ಮಠ ಅಥವಾ ಮಠಾಧಿಪತಿಯ ಉತ್ತರಾಧಿಕಾರಿಯು ಕಾನೂನಾತ್ಮಕವಾಗಿ ಸ್ವಾಮೀಜಿಯ ಪ್ರತಿನಿಧಿಯಾಗಿರುವುದರಿಂದ ಅವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರೆ ವಿಮಾ ಪರಿಹಾರ ಕ್ಲೇಮು ಮಾಡಬಹುದು ಎಂದು ಈಚೆಗೆ ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಆದೇಶಿಸಿದೆ.
ಮಠಾಧಿಪತಿಯು ಸನ್ಯಾಸಿಯಾಗಿದ್ದು, ಮಠದ ಅಧ್ಯಾತ್ಮ ಮತ್ತು ನಿರ್ವಹಣಾ ಚಟುವಟಿಕೆಗಳನ್ನು ಮುಂದುವರಿಸುತ್ತಿದ್ದು, ಆ ಮೂಲಕ ಸಾಂಸ್ಥಿಕ ಅವಲಂಬನೆ ಸೃಷ್ಟಿಸಿದೆ ಎಂದು ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ತ್ಯಾಗರಾಜ್ ಎನ್. ಇನವಲ್ಲಿ ಅವರ ವಿಭಾಗೀಯ ಪೀಠ ಹೇಳಿದೆ.
“ಮಠಾಧಿಪತಿ ಸ್ಥಾನವು ವೈಯಕ್ತಿಕ ಜೀವನೋಪಾಯಕ್ಕಾಗಿ ಸಂಪಾದಿಸುವ ಸಾಮಾನ್ಯ ವ್ಯಕ್ತಿಯ ಸ್ಥಾನವಲ್ಲ, ಬದಲಾಗಿ ಮಠದ ಕಾರ್ಯನಿರ್ವಹಣೆ, ಆಡಳಿತ ಮತ್ತು ನಿರಂತರತೆಯೊಂದಿಗೆ ಅವಿಭಾಜ್ಯ ಸಂಬಂಧ ಹೊಂದಿರುವ ಆಧ್ಯಾತ್ಮಿಕ ಮುಖ್ಯಸ್ಥನ ಸ್ಥಾನವಾಗಿದೆ” ಎಂದು ನ್ಯಾಯಾಲಯ ವ್ಯಾಖ್ಯಾನಿಸಿದೆ.
ಬಾಳೆ ಹೊನ್ನೂರು ಶ್ರೀಮದ್ ರಾಂಬಾಪುರ ವೀರಸಿಂಹಾಸನ ಮಠದ ಸುತ್ರೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರು 2011ರ ಮೇ 20ರಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಜೀಪು ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ವಾಮೀಜಿ ನಿಧನರಾಗಿದ್ದರು.
ಹೀಗಾಗಿ, ವಿಮೆ ಕ್ಲೇಮಿಗಾಗಿ ಮಠ ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ್ದ ಮೋಟಾರು ಅಪಘಾತ ಕ್ಲೇಮು ನ್ಯಾಯಮಂಡಳಿಯು ಸ್ವಾಮೀಜಿಯನ್ನು ಯಾರೂ ಅವಲಂಬಿಸಿಲ್ಲ ಎಂದು ಕ್ಲೇಮು ನಿರಾಕರಿಸಿತ್ತು. ಸನ್ಯಾಸಿಯಾದ ಸ್ವಾಮೀಜಿಯು ಪ್ರಾಪಂಚಿಕ ಸಂಬಂಧಗಳನ್ನು ಕಳೆದುಕೊಂಡಿರುವುದರಿಂದ ಯಾವುದೇ ಸಂಬಂಧ ಇರುವುದಿಲ್ಲ ಎಂದು ಮಠದ ಮುಖ್ಯಸ್ಥರ ನಿರ್ಗಮನದಿಂದ ಹಾನಿ ಮತ್ತು ಅಂತ್ಯ ಸಂಸ್ಕಾರದ ವೆಚ್ಚವಾಗಿ 1.2 ಲಕ್ಷ ನಿಗದಿಪಡಿಸಿತ್ತು.
ಈ ಆದೇಶವನ್ನು ಮಠವು ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಕಂಪನಿಯು ಮಠದ ಉತ್ತರಾಧಕಾರಿಯನ್ನು ಅವಲಂಬಿತರು ಎಂದು ಪರಿಗಣಿಸಲಾಗದು. ಏಕೆಂದರೆ ಸಾವನ್ನಪ್ಪಿದ ಸ್ವಾಮೀಜಿಯು ಸ್ವತಂತ್ರವಾದ ಅಧ್ಯಾತ್ಮ ಜೀವನ ನಡೆಸಿದ್ದರು ಎಂದು ವಾದಿಸಿತ್ತು.
ಇದನ್ನು ತಿರಸ್ಕರಿಸಿದ ಪೀಠವು ಸನ್ಯಾಸಿ ಜೀವನವನ್ನು ಅರ್ಥೈಸುವಲ್ಲಿ ನ್ಯಾಯಮಂಡಳಿಯು ವಿಫಲವಾಗಿದೆ ಎಂದಿದೆ.
“ತ್ಯಾಗವು ಭೌತಿಕ ತ್ಯಾಗಕ್ಕೆ ಮಾತ್ರ ಸಂಬಂಧಿಸಿದೆ, ಎಲ್ಲಾ ರೀತಿಯಲ್ಲೂ ಸಂಪೂರ್ಣ ಬೇರ್ಪಡುವಿಕೆಗೆ ಅಲ್ಲ. ಸನ್ಯಾಸಿ ಜೀವನವನ್ನು ಸ್ವೀಕರಿಸಿದ ವ್ಯಕ್ತಿ ಮಠದ ಅಗತ್ಯಗಳನ್ನು ಪೂರೈಸುತ್ತಾನೆ ಮತ್ತು ವ್ಯವಸ್ಥಾಪಕ ಕರ್ತವ್ಯಗಳನ್ನು ನಿರ್ವಹಿಸುತ್ತಾನೆ” ಎಂದು ಪೀಠ ಹೇಳಿದೆ.
ಇಂಥ ಪ್ರಕರಣಗಳಲ್ಲಿ ಅವಲಂಬಿತರು ಎಂದರೆ ರಕ್ತ ಸಂಬಂಧಿಗಳಿಗೆ ಸೀಮಿತವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
“ವ್ಯಕ್ತಿಯು ಅವಲಂಬಿತರನ್ನು ಬೆಂಬಲಿಸುವ ಬದಲು, ವ್ಯಕ್ತಿಯ ಸ್ಥಾನ, ಸೇವೆಗಳು ಮತ್ತು ಆಧ್ಯಾತ್ಮಿಕ ಅಧಿಕಾರದಿಂದ ಲಾಭವನ್ನು ಪಡೆಯುವುದು ಸಂಸ್ಥೆಯಾಗಿದೆ. ಆದ್ದರಿಂದ, ಅವಲಂಬನೆಯು ಸಂಸ್ಥೆ ಕೇಂದ್ರಿತವಾಗಿದೆ” ಎಂದು ನ್ಯಾಯಾಲಯ ಹೇಳಿದೆ.
ಮಠಾಧಿಪತಿಯ ಮರಣವು ಸ್ಪಷ್ಟವಾದ ಸಾಂಸ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಇದರಲ್ಲಿ ನಾಯಕತ್ವದ ಅಡ್ಡಿ, ಆಡಳಿತಾತ್ಮಕ ನಿರಂತರತೆ ಮತ್ತು ಕೊಡುಗೆಗಳು ಮತ್ತು ಆದಾಯದ ಮೇಲೆ ಸಂಭಾವ್ಯ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಕಾನೂನು ಮತ್ತು ಕ್ರಿಯಾತ್ಮಕ ಅರ್ಥದಲ್ಲಿ ಮಠವು ಮೃತರ ಆಸ್ತಿ ಮತ್ತು ಹಿತಾಸಕ್ತಿಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಿರುವ ನ್ಯಾಯಾಲಯ, ಮಠವು ಕಾನೂನು ಪ್ರತಿನಿಧಿಯಾಗಿ ಅರ್ಹತೆ ಹೊಂದಿದೆ ಮತ್ತು ಅವಲಂಬನೆಯ ನಷ್ಟದ ಶೀರ್ಷಿಕೆಯಡಿಯಲ್ಲಿ ಪರಿಹಾರಕ್ಕಾಗಿ ಹಕ್ಕನ್ನು ಉಳಿಸಿಕೊಳ್ಳಬಹುದು ಎಂದು ತೀರ್ಪು ಹೇಳಿದೆ.
ಆದ್ದರಿಂದ, ನ್ಯಾಯ ಮಂಡಳಿಯ ಆದೇಶವನ್ನು ಬದಿಗೆ ಸರಿಸಿರುವ ಹೈಕೋರ್ಟ್, ₹4,74,330 ಮತ್ತು ಅದಕ್ಕೆ ವಾರ್ಷಿಕ ಶೇ.6 ಬಡ್ಡಿಯಂತೆ ಅರ್ಜಿ ಸಲ್ಲಿಸಿದ ದಿನದಿಂದ ಇಲ್ಲಿಯವರೆಗೆ ಪಾವತಿಸಬೇಕು ಎಂದು ನಿರ್ದೇಶಿಸಿದೆ.