ಸುದ್ದಿಗಳು

[ರಾಣೆ ಬಂಧನ ಪ್ರಕರಣ] ಎಫ್ಐಆರ್ ರದ್ದುಗೊಳಿಸಲು ಕೋರಿದ ಕೇಂದ್ರ ಸಚಿವ; ತುರ್ತು ವಿಚಾರಣೆಗೆ ಬಾಂಬೆ ಹೈಕೋರ್ಟ್‌ ನಕಾರ

ಆದರೆ ಪ್ರಕರಣದ ತುರ್ತು ವಿಚಾರಣೆಗೆ ನಿರಾಕರಿಸಿದ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್ ಜೆ ಜಾಮದಾರ್‌ ಅವರಿದ್ದ ಪೀಠ ತುರ್ತು ವಿಚಾರಣೆಗೆ ಸೂಕ್ತ ವಿಧಾನ ಅನುಸರಿಸುವಂತೆ ರಾಣೆ ಅವರಿಗೆ ನಿರ್ದೇಶಿಸಿತು.

Bar & Bench

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದರ ವಿರುದ್ಧ ದಾಖಲಾಗಿರುವ ಕನಿಷ್ಠ ಮೂರು ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಬಂಧಿತ ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ನಾರಾಯಣ್ ರಾಣೆ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

ರಾಣೆ ಅವರ ಪರ ಹಾಜರಾದ ವಕೀಲ ಅನಿಕೇತ್ ನಿಕ್ಕಮ್‌ ಅವರು, ಮಹಾರಾಷ್ಟ್ರದ ಪುಣೆ, ನಾಸಿಕ್ ಮತ್ತು ರಾಯಗಢ ಜಿಲ್ಲೆಗಳಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ರಾಣೆ ವಿರುದ್ಧ ದಾಖಲಾದ ಅಪರಾಧಗಳಿಗೆ 7 ವರ್ಷಕ್ಕಿಂತ ಕಡಿಮೆ ಪ್ರಮಾಣದ ಜೈಲು ಶಿಕ್ಷೆ ವಿಧಿಸಬಹುದು ಎಂದು ಅವರು ವಾದಿಸಿದರು. ಇಂತಹ ಅಪರಾಧಗಳಲ್ಲಿ ಸಿಆರ್‌ಪಿಸಿ ಅಡಿಯಲ್ಲಿ ಸೆಕ್ಷನ್ 41 ಎ ಪ್ರಕಾರ ಸೂಚನೆ ನೀಡಿ ಪೊಲೀಸರು ಬಂಧಿಸಬೇಕಿತ್ತು. ಆದರೆ ಹಾಗೆ ಮಾಡಿಲ್ಲ ಎಂದು ಅವರು ಹೇಳಿದರು.

ಮಹಾರಾಷ್ಟ್ರದ ಚಿಪ್ಲುನ್ ಜಿಲ್ಲೆಯಲ್ಲಿ ರಾಣೆ ಅವರನ್ನು ಬಂಧಿಸಲು ಪೊಲೀಸರ ತಂಡವನ್ನು ಕಳಿಸಲಾಗಿದೆ ಎಂಬ ಕಾರಣಕ್ಕಾಗಿ ಅವರು ತುರ್ತು ವಿಚಾರಣೆಗಾಗಿ ಪ್ರಾರ್ಥಿಸಿದರು. (ವರದಿಯನ್ನು ಪ್ರಕಟಿಸುವ ಹೊತ್ತಿಗೆ ಸಚಿವರ ಬಂಧನವಾಗಿದೆ.)

ಇದೇ ವೇಳೆ ಪ್ರಕರಣದ ತುರ್ತು ವಿಚಾರಣೆಗೆ ನಿರಾಕರಿಸಿದ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್ ಜೆ ಜಾಮದಾರ್‌ ಅವರಿದ್ದ ಪೀಠ ತುರ್ತು ವಿಚಾರಣೆಗೆ ಸೂಕ್ತ ವಿಧಾನ ಅನುಸರಿಸುವಂತೆ ರಾಣೆ ಅವರಿಗೆ ನಿರ್ದೇಶಿಸಿತು. “(ತುರ್ತುವಿಚಾರಣೆಗೆ) ಉಲ್ಲೇಖಿಸಲು ಅನುಮತಿ ನೀಡಲಾಗದು. ಪ್ರಕ್ರಿಯೆಯನ್ನು ಪಾಲಿಸಿ ಪ್ರತಿಯೊಬ್ಬರೂ ಪ್ರಕ್ರಿಯೆಯಂತೆ ನಡೆದುಕೊಳ್ಳಬೇಕು. ನಮ್ಮನ್ನು ನೋಂದಾವಣೆ ಕೆಲಸ ಮಾಡುವಂತೆ ಮಾಡಬೇಡಿ” ಎಂದು ಪೀಠ ಹೇಳಿತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 (ಮಾನನಷ್ಟ), 505 (2) (ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಮತ್ತು 153 ಎ (ಹಿಂಸೆಗೆ ಪ್ರಚೋದನೆ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಈ ಮಧ್ಯೆ ರಾಣೆ ಅವರು ನಿರೀಕ್ಷಣಾ ಜಾಮೀನು ನೀಡುವಂತೆ ರತ್ನಗಿರಿ ಸೆಷನ್ಸ್ ನ್ಯಾಯಾಲಯವನ್ನು ಕೂಡ ಸಂಪರ್ಕಿಸಲಾಗಿದೆ. ಆದರೆ ಯಾವುದೇ ಪರಿಹಾರ ಒದಗಿಸಲು ಸೆಷನ್ಸ್‌ ಕೋರ್ಟ್‌ ನಿರಾಕರಿಸಿತು.