ಇಸ್ಲಾಂ ಧರ್ಮವನ್ನು ಪ್ರತಿಪಾದಿಸುವ ವ್ಯಕ್ತಿ ತನ್ನ ಹೆಂಡತಿ ಜೀವಂತ ಇರುವಂತೆಯೇ ಲಿವ್ ಇನ್ ಸಂಬಂಧವನ್ನು ಹಕ್ಕಾಗಿ ಪಡೆಯಲಾಗದು ಎಂದು ಅಲಾಹಾಬಾದ್ ಹೈಕೋರ್ಟ್ ಈಚೆಗೆ ಹೇಳಿದೆ.
ನಾಗರಿಕರ ವೈವಾಹಿಕ ನಡೆಯನ್ನು ಶಾಸನಾತ್ಮಕವಾಗಿ ಹಾಗೂ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ನಿಯಂತ್ರಿಸುವಾಗ ಸಂಪ್ರದಾಯಗಳಿಗೆ ಸಮಾನ ಮನ್ನಣೆ ಒದಗಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಅತ್ತಾವು ರೆಹಮಾನ್ ಮಸೂದಿ ಮತ್ತು ನ್ಯಾಯಮೂರ್ತಿ ಅಜಯ್ ಕುಮಾರ್ ಶ್ರೀವಾಸ್ತವ ಅವರಿದ್ದ ವಿಭಾಗೀಯ ಪೀಠ ತಿಳಿಸಿದೆ.
“ರೂಢಿ, ಸಂಪ್ರದಾಯಗಳು ಸಂವಿಧಾನದಿಂದ ಮಾನ್ಯತೆ ಪಡೆದಿದ್ದು ಸಮರ್ಥ ಶಾಸಕಾಂಗ ರೂಪಿಸಿದ ಕಾನೂನಿನಂತೆ ಸಮಾನ ಮೂಲಗಳಾಗಿವೆ. ಒಮ್ಮೆ ನಮ್ಮ ಸಂವಿಧಾನದ ಚೌಕಟ್ಟಿನೊಳಗೆ ರೂಢಿ ಸಂಪ್ರದಾಯಗಳನ್ನು ಮಾನ್ಯ ಕಾನೂನು ಎಂದು ಗುರುತಿಸಿದಾಗ ಅಂತಹ ಕಾನೂನುಗಳನ್ನು ಕೂಡ ಸೂಕ್ತ ಪ್ರಕರಣದಲ್ಲಿ ಜಾರಿಗೆ ತರಬಹುದಾಗಿದೆ” ಎಂದು ನ್ಯಾಯಾಲಯ ನುಡಿದಿದೆ.
ಇಬ್ಬರು ವ್ಯಕ್ತಿಗಳ ನಡುವಿನ ಅಂತಹ ಸಂಬಂಧಗಳ ಮೇಲೆ ರೂಢಿ ಸಂಪ್ರದಾಯಗಳು ನಿಷೇಧವಿರುವಾಗ ಸಂವಿಧಾನದ 21ನೇ ವಿಧಿಯಡಿ ಒದಗಿಸಲಾದ ಸಾಂವಿಧಾನಿಕ ರಕ್ಷಣೆಯಡಿ ಲಿವ್ ಇನ್ ಸಂಬಂಧದ ಹಕ್ಕಿಗೆ ಬೆಂಬಲ ನೀಡಲಾಗದು ಎಂದು ಅದು ಹೇಳಿದೆ.
ವ್ಯಕ್ತಿಯ ವಿರುದ್ಧದ ಅಪಹರಣ ಪ್ರಕರಣವನ್ನು ರದ್ದುಪಡಿಸಿ ಹಿಂದೂ-ಮುಸ್ಲಿಂ ಜೋಡಿಯ ಸಂಬಂಧದಲ್ಲಿ ಮಧ್ಯಪ್ರವೇಶಿಸದಂತೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.
ಹಿಂದೆಯೂ ಜೋಡಿ ಸ್ವಾತಂತ್ರ್ಯದ ರಕ್ಷಣೆಗಾಗಿ ಅರ್ಜಿ ಸಲ್ಲಿಸಿದ್ದರು ಮುಸ್ಲಿಂ ಪುರುಷನಿಗೆ ಈಗಾಗಲೇ ಮದುವೆಯಗಿದ್ದು ಐದು ವರ್ಷದ ಮಗಳಿದ್ದಾಳೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು.
ತನ್ನ ಪತ್ನಿ ಕೆಲ ಕಾಯಿಲೆಗಳಿಂದ ಬಳಲುತ್ತಿದ್ದುದರಿಂದ ತಾನು ಲಿವ್ ಇನ್ ಸಂಬಂಧ ಹೊಂದುವುದಕ್ಕೆ ಅಭ್ಯಂತರ ಇಲ್ಲ ಎಂದು ಆಗ ಆತ ಪ್ರತಿಪಾದಿಸಿದ್ದ. ಪ್ರಸ್ತುತ ಅರ್ಜಿಯಲ್ಲಿ ಆತ ತನ್ನ ಪತ್ನಿಗೆ ತಲಾಖ್ ನೀಡಿದ್ದಾಗಿ ಹೇಳಿಕೊಂಡಿದ್ದ.
ವ್ಯಕ್ತಿಯ ಪತ್ನಿ ಹಾಗೂ ಆತನ ಲಿವ್ ಇನ್ ಸಂಗಾತಿಯನ್ನು ನ್ಯಾಯಾಲಯದ ಸೂಚನೆಯಂತೆ ಏಪ್ರಿಲ್ 29 ರಂದು ಹಾಜರುಪಡಿಸಿದಾಗ ಕೆಲವು ಆತಂಕಕಾರಿ ವಿಚಾರಗಳು ಪೀಠಕ್ಕೆ ತಿಳಿದುಬಂದಿದ್ದವು.
ವ್ಯಕ್ತಿಯ ಪತ್ನಿ ಉತ್ತರಪ್ರದೇಶದಲ್ಲಿರದೆ ಮುಂಬೈನಲ್ಲಿ ತನ್ನ ಅತ್ತೆ ಮಾವಂದಿರ ಜೊತೆ ವಾಸವಿದ್ದಾರೆ. ಅಲ್ಲದೆ ಈಗಾಗಲೇ ಮದುವೆಯಾಗಿರುವ ಮುಸ್ಲಿಂ ವ್ಯಕ್ತಿಯೊಂದಿಗೆ ಹಿಂದೂ ಯುವತಿ ಲಿವ್ ಇನ್ ಸಂಬಂಧಕ್ಕೆ ಮುಂದಾಗಿದ್ದಳು.
ಇಬ್ಬರು ವ್ಯಕ್ತಿಗಳು ಅವಿವಾಹಿತರಾಗಿ ಪ್ರೌಢ ವಯಸ್ಕರಾಗಿದ್ದು, ತಮ್ಮ ಜೀವನವನ್ನು ತಮ್ಮದೇ ಆದ ರೀತಿಯಲ್ಲಿ ನಡೆಸಲು ನಿರ್ಧರಿಸಿದ್ದರೆ ಆಗ ಪರಿಸ್ಥಿತಿ ಭಿನ್ನ ಇರುತ್ತಿತ್ತು ಎಂದ ನ್ಯಾಯಾಲಯ ಮುಸ್ಲಿಂ ವ್ಯಕ್ತಿಯ ಹೆಂಡತಿಯ ಹಕ್ಕು ಮತ್ತು ಅವರಿಬ್ಬರ ಅಪ್ರಾಪ್ತ ವಯಸ್ಕ ಮಗುವಿನ ಹಿತಾಸಕ್ತಿಗಳನ್ನು ಗಮನಿಸಿದಾಗ ಲಿವ್ ಇನ್ ಸಂಬಂಧ ಮುಂದುವರಿಕೆಗೆ ಅವಕಾಶ ನೀಡಲಾಗದು ಎಂದು ತಿಳಿಸಿತು.
ಆದ್ದರಿಂದ ಲಿವ್- ಇನ್ ಸಂಗಾತಿಯಾಗಿದ್ದ ಯುವತಿಯನ್ನು ಆಕೆಯ ಪೋಷಕರ ಮನೆಗೆ ಬಿಟ್ಟು ಬರುವಂತೆ ಪೊಲೀಸರಿಗೆ ಸೂಚಿಸಿದ ನ್ಯಾಯಾಲಯ ಆ ಬಗ್ಗೆ ವರದಿ ಸಲ್ಲಿಸುವಂತೆ ಆದೇಶಿಸಿತು. ಇಂದು (ಮೇ 8) ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.