ಮುಸ್ಲಿಂ ಸಮುದಾಯದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹರಿಯಬಿಟ್ಟು ಧಾರ್ಮಿಕ ಭಾವನೆ ಕೆರಳಿಸಿದ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಅಲಿಯಾಸ್ ಪಾಂಡುರಂಗನಿಗೆ ಮೈಸೂರು ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ.
ಮೈಸೂರು ನಿವಾಸಿ ಸತೀಶ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಎಂ ಸರೋಜಾ ಪುರಸ್ಕರಿಸಿದ್ದಾರೆ.
ಆರೋಪಿಯು ಒಬ್ಬರ ಭದ್ರತೆ ಒದಗಿಸಬೇಕು. ತನಿಖಾಧಿಕಾರಿ ಸೂಚಿಸಿದಾಗ ತನಿಖೆಗೆ ಹಾಜರಾಗಬೇಕು. ಇಂಥದ್ದೇ ಅಪರಾಧ ಕೃತ್ಯದಲ್ಲಿ ಭಾಗಿಯಾಗಬಾರದು. ವಾರಕ್ಕೊಮ್ಮೆ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕಬೇಕು ಎಂಬ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.
ಇದಕ್ಕೂ ಮುನ್ನ, ಆರೋಪಿ ಪರ ವಕೀಲ ಅ ಮಾ ಭಾಸ್ಕರ್ ಅವರು ವಾದಿಸಿದ್ದರು. ಸರ್ಕಾರಿ ಅಭಿಯೋಜಕಿ ಸವಿತಾ ಅವರು ಜಾಮೀನಿಗೆ ವಿರೋಧಿಸಿದ್ದರು.
ಪ್ರಕರಣದ ಹಿನ್ನೆಲೆ: ಮುಸ್ಲಿಂ ಧರ್ಮದ ಬರಹಗಳನ್ನು ರಾಜಕಾರಣಿಗಳ ಮೈ ಮೇಲೆ ಬರದು ಪೋಸ್ಟ್ ಮಾಡಿ ಸತೀಶ್ ಅವಹೇಳನ ಮಾಡಿದ್ದು, ಈ ಪೋಸ್ಟ್ ಅನ್ನು ಮೊಹ್ಸೀನ್ ಎಂಬಾತ ಪೊಲೀಸರಿಗೆ ಕಳುಹಿಸಿದ್ದಾನೆ. ಪೋಸ್ಟ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್, ಆಪ್ ಮುಖಂಡ ಅರವಿಂದ್ ಕೇಜ್ರಿವಾಲ್ ಅವರ ಮುಖವಾಡ ಇರುವ ಅರಬೆತ್ತಲೆ ಚಿತ್ರದ ಮೇಲೆ ಅರೇಬಿಕ್ ಭಾಷೆಯಲ್ಲಿ ಬರೆದಿರುವ ಆಕೃತಿಗಳಿವೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
ಪೊಲೀಸ್ ಪೇದೆ ಸಂತೋಷ್ ಪವಾರ್ ನೀಡಿದ ದೂರಿನ ಮೇರೆಗೆ ಬಿಎನ್‌ಎಸ್ ಸೆಕ್ಷನ್ 299 ಅಡಿ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆಯ ಬೆನ್ನಿಗೇ ಉದ್ರಿಕ್ತಗೊಂಡ ಮುಸ್ಲಿಂ ಸಮುದಾಯದ ಯುವಕರು ಉದಯಗಿರಿ ಠಾಣೆಗೆ ಕಲ್ಲು ತೂರಾಟ ನಡೆಸಿತ್ತು. ಈ ಬಗ್ಗೆ ಪೊಲೀಸರು ಒಂದು ಸಾವಿರ ಜನರ ವಿರುದ್ಧ ಪ್ರಕರಣ ದಾಖಲಿಸಿ, 16 ಮಂದಿಯನ್ನು ಬಂಧಿಸಿದ್ದಾರೆ.