ಮುಸ್ಲಿಂ ಪುರುಷನೊಬ್ಬ ತನ್ನ ಮೊದಲ ಮದುವೆಯ ಅವಧಿಯಲ್ಲಿ ಮಾಡಿಕೊಂಡ ಎರಡನೇ ಮದುವೆಯು ವಿಶೇಷ ವಿವಾಹ ಕಾಯಿದೆ 1954ರ ಅಡಿಯಲ್ಲಿ ಅನೂರ್ಜಿತವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಇತ್ತೀಚೆಗೆ ತೀರ್ಪು ನೀಡಿದೆ.
ಮುಸ್ಲಿಂ ವೈಯಕ್ತಿಕ ಕಾನೂನು ಪುರುಷರು ಬಹು ವಿವಾಹ ಮಾಡಿಕೊಳ್ಳಲು ಅವಕಾಶ ನೀಡಿದ್ದರೂ, ವೈಯಕ್ತಿಕ ಕಾನೂನಿನ ಅಡಿಯಲ್ಲಿ ವಿವಾಹಗಳು ಶಾಸ್ತ್ರೋಕ್ತವಾಗಿ ನಡೆದರೆ ಮಾತ್ರ ಈ ಕಾನೂನು ಸ್ಥಾನವು ಚಾಲ್ತಿಯಲ್ಲಿರುತ್ತದೆ ಎಂದು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರ ಏಕಸದಸ್ಯ ಪೀಠ ಹೇಳಿದೆ.
ವಿಶೇಷ ವಿವಾಹ ಕಾಯಿದೆ ಅಡಿಯಲ್ಲಿ ವಿವಾಹವಾಗಲು ಪಕ್ಷಕಾರರು ಆಯ್ಕೆ ಮಾಡಿಕೊಂಡರೆ ಕಾನೂನು ಸ್ಥಾನವು ಬದಲಾಗುತ್ತದೆ, ಇದು ಈಗಾಗಲೇ ವಿವಾಹವಾದ ವ್ಯಕ್ತಿಯ ಹಿಂದಿನ ವಿವಾಹ ಇನ್ನೂ ಅಸ್ತಿತ್ವದಲ್ಲಿದ್ದರೆ ಈ ಕಾಯಿದೆ ಅಡಿಯಲ್ಲಿ ಮತ್ತೊಂದು ವಿವಾಹವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳುತ್ತದೆ.
"ಒಮ್ಮೆ ಪಕ್ಷಕಾರರು ತಮ್ಮ ವೈಯಕ್ತಿಕ ಕಾನೂನಿನ ಬದಲು ಕಾಯಿದೆಯ ನಿಬಂಧನೆಗಳನ್ನು ಪ್ರಜ್ಞಾಪೂರ್ವಕವಾಗಿ ಅನ್ವಯಿಸಿದರೆ, ಅವರು ಸಂಸತ್ತು ಜಾರಿಗೆ ತಂದ ಕಡ್ಡಾಯ ಶಾಸನಬದ್ಧ ಆಡಳಿತಕ್ಕೆ ತಮ್ಮನ್ನು ತಾವು ಒಳಪಡಿಸಿಕೊಳ್ಳುತ್ತಾರೆ. ಆದ್ದರಿಂದ ಅಂತಹ ವಿವಾಹದಿಂದ ಬರುವ ಹಕ್ಕುಗಳು ಮತ್ತು ಬಾಧ್ಯತೆಗಳನ್ನು ವೈಯಕ್ತಿಕ ಕಾನೂನಿನಿಂದ ನಿರ್ಧರಿಸಲಾಗುವುದಿಲ್ಲ, ಬದಲಿಗೆ ಕಾಯಿದೆಯ ನಿಬಂಧನೆಗಳಿಂದ ಮಾತ್ರ ನಿರ್ಧರಿಸಲಾಗುತ್ತದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿಶೇಷ ವಿವಾಹ ಕಾಯಿದೆ ಅಡಿ 2008ರಲ್ಲಿ ಮುಸ್ಲಿಂ ಪುರುಷನನ್ನು ಮದುವೆಯಾಗಿದ್ದ ಮಹಿಳೆಯೊಬ್ಬರು ತನ್ನನ್ನು ಕಾನೂನುಬದ್ಧ ಉತ್ತರಾಧಿಕಾರಿ ಎಂದು ಗುರುತಿಸಲು ನಿರಾಕರಿಸಿದ್ದನ್ನು ಪ್ರಶ್ನಿಸಿದ ಪ್ರಕರಣದಲ್ಲಿ ನ್ಯಾಯಾಲಯವು ಈ ಅಭಿಪ್ರಾಯ ನೀಡಿತು. ದಂಪತಿಗೆ ಒಂದು ಹೆಣ್ಣು ಮಗು ಕೂಡ ಇದೆ.
ವ್ಯಕ್ತಿಯು 2024ರಲ್ಲಿ ತನ್ನ ಸಹೋದರ ಹೂಡಿದ್ದ ವಿಭಜನಾ ದಾವೆ ವಿಚಾರಣೆಯಲ್ಲಿದ್ದಾಗ ನಿಧನರಾಗಿದ್ದಾರೆ. ಆ ವ್ಯಕ್ತಿಯ ಮರಣದ ನಂತರ, ಅರ್ಜಿದಾರರು ಮತ್ತು ಅವರ ಮಗಳು ವಿಭಜನಾ ದಾವೆಯಲ್ಲಿ ತಮ್ಮನ್ನು ಪ್ರತಿವಾದಿಯಾಗಿಸಲು ಕೋರಿದ್ದರು.
ಆದಾಗ್ಯೂ, ವಿಚಾರಣಾ ನ್ಯಾಯಾಲಯವು ಅವರನ್ನು ಕಾನೂನುಬದ್ಧವಾಗಿ ವಿವಾಹಿತ ಪತ್ನಿ ಎಂದು ಗುರುತಿಸಲು ಅಥವಾ ಅವರನ್ನು ಪಕ್ಷವನ್ನಾಗಿ ಮಾಡಲು ನಿರಾಕರಿಸಿತ್ತು. ದಂಪತಿಯ ಮಗಳನ್ನು ಮೊಕದ್ದಮೆಯಲ್ಲಿ ಪಕ್ಷಕಾರರನ್ನಾಗಿ ಸೇರಿಸಲಾಗಿತ್ತು. ಅರ್ಜಿದಾರರು ವಿಚಾರಣಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ವಿಶೇಷ ವಿವಾಹ ಕಾಯಿದೆ ಅಡಿಯಲ್ಲಿ ಎರಡನೇ ವಿವಾಹವಾದಾಗ ಅರ್ಜಿದಾರರ ಮೊದಲ ವಿವಾಹ ಇನ್ನೂ ಅಸ್ತಿತ್ವದಲ್ಲಿದ್ದರಿಂದ, ಅರ್ಜಿದಾರರು ಮತ್ತು ಮೃತ ವ್ಯಕ್ತಿಯ ನಡುವಿನ ವಿವಾಹವು ಅನೂರ್ಜಿತವಾಗಿದೆ ಎಂದು ನ್ಯಾಯಾಲಯವು ಜುಲೈ 15ರ ಆದೇಶದಲ್ಲಿ ತೀರ್ಮಾನಿಸಿತು. ವಿಶೇಷ ವಿವಾಹ ಕಾಯಿದೆ ಸೆಕ್ಷನ್ 4(ಎ) ಪ್ರಕಾರ ಮೊದಲ ಮದುವೆ ರದ್ದಾಗದೇ ಇದ್ದಾಗ ಎರಡನೇ ಮದುವೆಗೆ ಅವಕಾಶವಿರುವುದಿಲ್ಲ.
"ಹಿಂದಿನ ವಿವಾಹದ ಚಾಲ್ತಿಯಲ್ಲಿರುವುದರಿಂದ ಕಾಯಿದೆಯಡಿಯಲ್ಲಿ ನಡೆದ ವಿವಾಹವು ಅನೂರ್ಜಿತವಾಗಿದೆ ಮತ್ತು ಅದು ಪತಿ ಮತ್ತು ಪತ್ನಿಯ ಕಾನೂನುಬದ್ಧ ಸ್ಥಾನಮಾನವನ್ನು ಪಕ್ಷಕಾರರಿಗೆ ನೀಡುವುದಿಲ್ಲ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಆದಾಗ್ಯೂ, ದಂಪತಿ ಮಗಳು ಮೃತ ವ್ಯಕ್ತಿಯ ಕಾನೂನುಬದ್ಧ ಉತ್ತರಾಧಿಕಾರಿಯಾಗಿ ವಿಭಜನಾ ಮೊಕದ್ದಮೆಯಲ್ಲಿ ಪಕ್ಷಕಾರಳಾಗಲು ಅರ್ಹಳು ಎಂಬ ವಿಚಾರಣಾ ನ್ಯಾಯಾಲಯದ ತೀರ್ಪಿಗೆ ಹೈಕೋರ್ಟ್ ಒಪ್ಪಿದೆ.
"ಅಮಾನ್ಯ ವಿವಾಹದಿಂದ ಜನಿಸಿದ ಮಕ್ಕಳು ಶಾಸನಬದ್ಧ ರಕ್ಷಣೆಗೆ ಅರ್ಹರಾಗಿರುತ್ತಾರೆ ಮತ್ತು ಸೂಕ್ತ ಪ್ರಕ್ರಿಯೆಗಳಲ್ಲಿ ತಮ್ಮ ಕಾನೂನು ಹಕ್ಕುಗಳನ್ನು ಪ್ರತಿನಿಧಿಸಲು ಸಮರ್ಥರಾಗಿರುತ್ತಾರೆ. ನಿರ್ಧರಿತವಾಗಿರುವ ಈ ಕಾನೂನು ಸ್ಥಾನವನ್ನು ಗಮನದಲ್ಲಿಟ್ಟುಕೊಂಡು, ವಿಚಾರಣಾ ನ್ಯಾಯಾಲಯವು ಪ್ರಸ್ತಾವಿತ ಪ್ರತಿವಾದಿ ನಂ.2(ಎಫ್), ಅಂದರೆ ಮಗಳು, ದಾಖಲೆಯಲ್ಲಿ ಬರಲು ಅನುಮತಿ ನೀಡಿದೆ" ಎಂದಿದೆ.