ಸುದ್ದಿಗಳು

ಸಿಎಂ ಠಾಕ್ರೆ ವಿರುದ್ಧ ಮಾನಹಾನಿಕರ ಹೇಳಿಕೆ: ಕೇಂದ್ರ ಸಚಿವ ರಾಣೆಗೆ ರಾಯಗಡ ನ್ಯಾಯಾಲಯ ಜಾಮೀನು

Bar & Bench

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ದಾಖಲಿಸಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಮಹದ್‌ನಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಕೇಂದ್ರ ಸಚಿವ ನಾರಾಯಣ್ ರಾಣೆ ಅವರಿಗೆ ಜಾಮೀನು ನೀಡಿದೆ.

ಪ್ರಸ್ತುತ ರಾಣೆ ಅವರ ವಿರುದ್ಧ ನಾಲ್ಕು ಎಫ್‌ಐಆರ್‌ಗಳು ದಾಖಲಾಗಿವೆ. ಮಹದ್‌ ಅಲ್ಲದೆ, ಪುಣೆ, ನಾಸಿಕ್ ಮತ್ತು ಠಾಣೆಯಲ್ಲಿ ಉಳಿದ ಎಫ್‌ಐಆರ್‌ಗಳು ದಾಖಲಾಗಿವೆ. ಐಪಿಸಿ ಸೆಕ್ಷನ್ 500 (ಮಾನನಷ್ಟ), 505 (2) (ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಮತ್ತು 153 ಎ (ಹಿಂಸೆಗೆ ಪ್ರಚೋದನೆ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ರಾಣೆ ಅವರನ್ನು ರಾತ್ರಿ 9.45 ಕ್ಕೆ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಶೇಖ್‌ಬಾಬಸೊ ಎಸ್ ಪಾಟೀಲ್ ಅವರೆದುರು ಹಾಜರುಪಡಿಸಲಾಯಿತು. ಇದೇ ವೇಳೆ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಲು ರಾಣೆ ಅವರನ್ನು 7 ದಿನಗಳ ವಶಕ್ಕೆ ಒಪ್ಪಿಸುವಂತೆ ಸರ್ಕಾರಿ ವಕೀಲ ಭೂಷಣ್ ಸಾಲ್ವಿ ಕೋರಿದರು. ಮುಖ್ಯಮಂತ್ರಿ ಪ್ರತಿಷ್ಠೆ ಕುಗ್ಗಿಸುವ ಯಾವುದೇ ಸಂಭವನೀಯ ಪಿತೂರಿ ತನಿಖೆ ಮಾಡುವುದು ಮುಖ್ಯ. ರಾಣೆ ಅವರಂತಹ ಜವಾಬ್ದಾರಿಯುತ ರಾಜಕಾರಣಿ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ ಎಂದು ಅವರು ವಾದಿಸಿದರು.

ರಾಣೆ ಪರ ಹಾಜರಾದ ವಕೀಲ ಅನಿಕೇತ್ ನಿಕ್ಕಂ ಮತ್ತು ಭಾವು ಸಾಳುಂಖೆ ಅವರು ʼರಾಣೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅವರಿಗೆ 69 ವರ್ಷ ವಯಸ್ಸಾಗಿದ್ದು ಮಧುಮೇಹ ಮತ್ತು ರಕ್ತದೊತ್ತಡದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ರಾಣೆ ಅವರನ್ನು ಬಂಧಿಸುವ ಮೊದಲು ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ಯಾವುದೇ ಸಮನ್ಸ್ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅವರ ಬಂಧನ ಕಾನೂನುಬಾಹಿರ. ಐಪಿಸಿ ಅಡಿಯಲ್ಲಿ ರಾಣೆ ಅವರನ್ನು ಬಂಧಿಸಿದ ಅಪರಾಧಗಳು 7 ವರ್ಷಕ್ಕಿಂತ ಕಡಿಮೆ ಅವಧಿಯವರೆಗೆ ಶಿಕ್ಷೆ ನೀಡುವಂತಹವು. ಆದ್ದರಿಂದ ಅವರನ್ನು ವಶಕ್ಕೆ ಪಡೆಯುವುದು ಅನಗತ್ಯ. ಅಲ್ಲದೆ ಸೆಕ್ಷನ್ 500ರ ಅಪರಾಧ ನಿಲ್ಲುವುದಿಲ್ಲ, ಏಕೆಂದರೆ ಇದು ಅಸಂಜ್ಞೇಯ ಅಪರಾಧವಾಗಿದ್ದು ಇದನ್ನು ಖುದ್ದು ಸಂತ್ರಸ್ತರೇ ಸಲ್ಲಿಸಿಲ್ಲ ಎಂದು ವಾದಿಸಿದರು.

ವಾದ ಆಲಿಸಿದ ನ್ಯಾಯಾಧೀಶರು ರಾಣೆ ಅವರಿಗೆ ₹ 15,000 ಶೂರಿಟಿಯೊಂದಿಗೆ ಜಾಮೀನು ಮಂಜೂರು ಮಾಡಿದರು. ಮಂಗಳವಾರ, ರಾಣೆ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ರತ್ನಗಿರಿ ಜಿಲ್ಲೆಯ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ತನ್ನ ವಿರುದ್ಧ ದಾಖಲಿಸಿರುವ ವಿವಿಧ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ರಾಣೆ ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದರು.

ಆದರೆ ಪ್ರಕರಣದ ತುರ್ತು ವಿಚಾರಣೆಗೆ ನಿರಾಕರಿಸಿದ ಹೈಕೋರ್ಟ್‌ ʼತುರ್ತು ವಿಚಾರಣೆಗೆ ಸೂಕ್ತ ವಿಧಾನ ಪಾಲಿಸಿ ನಂತರ ನ್ಯಾಯಾಲಯಕ್ಕೆ ಮನವಿ ಸಲ್ಲಿಸುವಂತೆ ರಾಣೆ ಅವರಿಗೆ ನಿರ್ದೇಶಿಸಿತ್ತು. ಬುಧವಾರ ಹೈಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆಯಿದೆ.