RSS Leader Kalladka Prabhakar Bhat and Karnataka HC 
ಸುದ್ದಿಗಳು

ಮುಸ್ಲಿಮ್‌ ಮಹಿಳೆಯರ ಅವಹೇಳನ: ದೇಶದ್ರೋಹ ಪ್ರಕರಣ ದಾಖಲಿಸಲು ಮನವಿ; ತನಿಖೆಗೆ ಸಹಕರಿಸಲು ಕಲ್ಲಡ್ಕಗೆ ಹೈಕೋರ್ಟ್‌ ಸೂಚನೆ

ಆರೋಪಿ ಪ್ರಭಾಕರ ಭಟ್ ವಿರುದ್ದ ರೌಡಿಪಟ್ಟಿ ಮಾತ್ರವಲ್ಲ. ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆ (ಯುಎಪಿಎ) ಸೇರಿದಂತೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು ಎಂದು ವಾದಿಸಿದ ದೂರುದಾರೆ ನಜ್ಮಾ ನಜೀರ್‌ ಪರ ವಕೀಲ ಎಸ್‌ ಬಾಲಕೃಷ್ಣನ್.‌

Bar & Bench

ಮುಸ್ಲಿಮ್‌ ಮಹಿಳೆಯರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿರುವ ಆರೋಪಕ್ಕೆ ಗುರಿಯಾಗಿರುವ ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ತನಿಖೆಗೆ ಸಹಕಾರಿಸಬೇಕು. ಆದರೆ, ಸರ್ಕಾರ ಅವರನ್ನು ಬಂಧಿಸಬಾರದು ಎಂದು ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರಕ್ಕೆ ಗುರುವಾರ ನಿರ್ದೇಶಿಸಿದೆ.

ಶ್ರೀರಂಗಪಟ್ಟಣ ಟೌನ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದತಿ ಕೋರಿ ಕಲ್ಲಡ್ಕ ಪ್ರಭಾಕರ್‌ ಭಟ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ರಾಜೇಶ್‌ ರೈ ಕೆ ಅವರ ನೇತೃತ್ವದ ರಜಾಕಾಲೀನ ಪೀಠವು ನಡೆಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಪ್ರಭಾಕರ್‌ ಭಟ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು “ರಾಜಕೀಯ ಪ್ರೇರಿತವಾಗಿ ದೂರು ದಾಖಲಿಸಲಾಗಿದ್ದು, ಅರ್ಜಿದಾರರು ವಯೋವೃದ್ದರು. ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರನ್ನು ಬಂಧಿಸುವ ಸಾಧ್ಯತೆ ಇದೆ. ಹೀಗಾಗಿ, ಎಫ್‌ಐಆರ್‌ಗೆ ತಡೆ ನೀಡಬೇಕು” ಎಂದು ಕೋರಿದರು.

ದೂರುದಾರೆ ನಜ್ಮಾ ನಜೀರ್ ಪರ ವಕೀಲ ಎಸ್‌ ಬಾಲಕೃಷ್ಣನ್‌ ಅವರು “ಆರೋಪಿ/ಅರ್ಜಿದಾರರ ಹೇಳಿಕೆ ಪರಿಶೀಲಿಸಬೇಕು. ಮುಸ್ಲಿಮ್ ಮಹಿಳೆಯರಿಗೆ ಒಬ್ಬ ಗಂಡ ಅಲ್ಲ. ದಿನಕ್ಕೊಬ್ಬ ಗಂಡಂದಿರು ಎಂದಿದ್ದಾರೆ. ಇದು ಸಮಾಜದಲ್ಲಿ ಅಶಾಂತಿ ಹುಟ್ಟಿಸುತ್ತಿದೆ. ಎಲ್ಲಾ ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಆರೋಪಿ ಈ ಹಿಂದೆಯೂ ಇಂತಹ ಕೃತ್ಯ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ. ಹೀಗಾಗಿ, ಕಾನೂನು ಅದರ ಕೆಲಸ ಮಾಡಲಿ” ಎಂದರು.

ಆಗ ಅರುಣ್‌ ಶ್ಯಾಮ್‌ ಅವರು “ಮುಂದಿನ ದಿನಾಂಕದವರೆಗೆ ಬಂಧಿಸದಂತೆ ನಿರ್ದೇಶಿಸಬೇಕು. ಪ್ರಭಾಕರ ಭಟ್ ವಿರುದ್ದ ಸರ್ಕಾರ ರೌಡಿ ಪಟ್ಟಿ ಓಪನ್ ಮಾಡುವ ಸಾಧ್ಯತೆ ಇದೆ” ಎಂದರು.

ಇದಕ್ಕೆ ಬಾಲಕೃಷ್ಣನ್‌ ಅವರು “ಆರೋಪಿ ಪ್ರಭಾಕರ ಭಟ್ ವಿರುದ್ದ ರೌಡಿಶೀಟ್ ಮಾತ್ರವಲ್ಲ. ಕಾನೂನುಬಾಹಿರ ಚಟುವಟಿಕೆಗಳ ನಿಷೇಧ ಕಾಯಿದೆ (ಯುಎಪಿಎ) ಸೇರಿದಂತೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಸಮಾಜದಲ್ಲಿ ಭಯ ಉತ್ಪಾದಿಸುವ ಭಯೋತ್ಪಾದಕರು ಇವರು. ಸುಪ್ರೀಂ ಕೋರ್ಟ್ ಈ ರೀತಿ ದ್ವೇಷಭಾಷಣ ಮಾಡುವವರ ವಿರುದ್ದ ಹಲವು ತೀರ್ಪು ನೀಡಿದೆ. ಈಗ ಆರೋಪಿ ಬಗ್ಗೆ ತನಿಖೆ ಆಗಬೇಕಿದೆ. ಪೊಲೀಸರು ಹಾಕಿರುವ ಎಲ್ಲಾ ಸೆಕ್ಷನ್ ಗಳು ಸರಿಯಾಗಿವೆ. ಈ ಪ್ರಕರಣದ ಸಂಪೂರ್ಣ ತನಿಖೆ ನಡೆಯಬೇಕು. ಇದರ ಹಿಂದೆ ಕೋಮುಗಲಭೆಯ ಹುನ್ನಾರ ಇದೆ. ಹೀಗಾಗಿ, ಇದು ಸರಳ ಪ್ರಕರಣ ಅಲ್ಲ” ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರಾದ ಬಿ ಎನ್ ಜಗದೀಶ್‌ ಅವರು “ಅರ್ಜಿದಾರರಿಗೆ ವಿಚಾರಣಾಧೀನ ನ್ಯಾಯಾಲಯದಲ್ಲಿ ಮಧ್ಯಂತರ ಜಾಮೀನಾಗಿದೆ. ಹೀಗಾಗಿ, ನಾವು ಅವರನ್ನು ಬಂಧಿಸುತ್ತಿಲ್ಲ. ಆದರೆ, ಅವರು ತನಿಖೆಗೆ ಸಹಕರಿಸಬೇಕು. ಜನರನ್ನು ರಕ್ಷಿಸುವ ಹೊಣೆಗಾರಿಕೆ ಸರ್ಕಾರಕ್ಕಿದೆ. ದ್ವೇಷ ಭಾಷಣ ಮಾಡುವವರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ದೂರಿನ ಸಾರಾಂಶ ಅಥವಾ ಯಾರು ದೂರು ನೀಡಿದ್ದಾರೆ ಎಂಬುದು ಮುಖ್ಯವಲ್ಲ. ಅರ್ಜಿದಾರರು ಮಾಡಿರುವ ಇಡೀ ಭಾಷಣವನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಸೂಕ್ತ ವರದಿಯನ್ನು ಸಂಬಂಧಿತ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು” ಎಂದರು.

ಆಗ ಪೀಠವು “ಅರ್ಜಿದಾರರು ತನಿಖೆಗೆ ಸಹಕರಿಸಬೇಕು. ಸರ್ಕಾರ ಅರ್ಜಿದಾರರನ್ನು ಬಂಧಿಸಬಾರದು” ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜನವರಿ 9, 2024ಕ್ಕೆ ಮುಂದೂಡಿತು.