ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌ 
ಸುದ್ದಿಗಳು

ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಪ್ರಕರಣ: ಉ.ಪ್ರ ಸರ್ಕಾರ ನಿರೀಕ್ಷೆಯಂತೆ ನಡೆಯಲಿಲ್ಲ ಎಂದು ಸುಪ್ರೀಂ ಬೇಸರ

Bar & Bench

ಮುಜಾಫರ್ ನಗರದಲ್ಲಿ ಮುಸ್ಲಿಂ ಮಗುವಿಗೆ ಸಹಪಾಠಿಗಳು ಕಪಾಳಮೋಕ್ಷ ಮಾಡಿದ ನಂತರ ಉತ್ತರ ಪ್ರದೇಶದ ಅಧಿಕಾರಿಗಳು ನ್ಯಾಯಾಲಯದ ನಿರೀಕ್ಷೆಯಂತೆ ವರ್ತಿಸಲಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ಬಾಲಕನ ಕುಟುಂಬ ಆತನನ್ನು ದೂರದ ಶಾಲೆಗೆ ಸೇರಿಸಿದೆ. ಉತ್ತರ ಪ್ರದೇಶ ಸರ್ಕಾರದ ಪರ ವಕೀಲರು ಇದು ಶಿಕ್ಷಣ ಹಕ್ಕು ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕುಟುಂಬದ ಪರ ವಕೀಲರು ಮನೆ ಸಮೀಪ ಉತ್ತಮ ಶಾಲೆ ಇಲ್ಲದಿರುವುದರಿಂದ ಬೇರೆ ದಾರಿ ಇಲ್ಲ ಎಂದರು.

ಆಗ ನ್ಯಾ. ಓಕಾ ಅವರು "ಈ ಕೃತ್ಯದ ಬಳಿಕ ರಾಜ್ಯ ಸರ್ಕಾರ ನಿರೀಕ್ಷೆಯಂತೆ ನಡೆದುಕೊಳ್ಳದ ಕಾರಣ ಇದೆಲ್ಲವೂ ಘಟಿಸಿದೆ. ಈ ಘಟನೆ ನಡೆದ ರೀತಿ ಬಗ್ಗೆ ಸರ್ಕಾರ ತುಂಬಾ ಕಳವಳಗೊಳ್ಳಬೇಕಿತ್ತು. ಆದ್ದರಿಂದಲೇ ಕಾಯಿದೆ ಜಾರಿ ಸಂಬಂಧ ಇತರೆ ಸಮಸ್ಯೆಗಳು ಇರುವುದನ್ನು ಇಲ್ಲಿ ಹೇಳುತ್ತಿದ್ದೇವೆ" ಎಂದರು.

ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್

ಘಟನೆಯ ಹಿನ್ನೆಲೆಯಲ್ಲಿ ಟಾಟಾ ಸಾಮಾಜಿಕ ವಿಜ್ಞಾನ ಸಂಸ್ಥೆ ಸಿದ್ಧಪಡಿಸಿದ ಕೌನ್ಸೆಲಿಂಗ್ ವರದಿ ಮತ್ತು ಅದು ಮಾಡಿರುವ ಶಿಫಾರಸುಗಳಲ್ಲಿ ಆಗಬೇಕಾದ ಬದಲಾವಣೆಗಳನ್ನು ಪರಿಶೀಲಿಸುವಂತೆ ನ್ಯಾಯಾಲಯ ಶುಕ್ರವಾರ ಪಕ್ಷಕಾರರಿಗೆ ಸೂಚಿಸಿತು.

ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಲು ವಿದ್ಯಾರ್ಥಿಗಳನ್ನು ಪ್ರಚೋದಿಸಿದ ಆರೋಪದ ಮೇಲೆ ಶಾಲಾ ಶಿಕ್ಷಕಿ ತ್ರಿಪ್ತಾ ತ್ಯಾಗಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಮಹಾತ್ಮ ಗಾಂಧಿಯವರ ಮೊಮ್ಮಗ ತುಷಾರ್ ಗಾಂಧಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ವಿಚಾರಗಳನ್ನು ತಿಳಿಸಿತು.

ಮುಸ್ಲಿಂ ವಿದ್ಯಾರ್ಥಿಯ ಧರ್ಮದ ಕುರಿತು ಕೇಳಿದ್ದ ತ್ಯಾಗಿ ಅವರು ಧರ್ಮದ ಬಗ್ಗೆ ಆಕ್ಷೇಪಾರ್ಹವಾಗಿ ಮಾತನಾಡಿದ್ದಲ್ಲದೇ ಆತನ ಸಹಪಾಠಿಗಳಿಗೆ ಹಲ್ಲೆ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಮುಸ್ಲಿಂ ವಿದ್ಯಾರ್ಥಿಯ ಮೇಲಿನ ಹಲ್ಲೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಆನಂತರ ಆ ಖಾಸಗಿ ಶಾಲೆಯ ನಿರ್ಬಂಧಿಸಲಾಗಿತ್ತು.

ಈ ಮಧ್ಯೆ, ಶಿಕ್ಷಕಿ ವೀಡಿಯೊ ಹೇಳಿಕೆ ಬಿಡುಗಡೆ ಮಾಡಿ ತಾನು ತಪ್ಪು ಮಾಡಿರಬಹುದು, ಆದರೆ ಘಟನೆಗೆ ಯಾವುದೇ ಕೋಮು ಆಯಾಮ ಇಲ್ಲ ಎಂದು ಪ್ರತಿಪಾದಿಸಿದ್ದರು.

ಇತ್ತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ತುಷಾರ್‌ ಗಾಂಧಿ ಅವರು, ಪ್ರಕರಣದ ಕುರಿತು ಕಾಲಮಿತಿಯೊಳಗೆ ತನಿಖೆ ನಡೆಸಬೇಕು. ಧಾರ್ಮಿಕ ಅಲ್ಪಸಂಖ್ಯಾತರು ಸೇರಿದಂತೆ ಶಾಲಾ ಮಕ್ಕಳ ಮೇಲಿನ ಹಿಂಸಾಚಾರವನ್ನು ನಿಭಾಯಿಸಲು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೋರಿದ್ದರು.

ಐಪಿಸಿಯ ಸೆಕ್ಷನ್ 295 ಎ ಪ್ರಕಾರ, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮುಖೇನ ಅವರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದ ಯಾವುದೇ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯವು ಶಿಕ್ಷಾರ್ಹ ಅಪರಾಧವಾಗಿದೆ. ಈ ಸೆಕ್ಷನ್‌ನಡಿ ಶಾಲಾ ಶಿಕ್ಷಕಿ ಆರೋಪ ಎದುರಿಸಬಹುದು ಎಂದು ಉತ್ತರ ಪ್ರದೇಶ ಸರ್ಕಾರ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.

ನ್ಯಾಯಾಲಯವು ವಿದ್ಯಾರ್ಥಿ ಮತ್ತು ಅವನ ಸಹಪಾಠಿಗಳಿಗೆ ವೃತ್ತಿಪರ ವೈಯಕ್ತಿಕ ಸಮಾಲೋಚನೆ ನಡೆಸುವಂತೆ ಮತ್ತು ಹೊಸ ಶಾಲೆಗೆ ಪ್ರವೇಶ ನೀಡುವಂತೆ ನಿರ್ದೇಶಿಸಿತ್ತು.

ಈ ಹಿಂದಿನ ವಿಚಾರಣೆಗಳಲ್ಲಿ, ಉತ್ತರ ಪ್ರದೇಶ ಪೊಲೀಸರು ಮತ್ತು ಸರ್ಕಾರ ಪ್ರಕರಣದ ತನಿಖೆಯನ್ನು ನಿರ್ವಹಿಸುತ್ತಿರುವ ರೀತಿಗೆ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತ್ತು.

ಎಫ್‌ಐಆರ್‌ನಲ್ಲಿ ಪ್ರಮುಖ ಆರೋಪಗಳನ್ನು ಕೈಬಿಟ್ಟ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಾಲಯ ರಾಜ್ಯ ಸರ್ಕಾರದಿಂದ ನಾಮನಿರ್ದೇಶನಗೊಂಡ ಹಿರಿಯ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ತಾಕೀತು ಮಾಡಿತ್ತು.

ಅರ್ಜಿದಾರರ ಪರ ವಕೀಲ ಶದಾನ್ ಫರಾಸತ್ ವಾದ ಮಂಡಿಸಿದ್ದರು. ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಸಾದ್ ಹಾಜರಿದ್ದರು.