್ತು ಬಹುಪತ್ನಿತ್ವವನ್ನು ಮುಂದುವರಿಸುವವರಿಗೆ ಧಾರ್ಮಿಕ ಮುಖಂಡರು ತಿಳಿಹೇಳಬೇಕು ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.
"ಮುಸ್ಲಿಂ ಸಮುದಾಯದ ಬಹುಪಾಲು ಜನರು ಒಬ್ಬರಿಗಿಂತ ಹೆಚ್ಚು ಪತ್ನಿಯರನ್ನು ನಿರ್ವಹಿಸುವ ಸಂಪತ್ತನ್ನು ಹೊಂದಿದ್ದರೂ ಸಹ ಏಕಪತ್ನಿತ್ವವನ್ನು ಅನುಸರಿಸುತ್ತಾರೆ. ಅದು ಪವಿತ್ರ ಕುರಾನ್‌ನ ನಿಜವಾದ ಆಶಯವೂ ಆಗಿದೆ. ಪವಿತ್ರ ಕುರಾನ್‌ನ ಪಂಕ್ತಿಗಳನ್ನು ಮರೆತು ಬಹುಪತ್ನಿತ್ವವನ್ನು ಅನುಸರಿಸುತ್ತಿರುವ ಮುಸ್ಲಿಂ ಸಮುದಾಯದ ಸಣ್ಣ ಪ್ರಮಾಣದ ಮಂದಿಗೆ ಧಾರ್ಮಿಕ ಮುಖಂಡರು ಮತ್ತು ಸಮಾಜ ತಿಳಿಹೇಳಬೇಕಿದೆ," ಎಂದು ನ್ಯಾಯಾಲಯ ಹೇಳಿದೆ.
ಮುಸ್ಲಿಂ ಸಮುದಾಯದಲ್ಲಿ ಬಹುಪತ್ನಿತ್ವಕ್ಕೆ ಬಲಿಯಾದ ನಿರ್ಗತಿಕ ಮಹಿಳೆಯರನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ.ಕೇರಳ ಹೈಕೋರ್ಟ್
ಮುಸ್ಲಿಂ ಸಮುದಾಯದಲ್ಲಿ ಬಹುಪತ್ನಿತ್ವವು ಶೈಕ್ಷಣಿಕ ಹಾಗೂ ಮುಸ್ಲಿಂ ಸಾಂಪ್ರದಾಯಿಕ ಕಾನೂನುಗಳ ಅರಿವಿನ ಕೊರತೆಯಿಂದಾಗಿ ಸಂಭವಿಸುತ್ತದೆ ಎಂದು ನ್ಯಾಯಾಲಯವು ಹೇಳಿತು. ಬಹುಪತ್ನಿತ್ವದಲ್ಲಿ ತೊಡಗಿಸಿಕೊಳ್ಳದಂತೆ ಮುಸ್ಲಿಂ ಪುರುಷರಿಗೆ ಸಲಹೆ ನೀಡಲು ಸರ್ಕಾರವು ಸಹ ಬದ್ಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಬಹುಪತ್ನಿತ್ವಕ್ಕೆ ಬಲಿಯಾದ ಮಹಿಳೆಯರನ್ನು ಸರ್ಕಾರವು ರಕ್ಷಿಸಬೇಕು ಎಂದು ನ್ಯಾಯಾಲಯ ಇದೇ ವೇಳೆ ಒತ್ತಿ ಹೇಳಿತು.
"ಮಸೀದಿಯ ಮುಂದೆ ಭಿಕ್ಷೆ ಬೇಡುವ ಮುಸ್ಲಿಂ ಸಮುದಾಯದ ಅಂಧ ವ್ಯಕ್ತಿಯೊಬ್ಬ ಮುಸ್ಲಿಂ ಸಂಪ್ರದಾಯ ಕಾನೂನಿನ ಮೂಲಭೂತ ತತ್ವಗಳ ಬಗ್ಗೆ ಅರಿವಿಲ್ಲದೆ ಒಂದರ ನಂತರ ಮತ್ತೊಂದು ಮದುವೆಯಾಗುತ್ತಿದ್ದರೆ, ಅವನಿಗೆ ಸೂಕ್ತ ರೀತಿಯ ಸಲಹೆ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಸರ್ಕಾರದ ಅಧಿಕಾರಿಗಳು ಅಂತಹ ವ್ಯಕ್ತಿಗೆ ಸೂಕ್ತ ರೀತಿಯ ಸಮಾಲೋಚನೆ ನೀಡಬೇಕು. ಮುಸ್ಲಿಂ ಸಮುದಾಯದಲ್ಲಿ ಬಹುಪತ್ನಿತ್ವಕ್ಕೆ ಬಲಿಯಾದ ನಿರ್ಗತಿಕ ಹೆಂಡತಿಯರನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯವಾಗಿದೆ" ಎಂದು ನ್ಯಾಯಾಲಯ ಒತ್ತಿ ಹೇಳಿತು.
ಮುಸ್ಲಿಂ ಮಹಿಳೆಯೊಬ್ಬರು ತನ್ನ ಪತಿಯಿಂದ ಜೀವನಾಂಶ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಈ ಅವಲೋಕನಗಳನ್ನು ಮಾಡಿತು. ಕೌಟುಂಬಿಕ ನ್ಯಾಯಾಲಯವು ಆಕೆಯ ಜೀವನಾಂಶ ಅರ್ಜಿಯನ್ನು ವಜಾಗೊಳಿಸಿದ್ದರಿಂದ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅಂಧನಾಗಿದ್ದ ಪತಿ ನೆರೆಹೊರೆಯವರಿಂದ ಬರುವ ಹಣದಿಂದ ಮತ್ತು ಮಸೀದಿಯ ಮುಂದೆ ಭಿಕ್ಷೆ ಬೇಡುವ ಮೂಲಕ ಜೀವನ ಸಾಗಿಸುತ್ತಿದ್ದ. ಅರ್ಜಿದಾರರು ಅವರ ಎರಡನೇ ಪತ್ನಿಯಾಗಿದ್ದು, ಪತಿ ತನ್ನ ಮೊದಲ ಪತ್ನಿಯೊಂದಿಗೆ ವಾಸಿಸುತ್ತಿದ್ದ.
ಜೀವನಾಂಶಕ್ಕಾಗಿ ಕೋರಿದ್ದ ತನಗೆ ಪತಿಯು ತಲಾಖ್ ಉಚ್ಚರಿಸುವ ಮೂಲಕ ವಿಚ್ಛೇದನ ನೀಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಅರ್ಜಿದಾರೆಯಾದ ಎರಡನೇ ಪತ್ನಿ ಆರೋಪಿಸಿದ್ದರು. ಅಲ್ಲದೆ, ಪತಿಯು ಮೂರನೇ ಮದುವೆಯಾಗುವುದಾಗಿ ಬೆದರಿಕೆ ಹಾಕುತ್ತಿರುವುದಾಗಿಯೂ, ದೌರ್ಜನ್ಯ ಎಸಗುತ್ತಿರುವುದಾಗಿಯೂ ದೂರಿದ್ದರು.
ಜೀವನೋಪಾಯಕ್ಕಾಗಿ ಭಿಕ್ಷೆ ಬೇಡುವ ವ್ಯಕ್ತಿಯನ್ನು ತನ್ನ ಹೆಂಡತಿಗೆ ಜೀವನಾಂಶ ಪಾವತಿಸಲು ಒತ್ತಾಯಿಸಲಾಗುವುದಿಲ್ಲ ಎನ್ನುವ ಕಾನೂನಾತ್ಮಕ ಅಂಶದ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯವು ಆಕೆಯ ಜೀವನಾಂಶ ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪತ್ನಿಯ ಮೇಲ್ಮನವಿಯನ್ನು ಆಲಿಸಿದ ಹೈಕೋರ್ಟ್ ಕೌಟುಂಬಿಕ ನ್ಯಾಯಾಲಯದ ನಿರ್ಧಾರವನ್ನು ಎತ್ತಿಹಿಡಿಯಿತು. ಆದಾಗ್ಯೂ, ಆ ವ್ಯಕ್ತಿಗೆ ಒಬ್ಬ ಪತ್ನಿಯನ್ನು ನಿರ್ವಹಿಸಲು ಸಹ ಯಾವುದೇ ಸಂಪನ್ಮೂಲಗಳಿಲ್ಲದ ಕಾರಣ ಇನ್ನು ಮುಂದೆ ಆತ ಬೇರೆ ಮದುವೆಯಾಗದಂತೆ ಸಲಹೆ ನೀಡಬೇಕು ಎಂದು ಅಭಿಪ್ರಾಯಪಟ್ಟಿತು.