ಸುದ್ದಿಗಳು

ನಟ ವಿಜಯ್‌ ಬದುಕಿನಲ್ಲಿ ನಾಗರತ್ನ ʼದುನಿಯಾʼ ಅಂತ್ಯ: ದಂಪತಿಯ ವಿಚ್ಚೇದನಕ್ಕೆ ಅಸ್ತು ಎಂದ ಹೈಕೋರ್ಟ್‌

ಪತ್ನಿ ನಾಗರತ್ನ ಅವರಿಗೆ ಎರಡು ಕೋಟಿ ರೂಪಾಯಿ ಶಾಶ್ವತ ಜೀವನಾಂಶವನ್ನು ಮುಂದಿನ ಮೂರು ತಿಂಗಳಲ್ಲಿ ಪಾವತಿ ಮಾಡಬೇಕು ಎಂದು ಪೀಠ ವಿಜಯ್‌ಗೆ ನಿರ್ದೇಶನ ನೀಡಿದ ನ್ಯಾಯಾಲಯ.

Bar & Bench

ಕನ್ನಡದ ಪ್ರಸಿದ್ಧ ನಟ ದುನಿಯಾ ವಿಜಯ್‌ (ಬಿ ಆರ್‌ ವಿಜಯ್‌ ಕುಮಾರ್‌) ಮತ್ತು ಮೊದಲ ಪತ್ನಿ ನಾಗರತ್ನ ನಡುವಿನ ವಿಚ್ಛೇದನ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ಅಂತ್ಯ ಹಾಡಿದ್ದು, ವಿಚ್ಚೇದನ ಮಂಜೂರು ಮಾಡಿ ಆದೇಶ ಹೊರಡಿಸಿದೆ.

ಅಲ್ಲದೆ, ಪತ್ನಿ ನಾಗರತ್ನ ಅವರಿಗೆ ಎರಡು ಕೋಟಿ ರೂಪಾಯಿ ಶಾಶ್ವತ ಜೀವನಾಂಶವನ್ನು ಮುಂದಿನ ಮೂರು ತಿಂಗಳಲ್ಲಿ ಪಾವತಿ ಮಾಡಬೇಕು ಎಂದು ಪೀಠ ವಿಜಯ್‌ಗೆ ನಿರ್ದೇಶನ ನೀಡಿದೆ.

ವಿವಾಹ ವಿಚ್ಚೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಡಿ ಕೆ ಸಿಂಗ್‌ ಮತ್ತು ಎಚ್‌ ಶಾಂತಿಭೂಷಣ್‌ ಅವರ ವಿಭಾಗೀಯ ಪೀಠ ಪುರಸ್ಕರಿಸಿದೆ.

ವಾದ-ಪ್ರತಿವಾದ ಆಲಿಸಿ, ಕಾಯ್ದಿರಿಸಿದ್ದ ತೀರ್ಪನ್ನು ಪ್ರಕಟಿಸಿರುವ ಪೀಠವು ಅರ್ಜಿಯನ್ನು ಮಾನ್ಯ ಮಾಡಿ ಅರ್ಜಿದಾರರು ಮತ್ತು ಪ್ರತಿವಾದಿ ನಾಗರತ್ನಗೆ ವಿಚ್ಚೇದನ ಮಂಜೂರು ಮಾಡಿದೆ. ಕ್ರೌರ್ಯದ ಆಧಾರದ ಮೇಲೆ ವಿಚ್ಚೇದನ ನೀಡಲಾಗಿದೆ, ತೀರ್ಪಿನ ಪ್ರತಿ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಇದರೊಂದಿಗೆ ನಟ ದುನಿಯಾ ವಿಜಯ್‌ ಮತ್ತು ಮೊದಲ ಪತ್ನಿ ನಾಗರತ್ನ ಅವರ ದಾಂಪತ್ಯ ಜೀವನ ಅಧಿಕೃತವಾಗಿ ಕೊನೆಗೊಂಡಿದ್ದು,  ಒಂಭತ್ತು ವರ್ಷಗಳ ಹೋರಾಟದ ಬಳಿಕ ಇದೀಗ ಇಬ್ಬರೂ ಕಾನೂನಾತ್ಮಕವಾಗಿ ಬೇರ್ಪಟ್ಟಿದ್ದಾರೆ.

ವಿಜಯ್‌ ಹಾಗೂ ನಾಗರತ್ನ 1999ರಲ್ಲಿ ಮದುವೆಯಾಗಿದ್ದರು. ಇಬ್ಬರ ನಡುವೆ ವೈಮನಸ್ಯದಿಂದಾಗಿ 2013ರಲ್ಲಿ ದುನಿಯಾ ವಿಜಯ್‌ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ 2014ರಲ್ಲಿಇಬ್ಬರೂ ಮತ್ತೆ ಒಂದಾದರು. ಆ ನಂತರ ದುನಿಯಾ ವಿಜಯ್‌ 2018ರಲ್ಲಿ ಮತ್ತೆ ಹಿಂದೂ ವಿವಾಹ ಕಾಯಿದೆ ಸೆಕ್ಷನ್‌ 13(1)(ಐ-ಎ)(ಐ-ಬಿ) ಅಡಿ ವಿವಾಹ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 2ನೇ ಹೆಚ್ಚುವರಿ ಪ್ರಧಾನ ನ್ಯಾಯಾಲಯ 2024ರ ಜೂನ್‌ 13ರಂದು ವಿಚ್ಚೇದನ ನೀಡಲು ನಿರಾಕರಿಸಿ ಆದೇಶ ಹೊರಡಿಸಿತ್ತು. ಅದನ್ನು ಪ್ರಶ್ನಿಸಿ ವಿಜಯ್‌ ಹೈಕೋರ್ಟ್‌ ಮೊರೆ ಹೋಗಿದ್ದರು.