“ಕಾನೂನು ಕ್ಷೇತ್ರಕ್ಕೆ ನನ್ನ ಪ್ರವೇಶವು ಆಕಸ್ಮಿಕ. ಎಂಜಿನಿಯರ್, ವೈದ್ಯ ಅಥವಾ ಶಿಕ್ಷಕ ಆಗಬೇಕು ಎಂಬುದು ನನ್ನ ಪೋಷಕರ ಒಲವಾಗಿತ್ತು. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾದ ನಾನು ನನ್ನ ಪೋಷಕರ ಆಸೆಯನ್ನು ಈಡೇರಿಸಲಾಗಲಿಲ್ಲ” ಎಂದು ಇಂದು ನಿವೃತ್ತಿ ಹೊಂದುತ್ತಿರುವ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಹೇಳಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹೈಕೋರ್ಟ್ ಹಾಲ್ 1ರಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.
“ಕಾನೂನು ಕ್ಷೇತ್ರಕ್ಕೆ ನನ್ನ ಪ್ರವೇಶವು ಆಕಸ್ಮಿಕ. ಎಂಜಿನಿಯರ್, ವೈದ್ಯ ಅಥವಾ ಶಿಕ್ಷಕ ಆಗಬೇಕು ಎಂಬುದು ನನ್ನ ಪೋಷಕರ ಒಲವಾಗಿತ್ತು. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾದ ನಾನು ನನ್ನ ಪೋಷಕರ ಆಸೆಯನ್ನು ಈಡೇರಿಸಲಾಗಲಿಲ್ಲ. ಶಿಕ್ಷಕನಾಗಿ ಊರಿನಲ್ಲೇ ಉಳಿಯುವ ಮೂಲಕ ಕುಟುಂಬ ಮತ್ತು ಜಮೀನು ನೋಡಿಕೊಳ್ಳಬೇಕು ಎಂಬುದು ನನ್ನ ತಂದೆಯ (ಗಿರಿಗೌಡ) ಬಯಕೆಯಾಗಿತ್ತು. ಆದರೆ, ಹಳ್ಳಿಯ ಕೃಷಿಕ ಹಿನ್ನೆಲೆಯ ಹುಡುಗ ಬೇರೇನೊ ಸಾಧನೆ ಮಾಡಲು ಪ್ರೇರಣೆ ನೀಡಿದವರು ನನ್ನ ತಾಯಿ (ಭಾಗೀರತಮ್ಮ). ನನ್ನ ಸಾಧನೆಯನ್ನು ಬೇರೆಯವರು ಮಾದರಿಯಾಗಿ ಪಡೆದು ತಮ್ಮ ಜೀವನದಲ್ಲಿ ಮುಂದುವರಿಯಬೇಕು ಎಂಬುದು ಅವರ ಆಸೆಯಾಗಿತ್ತು. ಇದಕ್ಕಾಗಿ ನಾನು ಎಲ್‌ಎಲ್‌ಬಿ ಕೋರ್ಸ್‌ಗೆ ಸೇರ್ಪಡೆಯಾದೆ” ಎಂದು ಹೇಳುವಾಗ ಅವರ ಕಣ್ಣಾಲಿಗಳು ತುಂಬಿ ಬಂದವು.
“ವಕೀಲನಾಗಿ ಶ್ರೀರಂಗಪಟ್ಟಣಕ್ಕೆ ವಲಸೆ ಹೋಗಿ, ನನ್ನ ಗುರು ಎಂ ಪುಟ್ಟೇಗೌಡ ಅವರ ಬಳಿ ಪ್ರಾಕ್ಟೀಸ್ ಆರಂಭಿಸಿದೆ. ವಕೀಲಿಕೆ ಆರಂಭಿಸಿದರೂ ನ್ಯಾಯಮೂರ್ತಿಯಾಗುವ ಯಾವುದೇ ಯೋಚನೆ ಇರಲಿಲ್ಲ. ಗ್ರಾಮೀಣ ಭಾಗದ ವಕೀಲನಾಗಿ, ತಾಲ್ಲೂಕು ಮಟ್ಟದಲ್ಲಿ ಪ್ರಾಕ್ಟೀಸ್ ಮಾಡುತ್ತಾ.. ನನ್ನ ಹಣೆಬರಹ ಬೇರೆಯೇ ಇತ್ತು. ಕಾನೂನು ಕ್ಷೇತ್ರದವರು, ಹಿರಿಯರು, ತಾಯಿ-ಪತ್ನಿಯ ನೆರವಿನಿಂದ 8.2.1995ರಲ್ಲಿ ಸಿವಿಲ್ ನ್ಯಾಯಾಧೀಶನಾಗಿ ನೇಮಕವಾಗಿ ಇಂದು ಹೈಕೋರ್ಟ್ ನ್ಯಾಯಮೂರ್ತಿಯಾಗುವವರೆಗೆ ನಡೆದು ಬಂದಿದ್ದೇನೆ” ಎಂದು ನೆನೆಪಿಸಿಕೊಂಡರು.
“ಹಳ್ಳಿಯಿಂದ ಬಂದನವದ್ದಾರಿಂದ ನಾನು ಹೇಳುವ ರೀತಿಯು ಕಠಿಣ ಎನ್ನಿಸಿರಬಹುದು. ಆದರೆ, ಯಾರಿಗೂ ನೋಯಿಸುವ ಉದ್ದೇಶ ನನ್ನದಲ್ಲ. ಪ್ರಕರಣದ ಮೆರಿಟ್ (ವಾದಾಂಶಗಳ) ಮೂಲಕ ನ್ಯಾಯಾಂಗ ಅಧಿಕಾರಿ ಅಥವಾ ನ್ಯಾಯಮೂರ್ತಿಯವರನ್ನು ಸಂತುಷ್ಟಗೊಳಿಸಬೇಕೆ ವಿನಾ ಏರಿದ ಧ್ವನಿಯಿಂದಲ್ಲ” ಎಂದು ಕಿರಿಯ ವಕೀಲರಿಗೆ ಸಲಹೆ ನೀಡಿದರು.
ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಅವರು ನ್ಯಾ. ಶಿವಶಂಕರೇಗೌಡ ಅವರ ಕಾನೂನು ಜ್ಞಾನ ಮತ್ತು ಆಡಳಿತ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಎಸ್‌ಬಿಸಿ ಅಧ್ಯಕ್ಷ ಎಚ್ ಎಲ್ ವಿಶಾಲ್ ರಘು “ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ತಲಕಾಡುವಿನಂಥ ಸಣ್ಣ ಪಟ್ಟಣದ ಕೃಷಿಕ ಕುಟುಂಬದಿಂದ ಹೈಕೋರ್ಟ್ ನ್ಯಾಯಮೂರ್ತಿಯಂಥ ಮಹತ್ವದ ಹುದ್ದೆಯವರೆಗಿನ ನ್ಯಾ. ಶಿವಶಂಕರೇಗೌಡ ಅವರ ಪಯಣವು ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿರಲಿದೆ” ಎಂದರು.
“ನ್ಯಾ. ಶಿವಶಂಕರೇಗೌಡ ಅವರು ಹೈಕೋರ್ಟ್ ನ್ಯಾಯಮೂರ್ತಿಯಾಗಿ ತಮ್ಮ ಕಿರು ಅವಧಿಯಲ್ಲಿ ಹಲವು ಮಹತ್ವದ ತೀರ್ಪುಗಳನ್ನು ಒಳಗೊಂಡು 4,600ಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ” ಎಂದು ನೆನಪಿಸಿದರು.