Justice A Badharudeen  
ಸುದ್ದಿಗಳು

ವಿಚ್ಛೇದನ ಬಯಸಿದ ಮುಸ್ಲಿಂ ಮಹಿಳೆ ಖುಲಾ ಜಾರಿಯಾದ ದಿನದಿಂದ ಜೀವನಾಂಶ ಪಡೆಯಲಾಗದು: ಕೇರಳ ಹೈಕೋರ್ಟ್

ಖುಲಾ ಸಮ್ಮತಿಯ ವಿಚ್ಛೇದನವಾಗಿದ್ದು ಮದುವೆಯ ಬಂಧದಿಂದ ತನ್ನನ್ನು ಬಿಡುಗಡೆ ಮಾಡುವಂತೆ ಪತಿಗೆ ಮಹಿಳೆ ತಿಳಿಸುವ ಅಥವಾ ಅದಕ್ಕೆ ಒಪ್ಪಿಗೆ ನೀಡುವ ಕ್ರಮವಾಗಿದೆ.

Bar & Bench

ಖುಲಾ ಮೂಲಕ ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆ ಖುಲಾ ಜಾರಿಯಾದ ದಿನದಿಂದ ತನಗೆ ಪತಿ ಜೀವನಾಂಶ ನೀಡಬೇಕೆಂದು ಕೇಳುವಂತಿಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

ಮುಲ್ಲಾ ಅವರ ಮಹಮದೀಯ ಕಾನೂನಿನ ಪ್ರಕಾರ, ಖುಲಾ ಸಮ್ಮತಿಯ ವಿಚ್ಛೇದನವಾಗಿದ್ದು ಮದುವೆಯ ಬಂಧದಿಂದ ತನ್ನನ್ನು ಬಿಡುಗಡೆ ಮಾಡುವಂತೆ ಪತಿಗೆ ಮಹಿಳೆ ತಿಳಿಸುವ ಅಥವಾ ಅದಕ್ಕೆ ಒಪ್ಪಿಗೆ ನೀಡುವ ಕ್ರಮವಾಗಿದೆ.   

ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 125 ರ ಅಡಿಯಲ್ಲಿ ತಾನು ಮರುಮದುವೆಯಾಗುವವರೆಗೆ ಮುಸ್ಲಿಂ ಮಹಿಳೆ ಜೀವನಾಂಶ ಪಡೆಯಬಹುದು. ಆದರೆ ಈ ನಿಬಂಧನೆಯ 4ನೇ ವಿಧಿ ಪ್ರಕಾರ ಆಕೆ ಪತಿಯೊಂದಿಗೆ ಬದುಕಲು ನಿರಾಕರಿಸಿದರೆ ಅಥವಾ ಅವರು ಪರಸ್ಪರ ಒಪ್ಪಿಗೆ ಮೇಲೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ ಆಕೆ ಜೀವನಾಂಶ ಅಥವಾ ಮಧ್ಯಂತರ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ನ್ಯಾಯಮೂರ್ತಿ ಎ ಬದರುದ್ದೀನ್ ಹೇಳಿದರು.

ಖುಲಾ ಎಂದರೆ ಪತಿಯೊಂದಿಗೆ ವಾಸಿಸಲು ನಿರಾಕರಿಸುವುದಕ್ಕೆ ಸಮನಾಗಿರುವುದರಿಂದ ಖುಲಾ ಘೋಷಣೆ ಬಳಿಕ ಹೆಂಡತಿ ಜೀವನಾಂಶ ಪಡೆಯಲು ಅರ್ಹಳಾಗಿರುವುದಿಲ್ಲ ಎಂದು ಪೀಠ ವಿವರಿಸಿತು.

ತನ್ನ ಮಾಜಿ ಪತ್ನಿ ಮತ್ತು ಮಗನಿಗೆ ತಲಾ ₹ 10,000 ಭತ್ಯೆ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.

ಹೆಂಡತಿ ವ್ಯಭಿಚಾರ ನಡೆಸಿದ್ದರಿಂದ ಮದುವೆ ವಿಫವಾಗಿದ್ದು ಮೇಲಾಗಿ ಮೇ 27, 2021ರಂದು ಖುಲಾ ಘೋಷಿಸಿ ಮದುವೆ ವಿಸರ್ಜಿಸಿದ್ದರಿಂದ ಆಕೆಗೆ ಪತಿ ಜೀವನಾಂಶ ಪಾವತಿಸಬೇಕಿಲ್ಲ ಎಂದು ಪತಿ ಪರ ವಕೀಲರು ವಾದ ಮಂಡಿಸಿದರು.

ಹೆಂಡತಿಗೆ ತನ್ನನ್ನು ಮತ್ತು ತಮ್ಮ ಮಗುವನ್ನು ಸಲಹಲು ಯಾವುದೇ ಶಾಶ್ವತ ಆದಾಯ ಅಥವಾ ಉದ್ಯೋಗವಿಲ್ಲ ಎಂಬ ಅಂಶವನ್ನು ಪರಿಗಣಿಸಿದ ನ್ಯಾಯಾಲಯವು ಜೀವನಾಂಶ ನೀಡಬೇಕು ಎಂದು ತಿಳಿಸಿತು. ಆದರೆ ಗಂಡ ಪತ್ನಿಗೆ ನೀಡಬೇಕಾದ ಜೀವನಾಂಶ  ಮೊತ್ತ ಮತ್ತು ಅದರ ಅವಧಿಯನ್ನು ಮಾರ್ಪಾಟು ಮಾಡಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

XXX_v_YYY___Anr_.pdf
Preview