ಉಯಿಲುರಹಿತ ಉತ್ತರಾಧಿಕಾರತ್ವದ ವೇಳೆ ಮಹಿಳೆ ಮತ್ತು ಪುರುಷರ ನಡುವೆ ತಾರತಮ್ಯ ಉಂಟು ಮಾಡಲಾಗುತ್ತಿದೆ ಎಂದು ಮುಸ್ಲಿಮ್ ವೈಯಕ್ತಿಕ ಕಾನೂನು (ಷರಿಯತ್) ಅನ್ವಯಿಕ ಕಾಯಿದೆ 1937 ಮತ್ತು ಮುಸ್ಲಿಮ್ ವೈಯಕ್ತಿಕ ಕಾನೂನು (ಷರಿಯತ್) ಅನ್ವಯಿಕ (ಕೇರಳ ತಿದ್ದುಪಡಿ) ಕಾಯಿದೆ 1963 ಅನ್ನು ಪ್ರಶ್ನಿಸಿ ಮುಸ್ಲಿಮ್ ಮಹಿಳೆಯೊಬ್ಬರು ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದಾರೆ [ಬುಶಾರ ಅಲಿ ವರ್ಸಸ್ ಭಾರತ ಸರ್ಕಾರ ಮತ್ತು ಇತರರು].
ಲಿಂಗದ ಆಧಾರದಲ್ಲಿ ಆಕ್ಷೇಪಾರ್ಹ ಕಾಯಿದೆಗಳು ತಾರತಮ್ಯ ಉಂಟು ಮಾಡುತ್ತವೆ. ಹೀಗಾಗಿ ಅವುಗಳನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಸಲ್ಲಿಸಿರುವ ಅರ್ಜಿ ಮಾನ್ಯ ಮಾಡಿರುವ ನ್ಯಾಯಮೂರ್ತಿ ವಿ ಜಿ ಅರುಣ್ ನೇತೃತ್ವದ ಏಕಸದಸ್ಯ ಪೀಠವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚನೆ ಪಡೆಯಲು ಆದೇಶ ಮಾಡಿದೆ.
1981ರಲ್ಲಿ ಅರ್ಜಿದಾರೆಯ ತಂದೆಯು ಸಾವನ್ನಪ್ಪಿದ್ದು, ತಾಯಿ ಹಾಗೂ ಏಳು ಮಂದಿ ಸಹೋದರರು ಮತ್ತು ನಾಲ್ಕು ಮಂದಿ ಸಹೋದರಿಯರನ್ನು ಅಗಲಿದ್ದರು. ಷರಿಯತ್ ಕಾನೂನಿನಲ್ಲಿ ಆಸ್ತಿ ಹಂಚಿಕೆ ಮಾಡುವಾಗ ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ 2:1ರ ಮೂಲಕ ಆಸ್ತಿಯ ಹಂಚಿಕೆ ಮಾಡುವ ತಾರತಮ್ಯವು 13ನೇ ವಿಧಿಯಡಿ ಅಸಿಂಧು ಎಂಬುದು ತಿಳಿಯದೇ 1994ರಲ್ಲಿ ಅರ್ಜಿದಾರೆಯು ತಂದೆಯ ಆಸ್ತಿಯಲ್ಲಿ ಪಾಲು ಕೋರಿ ವಿಚಾರಣಾಧೀನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಷರಿಯಾ ಕಾನೂನಿನ ಪ್ರಕಾರ ವಿಚಾರಣಾಧೀನ ನ್ಯಾಯಾಲಯವು ಸಹೋದರರ ಆಸ್ತಿಯಲ್ಲಿ ಅರ್ಧ ಪಾಲನ್ನು ಅರ್ಜಿದಾರೆಗೆ ಹಂಚಿಕೆ ಮಾಡುವ ಮೂಲಕ ಪ್ರಾಥಮಿಕ ಮತ್ತು ಅಂತಿಮ ಡಿಕ್ರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇದರ ಜೊತೆಗೆ ಸಂವಿಧಾನದ 13(1)ನೇ ವಿಧಿ ಮತ್ತು 13(2)ನೇ ವಿಧಿಯ ಹಿನ್ನೆಲೆಯಲ್ಲಿ 1937ರ ಕಾಯಿದೆಯ ಸೆಕ್ಷನ್ 2 ಮತ್ತು 1963ರ ಕಾಯಿದೆಯ ಪರ್ಯಾಯ ಸೆಕ್ಷನ್ 2 ಅಸಿಂಧುವಾಗಿವೆ. ಆಕ್ಷೇಪಾರ್ಹ ಸೆಕ್ಷನ್‌ಗಳು ಸಂವಿಧಾನದ 15ನೇ ವಿಧಿಯಡಿ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತವೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
“ಷರಿಯತ್ ಪ್ರಕಾರ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಿಗಿಂತ ಕೀಳಾಗಿ ಕಾಣಲಾಗುತ್ತದೆ. ಹುಟ್ಟಿನಿಂದ ಗಂಡು ಮಕ್ಕಳಿಗೆ ಸಿಗುವ ಅರ್ಧ ಮಾತ್ರ ಹೆಣ್ಣು ಮಕ್ಕಳಿಗೆ ದೊರೆಯುತ್ತದೆ. ಇದು ಸಂವಿಧಾನದ 15ನೇ ವಿಧಿಯ ಉಲ್ಲಂಘನೆಯಾಗಿದೆ. ಪುರುಷನಿಗೆ ಹೋಲಿಸಿದರೆ ಹೆಣ್ಣಿಗೆ ಸಮಾನ ಪಾಲನ್ನು ನೀಡದಿರುವುದಕ್ಕೆ ಸೀಮಿತವಾದಂತೆ ಷರಿಯಾ ಕಾನೂನು ಭಾರತದ ಸಂವಿಧಾನದ 13ನೇ ವಿಧಿಯ ಅಡಿ ಅನೂರ್ಜಿತವಾಗಿದೆ” ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.