Muslim women 
ಸುದ್ದಿಗಳು

ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಮಹಿಳೆಯರು ಮುಕ್ತವಾಗಿ ಮಸೀದಿ ಪ್ರವೇಶಿಸಬಹುದು: ಸುಪ್ರೀಂಗೆ ಎಐಎಂಪಿಎಲ್‌ಬಿ ಹೇಳಿಕೆ

“ಪ್ರಾರ್ಥನೆಗಾಗಿ ಮಸೀದಿ ಪ್ರವೇಶಿಸಲು ಮುಸ್ಲಿಂ ಮಹಿಳೆ ಮುಕ್ತಳು. ಮಸೀದಿಯಲ್ಲಿ ಪ್ರಾರ್ಥನೆಗೆ ಲಭ್ಯವಿರುವಂತಹ ಸೌಲಭ್ಯ ಪಡೆಯಲು ಹಕ್ಕು ಚಲಾಯಿಸುವುದು ಅವಳ ಆಯ್ಕೆಯಾಗಿದೆ” ಎಂದು ಮಂಡಳಿ ಹೇಳಿತು.

Bar & Bench

“ನಮಾಜ್ (ಪ್ರಾರ್ಥನೆ) ಮಾಡುವುದಕ್ಕಾಗಿ ಮುಸ್ಲಿಂ ಮಹಿಳೆ ಮಸೀದಿ ಪ್ರವೇಶಿಸಲು ಮುಕ್ತಳು” ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ಗುರುವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ [ಫರ್ಹಾ ಅನ್ವರ್ ಹುಸೇನ್ ಶೇಖ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ವಕೀಲ ಎಂ ಆರ್ ಶಂಶದ್ ಅವರ ಮೂಲಕ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ನಮಾಜ್ ಮಾಡಲು ಮಸೀದಿಗಳಿಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ಇದೆ ಎಂದು ಎಐಎಂಪಿಎಲ್‌ಬಿ ಸ್ಪಷ್ಟ ನಿಲುವು ತೆಗೆದುಕೊಂಡಿದೆ.

ಮಸೀದಿಗಳಿಗೆ ಮುಸ್ಲಿಂ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮಂಡಳಿ ತನ್ನ ಪ್ರತಿ- ಅಫಿಡವಿಟ್‌ನಲ್ಲಿ ಈ ಪ್ರತಿಕ್ರಿಯೆ ನೀಡಿದೆ.

ಅರ್ಜಿಯ ಪ್ರಮುಖಾಂಶಗಳು

  • ಪ್ರಾರ್ಥನೆಗಾಗಿ ಮಸೀದಿ (ಮಸೀದಿ) ಪ್ರವೇಶಿಸಲು ಮುಸ್ಲಿಂ ಮಹಿಳೆ  ಮುಕ್ತಳು. ಮಸೀದಿಯಲ್ಲಿ ಪ್ರಾರ್ಥನೆಗಾಗಿ ಲಭ್ಯವಿರುವಂತಹ ಸೌಲಭ್ಯಗಳನ್ನು ಪಡೆಯಲು ತನ್ನ ಹಕ್ಕು ಚಲಾಯಿಸುವುದು ಅವಳ ಆಯ್ಕೆಯಾಗಿದೆ.

  • ಮಸೀದಿಗಳಂತಹ ಪೂಜಾ ಸ್ಥಳಗಳಲ್ಲಿನ ಧಾರ್ಮಿಕ ಆಚರಣೆಗಳು ಮುತ್ತವಾಲಿಗಳು ಮತ್ತು ಮಸೀದಿಗಳು ನಿಯಂತ್ರಿಸುವ ಸಂಪೂರ್ಣ ಖಾಸಗಿ ಕ್ರಮಗಳಾಗಿವೆ. ಹೀಗಾಗಿ ಅಂತಹ ಧಾರ್ಮಿಕ ಸ್ಥಳದಲ್ಲಿ ವಿವರವಾದ ವ್ಯವಸ್ಥೆ ಮಾಡುವಂತೆ ನೋಡಿಕೊಳ್ಳಲು ನ್ಯಾಯಾಲಯ ಅಥವಾ ಎಐಎಂಪಿಎಲ್‌ಬಿಗೆ ಸಾಧ್ಯವಿಲ್ಲ.

  • ಹಾಗಿರುವಾಗ, ಅರ್ಜಿಯಲ್ಲಿ ಪ್ರಸ್ತಾಪಿಸಲಾದ ವಿಷಯಗಳು ಕೇವಲ ಧಾರ್ಮಿಕ ಸ್ಥಳದ ನಿರ್ವಹಣೆಗೆ ಸಂಬಂಧಿಸಿದ್ದಲ್ಲದೆ ಧಾರ್ಮಿಕ ಸ್ಥಳದೊಂದಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ.

  • ಮುಸ್ಲಿಂ ಮಹಿಳೆಯರು ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುವುದನ್ನು ಅಥವಾ ಶುಕ್ರವಾರದ ನಮಾಜ್‌ಗಾಗಿ ಮಸೀದಿಗೆ ಬರುವುದನ್ನು ಇಸ್ಲಾಂ ಕಡ್ಡಾಯಗೊಳಿಸದಿದ್ದರೂ, ಅವರಿಗೆ ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಅನುಮತಿ ಇದೆ.  

  • ಮಸೀದಿಯಲ್ಲಿ ಎರಡೂ ಲಿಂಗಕ್ಕೆ ಸೇರಿದವರು ಒಟ್ಟಿಗೆ ಪ್ರಾರ್ಥನೆ ಸಲ್ಲಿಸುವಂತೆ ಯಾವುದೇ ಧಾರ್ಮಿಕ ಪಠ್ಯ ವಿವರಿಸುವುದಿಲ್ಲ. ಮೆಕ್ಕಾ ಮತ್ತು ಮದೀನಾದಲ್ಲಿಯೂ ಸಹ, ಪ್ರಾರ್ಥನೆಯ ಸಮಯದಲ್ಲಿ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಸ್ಥಳಗಳನ್ನು ಒದಗಿಸಲು ವ್ಯವಸ್ಥೆ ಮಾಡಲಾಗಿದೆ

  • ಫತ್ವಾ ಎನ್ನುವುದು ಯಾವುದೇ ಶಾಸನಬದ್ಧ ಬಲವನ್ನು ಹೊಂದಿರದ ಧಾರ್ಮಿಕ ಪಠ್ಯಗಳು ಮತ್ತು ಸಿದ್ಧಾಂತಗಳನ್ನು ಆಧರಿಸಿದ ಅಭಿಪ್ರಾಯವಾಗಿದೆ. ಧರ್ಮದಲ್ಲಿ ನಂಬಿಕೆ ಉಳ್ಳವರಿಗೆ ಫತ್ವಾ ಅಗತ್ಯವಿದ್ದರೆ ಅದನ್ನು ಹೊರಡಿಸುವುದನ್ನು ನ್ಯಾಯಾಂಗ ಆದೇಶದಿಂದ ನಿರ್ಬಂಧಿಸಲಾಗದು. ಹಾಗೆ ಮಾಡಿದರೆ ಅದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗುತ್ತದೆ.

ಮತ್ತೊಂದು ಪಿಐಎಲ್‌ಗೆ ಸಂಬಂಧಿಸಿದಂತೆಯೂ ಎಐಎಂಪಿಎಲ್‌ಬಿ ಈಗಾಗಲೇ ಇದೇ ನಿಲುವನ್ನು ತೆಗೆದುಕೊಂಡಿದೆ. ಮಸೀದಿಗಳಿಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣವು ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಪರಿಗಣಿಸಲಿರುವ ಪ್ರಶ್ನೆಗಳಲ್ಲಿ ಒಂದಾಗಿದೆ, ಜೊತೆಗೆ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಮಹಿಳೆಯರ ಹಕ್ಕುಗಳಿಗೆ ಸಂಬಂಧಿಸಿದ ಇತರ ಪ್ರಶ್ನೆಗಳಲ್ಲಿ ಒಂದಾಗಿದೆ.