ವಿಚಾರವಾದಿ, ಸಾಮಾಜಿಕ ಕಾರ್ಯಕರ್ತ ಡಾ. ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣದ ವಿಚಾರಣೆ ಆರಂಭವಾಗಿರುವುದರಿಂದ ಹೈಕೋರ್ಟ್ ಈಗ ಪ್ರಕರಣದ ಮೇಲ್ವಿಚಾರಣೆ ನಿಲ್ಲಿಸಬೇಕು ಎಂದು ಕೋರಿ ಹತ್ಯೆ ಆರೋಪಿಗಳು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಆರೋಪಿಗಳಾದ ವಿಕ್ರಮ್ ಭಾವೆ, ಶರದ್ ಕಾಲಸ್ಕರ್ ಮತ್ತು ವೀರೇಂದ್ರ ಸಿನ್ಹ ತಾವಡೆ ಸಲ್ಲಿಸಿರುವ ಅರ್ಜಿ ಕುರಿತಂತೆ ದಾಬೋಲ್ಕರ್ ಕುಟುಂಬದ ಸದಸ್ಯರು ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಪಿ ಡಿ ನಾಯಕ್ ಅವರಿದ್ದ ವಿಭಾಗೀಯ ಪೀಠ ಸೂಚಿಸಿದೆ.
ಮೌಢ್ಯ ವಿರೋಧಿ ಸಂಘಟನೆಯಾದ ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ್ ಸಮಿತಿಯ ಸಂಸ್ಥಾಪಕ ಮತ್ತು ರೂವಾರಿ ದಾಭೋಲ್ಕರ್ ಅವರನ್ನು ಸನಾತನ ಸಂಸ್ಥೆ ಎಂಬ ಮೂಲಭೂತವಾದಿ ಸಂಘಟನೆಯ ಸದಸ್ಯರು ಆಗಸ್ಟ್ 2013ರಲ್ಲಿ ಗುಂಡಿಕ್ಕಿ ಕೊಂದಿದ್ದರು. ಸಿಬಿಐ 2014ರಲ್ಲಿ ತನಿಖೆ ಕೈಗೆತ್ತಿಕೊಂಡು ಐವರು ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಆರೋಪ ನಿಗದಿಯಾದ ಬಳಿಕ ಸೆಪ್ಟೆಂಬರ್ 2021ರಲ್ಲಿ ವಿಚಾರಣೆ ಆರಂಭವಾಗಿತ್ತು.
ಆರೋಪಿಗಳಲ್ಲೊಬ್ಬರ ಪರ ವಾದ ಮಂಡಿಸಿದ ವಕೀಲರಾದ ಸುಭಾಷ್ ಝಾ, ವಿಚಾರಣೆ ಆರಂಭವಾದ ಕಾರಣ ಹೈಕೋರ್ಟ್ ತನ್ನ ಮೇಲ್ವಿಚಾರಣೆಯನ್ನು ನಿಲ್ಲಿಸಬಹುದು ಎಂದು ಕೋರಿದರು. ಈ ಸಂಬಂಧ ದಾಬೋಲ್ಕರ್ ಕುಟುಂಬಸ್ಥರ ಪ್ರತಿಕ್ರಿಯೆ ಕೇಳಿದ ನ್ಯಾಯಾಲಯ ಪ್ರಕರಣವನ್ನು ಜನವರಿ 11, 2023ಕ್ಕೆ ಮುಂದೂಡಿತು.
ಪನ್ಸಾರೆ ಪ್ರಕರಣ ಕುರಿತಂತೆ ಸೂಚನೆ
ಈ ಮಧ್ಯೆ ನ್ಯಾಯಾಲಯ ಕಮ್ಯುನಿಸ್ಟ್ ಪಕ್ಷದ ರಾಜಕಾರಣಿ ಗೋವಿಂದ ಪನ್ಸಾರೆ ಅವರ ಹತ್ಯೆ ಪ್ರಕರಣದ ಸ್ಥಿತಿಗತಿ ವರದಿ ಸಲ್ಲಿಸುವಂತೆ ಭಯೋತ್ಪಾದನಾ ನಿಗ್ರಹ ದಳಕ್ಕೆ ಸೂಚಿಸಿತು. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಇನ್ನಷ್ಟೇ ಆರಂಭಿಸಬೇಕಿದೆ.
ಪನ್ಸಾರೆ ಕುಟುಂಬದ ಪರ ವಾದ ಮಂಡಿಸಿದ ವಕೀಲ ಅಭಯ್ ನೇವಗಿ ಅವರು ಪ್ರಕರಣ ಮುಂದುವರೆಸಲು ಎಟಿಎಸ್‌ಗೆ ಕೊಲ್ಹಾಪುರದಲ್ಲಿ ನ್ಯಾಯಾಲಯ ನಿಗದಿಯಾಗಬೇಕಿದೆ ಎಂದು ತಿಳಿಸಿದರು.