ಸುದ್ದಿಗಳು

[ಧಾಬೋಲ್ಕರ್ ಹತ್ಯೆ] ವೀರೇಂದ್ರ ತಾವಡೆಗೆ ಜಾಮೀನು ನೀಡುವುದು ಸಮಾಜಕ್ಕೆ ಅಪಾಯಕಾರಿ: ಸಿಬಿಐ

Bar & Bench

ವಿಚಾರವಾದಿ ನರೇಂದ್ರ ಧಾಬೋಲ್ಕರ್ ಹತ್ಯೆ ಪ್ರಕರಣದ ಪ್ರಮುಖ ಅರೋಪಿ ವೀರೇಂದ್ರ ತಾವಡೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಸಮಾಜಕ್ಕೆ ಅಪಾಯಕಾರಿ ಎಂದು ಪ್ರಕರಣದ ತನಿಖೆ ಕೈಗೊಂಡ ಸಿಬಿಐ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ. ವೀರೇಂದ್ರ ತಾವಡೆ ಜಾಮೀನು ಕೋರಿ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಸಿಬಿಐ ತನ್ನ ಪ್ರತಿಕ್ರಿಯೆಯಲ್ಲಿ ತಾವಡೆ ಜಾಮೀನಿಗೆ ತೀವ್ರ ಆಕ್ಷೇಪಣೆ ಸೂಚಿಸಿದೆ [ಡಾ. ವೀರೇಂದ್ರಸಿನ್ಹ್ ತಾವಡೆ ವರ್ಸಸ್‌ ಮಹಾರಾಷ್ಟ್ರ ಸರ್ಕಾರ ಮತ್ತಿತರರು].

ಹಾಡುಹಗಲೇ ಸಾರ್ವಜನಿಕ ರಸ್ತೆಯಲ್ಲಿ ಈ ಘೋರ ಪಾತಕವನ್ನು ಕೈಗೊಳ್ಳಲಾಗಿದ್ದು, ಯಾವುದೇ ಸ್ಥಳದಲ್ಲಿ, ಯಾರ ಮೇಲೆ ಬೇಕಾದರೂ ದುಷ್ಕರ್ಮಿಗಳು ಹಲ್ಲೆಗೈಯಬಹುದು ಎಂಬ ಭೀತಿ ಹುಟ್ಟಿಸುವ ಮೂಲಕ ಜನತೆಯಲ್ಲಿ ಅಭದ್ರತೆಯ ಭಾವ ಉಂಟುಮಾಡಿದ್ದಾರೆ ಎಂದು ಸಿಬಿಐ ತನ್ನ ಪ್ರತಿಕ್ರಿಯೆಯಲ್ಲಿ ಹೇಳಿದೆ.

ಮುಂದುವರೆದು, "ಆರೋಪಿಗಳಿಗೆ ಅಥವಾ ಸನಾತನ ಸಂಸ್ಥೆ/ ಹಿಂದೂ ಜನ ಜಾಗೃತಿ ಸಮಿತಿಗೆ ಇಷ್ಟವಾಗದ ಯಾವುದೇ ಕೆಲಸಗಳನ್ನು ಮಾಡಿದವರನ್ನು ಇದೇ ರೀತಿ ಭೀಕರವಾಗಿ ಕೊನೆಗಾಣಿಸಲಾಗುತ್ತದೆ ಎನ್ನುವ ಭಾವನೆಯನ್ನು ಅಪರಾಧದ ಘಟನೆ ನೀಡಿದೆ. ದೇಶ ಹಾಗೂ ಜನತೆಯಲ್ಲಿ ಭದ್ರತೆಯ ಬಗ್ಗೆ ಆತಂಕ ಹುಟ್ಟಿಸಲು ಇಂತಹ ಭಾವನೆಯೊಂದೇ ಸಾಕು. ಇದು ಸಮಾಜದಲ್ಲಿ ಭಯಭೀತಿಯ ಪರಿಣಾಮವನ್ನು ಉಂಟು ಮಾಡುವಂತಹದ್ದಾಗಿದೆ," ಎಂದು ಪ್ರತಿಕ್ರಿಯೆಯಲ್ಲಿ ಹೇಳಲಾಗಿದೆ.

ಜಾಮೀನು ನಿರಾಕರಿಸಲು ಕೋರಿ ಅಫಿಡವಿಟ್‌ನಲ್ಲಿ ಪ್ರಸ್ತಾಪಿಸಿರುವ ಇತರ ಅಂಶಗಳೆಂದರೆ:

  • ದಾಭೋಲ್ಕರ್ ಅವರ ಯೋಜಿತ ಹತ್ಯೆಯು ಜನತೆ ಹಾಗೂ ಸಾಮಾಜಿಕ ಕಾರ್ಯಕರ್ತರಲ್ಲಿ ಭಯ, ಭೀತಿಯ ಹುಟ್ಟಿಗೆ ಕಾರಣವಾಗಿದ್ದು 'ಅಕ್ರಮ ಚಟುವಟಿಕೆಗಳ (ನಿಯಂತ್ರಣ) ಕಾಯಿದೆ'ಯ (ಯುಎಪಿಎ) ನಿಬಂಧನೆಗಳಿಗೆ ಒಳಪಡುತ್ತದೆ.

  • ತಾವಡೆಯ ಮೂರು ಜಾಮೀನು ಅರ್ಜಿಗಳನ್ನು ಇದಾಗಲೇ ತಿರಸ್ಕರಿಸಲಾಗಿದೆ. ಇಂದಿಗೂ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲದೆ ಇರುವುದರಿಂದ ಜಾಮೀನು ನೀಡುವುದು ಸಮಂಜಸವಲ್ಲ.

  • ದಾಭೋಲ್ಕರ್‌ ಅವರ ವಿರುದ್ಧ ತಾವಡೆಗೆ 2002ರಿಂದಲೂ ವೈಯಕ್ತಿಕ ದ್ವೇಷವಿತ್ತು. ದಾಭೋಲ್ಕರ್‌ ಅವರು ಅತಿಥಿಯಾಗಿದ್ದ ಸಭೆಯೊಂದನ್ನು ಭಂಗಗೊಳಿಸಲು ತಾವಡೆ ಸಂಚು ರೂಪಿಸಿದ್ದನ್ನು ಇದಕ್ಕೆ ಪುರಾವೆಯಾಗಿ ನೀಡಿರುವ ತನಿಖಾ ಸಂಸ್ಥೆ.

  • ಬೇರೆ ಎಲ್ಲ ಯೋಜನೆಗಳನ್ನು ಬದಿಗಿಟ್ಟು ದಾಭೋಲ್ಕರ್‌ ಅವರ 'ಅಂಧಶ್ರದ್ಧೆ ನಿರ್ಮೂಲನಾ ಕಾಯಿದೆ'ಯ ಬಗ್ಗೆ ಮಾತ್ರವೇ ಗಮನಹರಿಸುವಂತೆ ಹಿಂದೂ ಜನಜಾಗೃತಿ ಸಮಿತಿಯ ಡಾ. ದುರ್ಗೇಶ್‌ ಸಾಮಂತ್‌ ಅವರು ತಾವಡೆಗೆ 2007ರಲ್ಲಿ ನಿರ್ದೇಶನ ನೀಡಿದ್ದರು.

  • ತಾವಡೆ ಹಾಗೂ ಇತರ ಆರೋಪಿಗಳ ವಿರುದ್ಧ ಸೆಷನ್ಸ್‌ ಕೋರ್ಟ್‌ನಲ್ಲಿ ಆರೋಪ ನಿಗದಿಪಡಿಸಲಾಗಿದೆ.