Narayan Rane and Bombay High Court
Narayan Rane and Bombay High Court 
ಸುದ್ದಿಗಳು

ನಾಸಿಕ್ ಎಫ್ಐಆರ್‌ನಲ್ಲಿ ಕೇಂದ್ರ ಸಚಿವ ರಾಣೆ ವಿರುದ್ಧ ಬಲವಂತದ ಕ್ರಮ ಇಲ್ಲ: ಬಾಂಬೆ ಹೈಕೋರ್ಟ್‌ಗೆ ಮಹಾರಾಷ್ಟ್ರ ಸರ್ಕಾರ

Bar & Bench

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ನಾಸಿಕ್ ಪೊಲೀಸರು ಕೇಂದ್ರ ಸಚಿವ ರಾಣೆ ನಾರಾಯಣ್ ಅವರ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅವರ ಮೇಲೆ ಯಾವುದೇ ಬಲವಂತದ ಕ್ರಮ ಜರುಗಿಸುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್‌ ಮುಂದೆ ಬುಧವಾರ ಹೇಳಿಕೆ ನೀಡಿದೆ.

ಮಹಾರಾಷ್ಟ್ರ ಸರ್ಕಾರದ ಪರ ಹಿರಿಯ ವಕೀಲ ಅಮಿತ್ ದೇಸಾಯಿ ಅವರು ಸಲ್ಲಿಸಿದ ಅರ್ಜಿಯಲ್ಲಿ ನಾಸಿಕ್ ಪೊಲೀಸರು ದಾಖಲಿಸಿರುವ ಒಂದು ಎಫ್‌ಐಆರ್‌ನ ವಿವರಗಳನ್ನು ಮಾತ್ರ ಉಲ್ಲೇಖಿಸಿದ್ದಾರೆ. ಉಳಿದ ಎಫ್‌ಐಆರ್‌ಗಳನ್ನು ಉಲ್ಲೇಖಿಸಿಲ್ಲ ಮತ್ತು ಕಾನೂನು ನಿಬಂಧನೆಗಳನ್ನು ಸಹ ಹೇಳಿಲ್ಲವಾದ್ದರಿಂದ ಆ ಎಫ್‌ಐಆರ್‌ಗಳ ಕುರಿತು ಸೂಚನೆ ಪಡೆಯುವುದು ತಮಗೆ ಕಷ್ಟಕರವಾಗುತ್ತದೆ ಎಂದ ಅವರು ಆದಾಗ್ಯೂ ಮುಂದಿನ ವಿಚಾರಣೆಯ ದಿನಾಂಕದವರೆಗೆ ನಾಸಿಕ್‌ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಯಾವುದೇ ಬಲವಂತದ ಪ್ರಕರಣ ದಾಖಲಿಸುವುದಿಲ್ಲ ಎಂದರು.

ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್ ಜೆ ಜಾಮದಾರ್ ಅವರಿದ್ದ ಪೀಠ ರಾಣೆ ಪರ ವಕೀಲರಿಗೆ ಅರ್ಜಿ ತಿದ್ದುಪಡಿ ಮಾಡಲು ಅವಕಾಶ ನೀಡಿತು ಮತ್ತು ಹೇಳಿಕೆ ದಾಖಲಿಸಲು ಮುಂದಾಯಿತು. ರಾಣೆ ಪರ ಹಾಜರಾದ ವಕೀಲ ಸತೀಶ್‌ ಮಾನೆಶಿಂಧೆ ಅವರು ಪೊಲೀಸರ ಆತಂಕ ಇರುವುದರಿಂದ ಬೇರೆ ಎಫ್‌ಐಆರ್‌ಗಳಲ್ಲಿ ಕೂಡ ಯಾವುದೇ ಬಲವಂತದ ಕ್ರಮ ತೆಗೆದುಕೊಳ್ಳಬಾರದು ಎಂದು ಕೋರಿದರು.

ವಾದಗಳನ್ನು ಆಲಿಸಿದ ನ್ಯಾಯಾಲಯ ಎರಡೂ ಕಡೆಯ ಪಕ್ಷಗಳು ಕಾನೂನಿನ ಚೌಕಟ್ಟಿನೊಳಗೆ ಕಾರ್ಯ ನಿರ್ವಹಿಸುವುದನ್ನು ಮಾತ್ರ ನಿರೀಕ್ಷಿಸುವುದಾಗಿ ಹೇಳಿ ಪ್ರಕರಣವನ್ನು ಸೆ. 17ಕ್ಕೆ ಮುಂದೂಡಿತು. ಪ್ರಸ್ತುತ ರಾಣೆ ಅವರ ವಿರುದ್ಧ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ. ಮಹದ್‌ ಅಲ್ಲದೆ, ಪುಣೆ, ನಾಸಿಕ್ ಮತ್ತು ಠಾಣೆಯಲ್ಲಿ ಉಳಿದ ಎಫ್‌ಐಆರ್‌ಗಳು ದಾಖಲಾಗಿವೆ. ಐಪಿಸಿ ಸೆಕ್ಷನ್ 500 (ಮಾನನಷ್ಟ), 505 (2) (ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಮತ್ತು 153 ಎ (ಹಿಂಸೆಗೆ ಪ್ರಚೋದನೆ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.