ಕೇವಲ ಉಗ್ರರ ಸಭೆಯಲ್ಲಿ ಭಾಗವಹಿಸಿದ್ದಾರೆ ಅಥವಾ ಜಿಹಾದ್‌ನಲ್ಲಿ ಭಾಗಿಯಾಗುವಂತೆ ಉಪದೇಶಿತರಾಗಿದ್ದಾರೆ ಎನ್ನುವುದು ಆ ವ್ಯಕ್ತಿ ಜಿಹಾದ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ತೀರ್ಮಾನಕ್ಕೆ ಬರಲು ಸಾಕಾಗುವುದಿಲ್ಲ ಎಂದಿರುವ ಬಾಂಬೆ ಹೈಕೋರ್ಟ್ 2006ರ ಔರಂಗಾಬಾದ್ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣದಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗೆ ಜಾಮೀನು ಶುಕ್ರವಾರ ನೀಡಿತು [ಬಿಲಾಲ್ ಅಹ್ಮದ್ ಅಬ್ದುಲ್ ರಜಾಕ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮತ್ತು ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದ ಪ್ರಕರಣದ ವಿಚಾರಣೆಯನ್ನು ನಡೆಸಿದ್ದ ವಿಶೇಷ ನ್ಯಾಯಾಲಯವು ಏಳು ಆರೋಪಿಗಳು ಸಂಚಿನ ಭಾಗವಾಗಿದ್ದು ದೋಷಿಗಳು ಎಂದು 2016ರಲ್ಲಿ ತೀರ್ಪು ನೀಡಿತ್ತು. ಇದು ಎಲ್ಲರ ಗಮನಸೆಳೆದಿತ್ತು.
ಶುಕ್ರವಾರ ತೀರ್ಪು ನೀಡಿದ ನ್ಯಾಯಮೂರ್ತಿಗಳಾದ ರೇವತಿ ಮೊಹಿತೆ ದೆರೆ ಮತ್ತು ವಿಶ್ವೇಂದ್ರ ಸಿಂಗ್ ಬಿಷ್ತ್ ಅವರಿದ್ದ ವಿಭಾಗೀಯ ಪೀಠ ಆರೋಪಿ ಬಿಲಾಲ್ ರಜಾಕ್ ವಿರುದ್ಧ ಸಹ ಆರೋಪಿಗಳು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದರೂ ಕೂಡ ಇದರ ಹೊರತಾಗಿ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎನ್ನಲು ಬೇರಾವುದೇ ತೃಪ್ತಿಕರ ಪುರಾವೆಗಳು ಇಲ್ಲದೆ ಹೋಗಿರುವುದರಿಂದ ಈ ಹೇಳಿಕೆಗಳು ತೀರ್ಪು ನೀಡಲು ಸಾಲುವುದಿಲ್ಲ ಎಂದು ಅಭಿಪ್ರಾಯಪಟ್ಟಿತು.
ಬಿಲಾಲ್ ಅವರನ್ನು ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯಿದೆ (MCOCA) ಅಡಿಯಲ್ಲಿ ಅಪರಾಧಿ ಎಂದು ನಿರ್ಣಯಿಸಿಲ್ಲ ಎನ್ನುವುದು ದಾಖಲೆಗಳಿಂದ ತಿಳಿದು. ಅವರ ವಿರುದ್ಧ ಕಾಯಿದೆಯ ಸೆಕ್ಷನ್ 18 ರ ಅಡಿಯಲ್ಲಿ ದಾಖಲಿಸಲಾದ ತಪ್ಪೊಪ್ಪಿಗೆ ಹೇಳಿಕೆಗಳು ಅತ್ಯಲ್ಪವಾಗಿವೆ. ಬಿಲಾಲ್ ಅವರನ್ನು ಉಗ್ರರಿಗೆ ಪರಿಚಯ ಮಾಡಿಕೊಡಲಾಯಿತು. ಸಭೆಗಳಿಗೆ ಹಾಜರಾಗುವಂತೆ, ಜಿಹಾದ್‌ನಲ್ಲಿ ಭಾಗಿಯಾಗುವಂತೆ ಅವರನ್ನು ಪ್ರೇರೇಪಿಸಲಾಗಿತ್ತು ಎನ್ನಲಾಗಿದೆ. ಹಾಗೆಂದ ಮಾತ್ರಕ್ಕೆ ಮೇಲ್ನೋಟಕ್ಕೆ ಪುರಾವೆ ಇಲ್ಲದಿರುವಾಗ ಜಿಹಾದ್‌ನಲ್ಲಿ ಪ್ರ,ಮುಖ ಪಾತ್ರ ವಹಿಸಲು ಅವರ ಕಡೆಯಿಂದ ಸಿದ್ಧತೆ ನಡೆದಿತ್ತು ಅಥವಾ ಸ್ವ ಇಚ್ಛೆ ಇತ್ತು ಎಂದು ಅರ್ಥವಲ್ಲ. ತಪ್ಪೊಪ್ಪಿಗೆ ಹೇಳಿಕೆ ಆಧರಿಸಿ ಆತನ ವಿರುದ್ಧ ದೋಷಾರೋಪ ಮಾಡಲಾಗದು” ಎಂದು ನ್ಯಾಯಾಲಯ ವಿವರಿಸಿತು.