Bombay High Court
Bombay High Court 
ಸುದ್ದಿಗಳು

ದಾಭೋಲ್ಕರ್ ಹತ್ಯೆ: ತನಿಖೆ ಪೂರ್ಣಗೊಂಡಿದೆಯೇ ಎಂಬುದನ್ನು ತಿಳಿಸಲು ಸಿಬಿಐಗೆ ಸೂಚಿಸಿದ ಬಾಂಬೆ ಹೈಕೋರ್ಟ್

Bar & Bench

ಸಾಮಾಜಿಕ ಹೋರಾಟಗಾರ ನರೇಂದ್ರ ದಾಭೋಲ್ಕರ್ ಅವರ ಹತ್ಯೆಯ ತನಿಖೆ ಪೂರ್ಣಗೊಂಡಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ನ್ಯಾಯಾಲಯಕ್ಕೆ ತಿಳಿಸುವಂತೆ ಬಾಂಬೆ ಹೈಕೋರ್ಟ್ ಸೋಮವಾರ ಸಿಬಿಐಗೆ ಸೂಚಿಸಿದೆ.

ತನಿಖೆ ಮುಗಿದಿದೆಯೇ ಎಂಬುದನ್ನು ದೃಢೀಕರಿಸಲು ಸಿಬಿಐಗೆ ಮೂರು ವಾರಗಳ ಕಾಲಾವಕಾಶವನ್ನು ಅದು ನೀಡಿದ್ದು,  ಇದರಿಂದ ತನಿಖೆಯ ಮೇಲ್ವಿಚಾರಣೆ ಮುಂದುವರಿಸಬೇಕೆ ಎಂದು ನಿರ್ಧರಿಸಲು ಸಾಧ್ಯವಾಗುತ್ತದೆ ಎಂದು ಅದು ಹೇಳಿತು.

ತನಿಖಾಧಿಕಾರಿ ಈಗಾಗಲೇ ತಮ್ಮ ವರದಿ ಸಲ್ಲಿಸಿದ್ದು ಹೆಚ್ಚಿನ ತನಿಖೆ ಅಗತ್ಯವಿಲ್ಲ. ಆದರೆ, ಸಂಬಂಧಪಟ್ಟ ಉನ್ನತ ಅಧಿಕಾರಿಗಳ ಅನುಮೋದನೆ ಪಡೆಯಬೇಕಿದೆ. ಈಗಾಗಲೇ 32 ಸಾಕ್ಷಿಗಳ ಪೈಕಿ 15 ಮಂದಿಯ ವಿಚಾರಣೆ ನಡೆಸಲಾಗಿದೆ. ನಾವು ಪ್ರಕರಣ ಕುರಿತು ತೀರ್ಮಾನ ಕೈಗೊಳ್ಳುವುದನ್ನು ನ್ಯಾಯಾಲಯಕ್ಕೆ ಬಿಡುತ್ತೇವೆ ಎಂದು ಇಂದು ಸಿಬಿಐ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅನಿಲ್ ಸಿಂಗ್ ತಿಳಿಸಿದರು,

ಎಎಸ್‌ಜಿ ಕೋರಿಕೆ ಮೇರೆಗೆ, ನ್ಯಾಯಮೂರ್ತಿಗಳಾದ ಎ ಎಸ್ ಗಡ್ಕರಿ ಮತ್ತು ಪಿ ಡಿ ನಾಯ್ಕ್ ಅವರಿದ್ದ ವಿಭಾಗೀಯ ಪೀಠ ತನಿಖೆಯ ಮೇಲ್ವಿಚಾರಣೆ ಮುಂದುವರಿಸಬೇಕೆ ಎಂದು ನಿರ್ಧರಿಸುವ ನಿಟ್ಟಿನಲ್ಲಿ ಅದು ಪೂರ್ಣಗೊಂಡಿದೆಯೇ ಎಂಬುದನ್ನು ದೃಢೀಕರಿಸಲು ಸಿಬಿಐಗೆ ಮೂರು ವಾರಗಳ ಕಾಲಾವಕಾಶ ನೀಡಿತು.

ಮೌಢ್ಯ ವಿರೋಧಿ ಸಂಘಟನೆಯಾದ ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ್‌ ಸಮಿತಿಯ ಸಂಸ್ಥಾಪಕ ಮತ್ತು ರೂವಾರಿ ದಾಭೋಲ್ಕರ್‌ ಅವರನ್ನು ಸನಾತನ ಸಂಸ್ಥೆ ಎಂಬ ಮೂಲಭೂತವಾದಿ ಸಂಘಟನೆಯ ಸದಸ್ಯರು ಆಗಸ್ಟ್ 2013ರಲ್ಲಿ ಗುಂಡಿಕ್ಕಿ ಕೊಂದಿದ್ದರು. ಸಿಬಿಐ 2014ರಲ್ಲಿ ತನಿಖೆ ಕೈಗೆತ್ತಿಕೊಂಡಿತ್ತು. ಆದರೆ ಸಿಬಿಐ ನಡೆಸುತ್ತಿರುವ ತನಿಖೆ ತೃಪ್ತಿಕರವಾಗಿಲ್ಲದ ಕಾರಣ ತನಿಖೆಯ ಕುರಿತು ಹೈಕೋರ್ಟ್‌ ಮೇಲ್ವಿಚಾರಣೆ ನಡೆಸಬೇಕೆಂದು ಕೋರಿ ದಾಭೋಲ್ಕರ್‌ ಅವರ ಪುತ್ರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.