Murugha Mutt and Dr. Shivamurthy Murugha Sharanaru
Murugha Mutt and Dr. Shivamurthy Murugha Sharanaru 
ಸುದ್ದಿಗಳು

ಮಠದ ಜಮೀನು ಮಾರಾಟ: ಮುರುಘಾ ಶರಣರ ವಿರುದ್ಧ ಬಾಡಿ ವಾರೆಂಟ್​ ಜಾರಿ ಮಾಡಿದ ಬೆಂಗಳೂರಿನ ಎಸಿಎಂಎಂ ನ್ಯಾಯಾಲಯ

Bar & Bench

ಬೆಂಗಳೂರಿನ ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮದಲ್ಲಿ ಚಿತ್ರದುರ್ಗ ಮುರುಘಾ ಮಠಕ್ಕೆ ಸೇರಿದ 7 ಎಕರೆ 18 ಗುಂಟೆ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ ಕ್ರಿಮಿನಲ್‌ ಆರೋಪಕ್ಕೆ ಸಂಬಂಧಿಸಿದಂತೆ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಬೆಂಗಳೂರಿನ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಶುಕ್ರವಾರ ಬಾಡಿ ವಾರೆಂಟ್‌ ಹೊರಡಿಸಿದೆ.

ಮಠದ ಭಕ್ತ ತುಮಕೂರಿನ ಪಿ ಎಸ್‌ ಪ್ರಕಾಶ್‌ ಅಲಿಯಾಸ್‌ ಪಂಚಿ ಎಂಬುವರು ದಾಖಲಿಸಿದ್ದ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ ನಾಲ್ಕನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ನ್ಯಾಯಾಧೀಶರಾದ ರಾಚೋಟಿ ಮಹಾಗುಂಡಪ್ಪ ಶಿರೂರ್‌ ಅವರು ನಡೆಸಿದರು.

ಪೋಕ್ಸೊ ಪ್ರಕರಣದಲ್ಲಿ ಬಂಧಿಯಾಗಿ ಚಿತ್ರದುರ್ಗ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಶರಣರನ್ನು ಫೆಬ್ರುವರಿ 9ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಚಿತ್ರದುರ್ಗ ಪೊಲೀಸ್‌ ವರಿಷ್ಠಾಧಿಕಾರಿಗೆ ನ್ಯಾಯಾಲಯವು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಚಿತ್ರದುರ್ಗದ ಮುರುಘರಾಜೇಂದ್ರ ಮಠಕ್ಕೆ ಸೇರಿದ ಬೆಂಗಳೂರು ದಕ್ಷಿಣ ಕೆಂಗೇರಿ ಹೋಬಳಿಯ ಸೂಲಿಕೆರೆ ಗ್ರಾಮದಲ್ಲಿ ಸರ್ವೇ ನಂ 34 ರಲ್ಲಿ 7 ಎಕರೆ 18 ಗುಂಟೆ ಜಮೀನಿತ್ತು. ಈ ಜಮೀನನ್ನು ಶಿವಮೂರ್ತಿ ಮುರುಘಾ ಶರಣರು, ಎರಡನೇ ಆರೋಪಿಯಾಗಿರುವ ಆನಂದ್​ ಕುಮಾರ್​ ಎಂಬುವರಿಗೆ ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಪ್ರಕಾಶ್​ ಅವರು ಕೆಂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಅಲ್ಲದೆ, 7 ಎಕರೆ 18 ಗುಂಟೆ ಜಮೀನಿಗೆ ಮಾರುಕಟ್ಟೆ ಬೆಲೆಯಂತೆ 7 ಕೋಟಿ ರೂಪಾಯಿಯಾಗುತ್ತದೆ. ಆದರೆ, ಇದೇ ಜಮೀನನ್ನು ಕೇವಲ 49 ಲಕ್ಷ ರೂಪಾಯಿಗಳಿಗೆ ಸ್ವಾಮೀಜಿ ಮಾರಾಟ ಮಾಡಿದ್ದಾರೆ. ಈ ಸಂಬಂಧ ಬೆಂಗಳೂರಿನ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಕ್ರಯ ಮಾಡಿಕೊಡಲಾಗಿದೆ ಎಂದು ಆರೋಪಿಸಿದ್ದರು.

ಅಲ್ಲದೆ, 1995ರಲ್ಲಿ ಹಾವೇರಿಯಲ್ಲಿ ಮಠದ ಜಮೀನು ಮಾರಾಟ ಮಾಡುವ ಸಂದರ್ಭದಲ್ಲಿ ಚಾರಿಟಿ ಕಮಿಷನರ್​ ಅನುಮತಿ ಪಡೆಯಲಾಗಿತ್ತು. ಆದರೆ, ಕೆಂಗೇರಿ ಬಳಿಯ ಜಮೀನನ್ನು ಮಾರಾಟ ಮಾಡುವಾಗ ಈ ಪ್ರಕ್ರಿಯೆ ಪಾಲಿಸಲಾಗಿಲ್ಲ ಎಂದು ದೂರಲಾಗಿದೆ.

ಡಾ. ಶಿವಮೂರ್ತಿ ಶರಣರು ಮತ್ತು ಮಠದ ಜಮೀನು ಖರೀದಿ ಮಾಡಿರುವ ಆನಂದ ಕುಮಾರ್​ ಭಕ್ತರಿಗೆ ಯಾವುದೇ ಮಾಹಿತಿ ನೀಡಿಲ್ಲ. ಯಾವುದೇ ರೀತಿಯ ಸಾರ್ವಜನಿಕ ಪತ್ರಿಕಾ ಪ್ರಕಟಣೆ ಹೊರಡಿಸದೆ ಮಾರಾಟ ಮಾಡಲಾಗಿದೆ. ಆದ್ದರಿಂದ, ಆರೋಪಿಗಳಾದ ಡಾ. ಶಿವಮೂರ್ತಿ ಶರಣರು ಮತ್ತು ಆನಂದ್​ ಕುಮಾರ್​ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರ ಕೋರಿದ್ದರು. ಈ ಸಂಬಂಧ 2019ರ ನವೆಂಬರ್‌ 13ರಂದು ಪ್ರಕಾಶ್‌ ಅವರು ನ್ಯಾಯಾಲಯದ ಮುಂದೆ ಸಾಕ್ಷಿಯನ್ನೂ ನುಡಿದಿದ್ದಾರೆ.