ಮುಸ್ಲಿಂ ಮಹಿಳೆ
ಮುಸ್ಲಿಂ ಮಹಿಳೆ 
ಸುದ್ದಿಗಳು

ತಲಾಖ್ ಮೂಲಕ ವಿಚ್ಛೇದನ: ಮುಸ್ಲಿಂ ಮಹಿಳೆಯರು ನ್ಯಾಯಾಲಯದ ಮೊರೆ ಹೋಗುವ ಅಗತ್ಯವಿಲ್ಲ ಎಂದ ಕೇರಳ ಹೈಕೋರ್ಟ್

Bar & Bench

ಮುಸ್ಲಿಂ ವೈಯಕ್ತಿಕ ಕಾನೂನಿನಡಿ ತಲಾಖ್ ಮೂಲಕ ಪಡೆದ ವಿಚ್ಛೇದನವನ್ನು ದಾಖಲಿಸಿಕೊಳ್ಳುವಂತೆ ಜನನ, ಮರಣ ಹಾಗೂ ವಿವಾಹ ನೋಂದಾಣಾಧಿಕಾರಿಗೆ ನ್ಯಾಯಾಲಯದ ಆದೇಶದ ಮೂಲಕ ಒತ್ತಾಯಿಸಬೇಕಾಗಿಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.

ವೈಯಕ್ತಿಕ ಕಾನೂನಿನ ಪ್ರಕಾರ ವಿಚ್ಛೇದನ ಕ್ರಮಬದ್ಧವಾಗಿದ್ದರೆ, ತಲಾಖ್ ದಾಖಲಿಸಲು ಮುಸ್ಲಿಂ ಮಹಿಳೆಯನ್ನು ನ್ಯಾಯಾಲಯಕ್ಕೆ ಕಳುಹಿಸುವ ಅಗತ್ಯವಿಲ್ಲ. ಬದಲಿಗೆ ಸಂಬಂಧಪಟ್ಟ ನೋಂದಣಾಧಿಕಾರಿ ಸ್ವತಃ ತಲಾಖ್ ದಾಖಲಿಸಬಹುದು ಎಂದು ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಹೇಳಿದರು.

ವೈಯಕ್ತಿಕ ಕಾನೂನಿನ ಅಡಿ ಪಡೆದ ವಿಚ್ಛೇದನಗಳ ನೋಂದಣಿಗೆ ಅವಕಾಶ ನೀಡದ ಕೇರಳ ವಿವಾಹ ನೋಂದಣಿ (ಸಾಮಾನ್ಯ) ನಿಯಮಾವಳಿ- 2008ರಲ್ಲಿನ ಕಂದರವನ್ನು ಗಮನಿಸಿದ ನ್ಯಾಯಾಲಯ ಅದನ್ನು ಪರಿಹರಿಸಿತು.

ವೈಯಕ್ತಿಕ ಕಾನೂನು ಕೆಲವು ಸಂದರ್ಭಗಳಲ್ಲಿ ಒಂದಕ್ಕಿಂತ ಹೆಚ್ಚು ಮದುವೆಗಳನ್ನು ಅನುಮತಿಸುತ್ತದೆಯಾದ್ದರಿಂದ ಮುಸ್ಲಿಂ ಪತಿ ತನ್ನ ವೈಯಕ್ತಿಕ ಕಾನೂನಿಗೆ ಅನುಗುಣವಾಗಿ ತಲಾಖ್ ಹೇಳಿದರೆ, 2008ರ ನಿಯಮಾವಳಿ ಅಡಿಯಲ್ಲಿ ನಿರ್ವಹಿಸಲಾಗುವ ವಿವಾಹ ನೋಂದಣಿಯಲ್ಲಿನ ನಮೂದನ್ನು ತೆಗೆದುಹಾಕದೆ ಅವನು ಮರುಮದುವೆ ಆಗಬಹುದು. ಹೀಗಾಗಿ ಇದು ವಿಚ್ಛೇದಿತ ಮುಸ್ಲಿಂ ಮಹಿಳೆಗೆ ತೊಂದರೆ ಉಂಟುಮಾಡುತ್ತದೆಯೇ ವಿನಾ ವಿಚ್ಛೇದಿತ ಮುಸ್ಲಿಂ ಪುರುಷರಿಗೆ ಅಲ್ಲ. ಇತ್ತ 2008ರ ನಿಯಮಗಳ ಪ್ರಕಾರ ವಿವಾಹ ವಿಸರ್ಜನೆಯಾಗುವವರೆಗೆ ವಿಚ್ಛೇದಿತ ಮುಸ್ಲಿಂ ಮಹಿಳೆ ನ್ಯಾಯಾಲಯವನ್ನು ಸಂಪರ್ಕಿಸದೇ ಮರುಮದುವೆಯಾಗಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

"ಕಾನೂನನ್ನು ಪಾಲಿಸುವ ಮುಸ್ಲಿಂ ದಂಪತಿ ನಿಯಮಾವಳಿ 2008ರ ಪ್ರಕಾರ ತಮ್ಮ ಮದುವೆಯನ್ನು ನೋಂದಾಯಿಸಿದ್ದು ನಂತರ ಪತಿ ತಲಾಖ್ ಉಚ್ಚರಿಸಿದರೆ, ನಿಯಮಾವಳಿ 2008ರ ಪ್ರಕಾರ ವಿವಾಹ ನೋಂದಣಿ ಮುಸ್ಲಿಂ ಮಹಿಳೆಯರಿಗೆ ಮಾತ್ರ ಹೊರೆಯಾಗುತ್ತದೆಯಲ್ಲವೇ? " ಎಂದು ನ್ಯಾಯಾಲಯ ಪ್ರಶ್ನಿಸಿತು.

ವಿಚ್ಛೇದನವನ್ನು ನೋಂದಾಯಿಸುವ ಅಧಿಕಾರ ಮದುವೆಯನ್ನು ನೋಂದಾಯಿಸಿಕೊಳ್ಳುವ ಅಧಿಕಾರಕ್ಕೆ ಪೂರಕವಾಗಿದೆ. ಆದ್ದರಿಂದ, ವೈಯಕ್ತಿಕ ಕಾನೂನಿನ ಅಡಿಯಲ್ಲಿ ಪಡೆದ ವಿಚ್ಛೇದನಗಳನ್ನು ದಾಖಲಿಸಲು ನೋಂದಣಾಧಿಕಾರಿಗಳು ನ್ಯಾಯಾಲಯದ ಆದೇಶಗಳಿಗಾಗಿ ಕಾಯಬೇಕಾಗಿಲ್ಲ ಎಂದು ಅದು ಹೇಳಿದೆ.

"ಮದುವೆಯನ್ನು ನೋಂದಾಯಿಸುವ ಅಧಿಕಾರ ಇರುವುದಾದರೆ, ವೈಯಕ್ತಿಕ ಕಾನೂನಿನ ಅಡಿಯಲ್ಲಿ ವಿಚ್ಛೇದನ ನೋಂದಾಯಿಸುವ ಅಧಿಕಾರ ಇರುವುದಾದರೆ, ವಿಚ್ಛೇದನವನ್ನು ದಾಖಲಿಸುವ ಅಧಿಕಾರವೂ ಅಂತರ್ಗತವಾಗಿರಲಿದ್ದು ಅದು ಮದುವೆಯನ್ನು ನೋಂದಾಯಿಸುವ ಅಧಿಕಾರಿಗೆ ಪೂರಕವಾಗಿರುತ್ತದೆ. ವೈಯಕ್ತಿಕ ಕಾನೂನಿನ ಪ್ರಕಾರ ತಲಾಖ್ ಕ್ರಮಬದ್ಧವಾಗಿದ್ದರೆ ವಿಚ್ಛೇದಿತ ಮುಸ್ಲಿಂ ಮಹಿಳೆಯನ್ನು ವಿಚ್ಛೇದನ ದಾಖಲಿಸಿಕೊಳ್ಳಲು ನ್ಯಾಯಾಲಯಕ್ಕೆ ಕಳುಹಿಸುವ ಅಗತ್ಯವಿಲ್ಲ. ಸಂಬಂಧಪಟ್ಟ ಅಧಿಕಾರಿ ನ್ಯಾಯಾಲಯದ ಆದೇಶಕ್ಕಾಗಿ ಒತ್ತಾಯಿಸದೆ ತಲಾಖ್‌ ದಾಖಲಿಸಿಕೊಳ್ಳಬಹುದು" ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿ ಪಿ.ವಿ.ಕುಂಞಿಕೃಷ್ಣನ್

2008ರ ನಿಯಮಾವಳಿಯ ನ್ಯೂನತೆಗಳನ್ನು ಸರಿಪಡಿಸಲು ಶಾಸಕಾಂಗ ಪರಿಶೀಲನೆ ನಡೆಸುವಂತೆ ಸೂಚಿಸುವುದು ಸೂಕ್ತವೆಂದು ಕೂಡ ನ್ಯಾಯಾಲಯ ಇದೇ ವೇಳೆ ತಿಳಿಸಿತು.

ತಲಾಖ್ ಘೋಷಿಸಿದ ನಂತರ 2014ರಲ್ಲಿ ಪತಿಯೊಂದಿಗಿನ ವಿವಾಹ ರದ್ದುಗೊಂಡಿದ್ದ ಮಹಿಳೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಈ ತೀರ್ಪು ನೀಡಲಾಗಿದೆ.

ಮಹಲ್‌ ಖಾಜಿ ಅವರಿಂದ ವಿಚ್ಛೇದನ ಪ್ರಮಾಣಪತ್ರ ಪಡೆದಿದ್ದ ಮಹಿಳೆ ತಮ್ಮ ವಿವಾಹ ನೋಂದಾಯಿಸಿದ್ದ ಅದೇ ನೋಂದಣಾಧಿಕಾರಿಯನ್ನು ಸಂಪರ್ಕಿಸಿ ಮದುವೆ ವಿಸರ್ಜನೆಯಾಗಿರುವ ಸಂಬಂಧ ವಿವಾಹ ರಿಜಿಸ್ಟರ್‌ನಲ್ಲಿ ವಿಚ್ಛೇದನ ನೋಂದಾಯಿಸಿಕೊಳ್ಳುವಂತೆ ಕೋರಿದ್ದರು. ಆದರೆ ಮದುವೆಯನ್ನು ನೋಂದಾಯಿಸಿದ್ದ 2008ರ ನಿಯಮಾವಳಿಯಲ್ಲಿ ವಿಚ್ಛೇದನಕ್ಕೆ ಅನುಮತಿಸುವ ನಿಯಾಮ ಇಲ್ಲದಿರುವುದರಿಂದ ವಿವಾಹ ವಿಸರ್ಜನೆಗೆ ನೋಂದಣಾಧಿಕಾರಿ ನಿರಾಕರಿಸಿದ್ದರು. ಹೀಗಾಗಿ ವಿಚ್ಛೇದನವನ್ನು ದಾಖಲಿಸಲು ನೋಂದಣಾಧಿಕಾರಿಗೆ ನಿರ್ದೇಶನ ನೀಡುವಂತೆ ಮಹಿಳೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Neyan Veettil Behsana v. Local Registrar for Births and Deaths & Marriages.pdf
Preview