ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್ ಅಸಹಕಾರ ತೋರಿದ್ದರಿಂದ ಅವರನ್ನು ಬಂಧಿಸಿದ್ದು, ಅವರ ಅಸಹಕಾರದಿಂದಾಗಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಾನು ನಡೆಸುತ್ತಿರುವ ತನಿಖೆಯ ವೇಗ ಕುಂಠಿತವಾಯಿತು ಎಂದು ಜಾರಿ ನಿರ್ದೇಶನಾಲಯ (ಇ ಡಿ) ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.
ಗೋಯೆಲ್ ಅಸಹಕಾರವು ಬ್ಯಾಂಕ್‌ಗಳನ್ನು ವಂಚಿಸುವ ಅವರ ದುರುದ್ದೇಶವನ್ನು ಸಾಬೀತುಪಡಿಸಿದೆ ಎಂದು ಇ ಡಿ ಅಫಿಡವಿಟ್‌ನಲ್ಲಿ ತಿಳಿಸಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಗೋಯೆಲ್ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಸಲ್ಲಿಸಿದ್ದರು. ಇದನ್ನು ವಿರೋಧಿಸಿ ಇ ಡಿ ಈ ಅಫಿಡವಿಟ್ ಸಲ್ಲಿಸಿದೆ.
ಗೋಯಲ್ ಅವರು ತನಿಖೆಗೆ ಅತೀವ ಅಸಹಕಾರ ತೋರಿದ್ದರು, ತಪ್ಪಿಸಿಕೊಳ್ಳುತ್ತಿದ್ದರು. ಅವರ ಹೇಳಿಕೆ ಹಾಗೂ ವರ್ತನೆಗಳು ಸಂಶಯಕ್ಕೆ ಎಡೆ ಮಾಡಿದ್ದವು. ಅಪಾರಧ ಕೃತ್ಯದಿಂದ ಗಳಿಸಿದ ಹಣದ ಜಾಡನ್ನು ಪತ್ತೆ ಹಚ್ಚುವ ಉದ್ದೇಶದಿಂದ ಅವರ ಬಂಧನವನ್ನು ಮಾಡಲಾಗಿದೆ ಎಂದು ಇ ಡಿ ತಿಳಿಸಿದೆ.
ಕೆನರಾ ಬ್ಯಾಂಕ್‌ಗೆ ₹ 538 ಕೋಟಿ ಅಕ್ರಮವಾಗಿ ನಷ್ಟ ಉಂಟು ಮಾಡಿದ ಆರೋಪದ ಮೇಲೆ ಗೋಯಲ್ ಅವರನ್ನು ಸೆಪ್ಟೆಂಬರ್ 1 ರಂದು ಇಡಿ ಬಂಧಿಸಿತ್ತು.
ತಮ್ಮನ್ನು ಇ ಡಿ ವಶಕ್ಕೆ ನೀಡಿ ನಂತರ ನ್ಯಾಯಾಂಗ ಬಂದನಕ್ಕೆ ಒಳಪಡಿಸಿದ ಆದೇಶಗಳು ವಿವೇಚನಾರಹಿತವಾದವು. ಬಂಧನಕ್ಕೆ ಯಾವುದೇ ಆಧಾರಗಳನ್ನು ನೀಡಲು ಇಡಿ ವಿಫಲವಾಗಿದೆ ಎಂದು ಗೋಯೆಲ್ ವಾದಿಸಿದ್ದರು.
ಆದರೆ ಇ ಡಿ ಈ ವಾದವನ್ನು ವಿರೋಧಿಸಿದೆ. ಬಂಧನಕ್ಕೆ ಸಂಬಂಧಿಸಿದಂತೆ ನೀಡಲಾಗಿದ್ದ ನೋಟಿಸ್‌ಗೆ ಅಧಿಕೃತ ವ್ಯಕ್ತಿಗಳು ಸಹಿ ಮಾಡಿದ್ದಾರೆ. ಬಂಧನಕ್ಕೆ ಕಾರಣ ಏನೆಂಬುದನ್ನು ಗೋಯೆಲ್ ಹಾಗೂ ಅವರ ಪತ್ನಿಗೆ ತಿಳಿಸಲಾಗಿದೆ. ಶಾಸನಬದ್ಧ ನಿಯಮಾವಳಿಗಳನ್ನು ಪಾಲಿಸಿಲ್ಲ ಎನ್ನಲಾಗದು. ನ್ಯಾಯಿಕ ವಿವೇಚನೆ ಇಲ್ಲದೆ ಪಿಎಂಎಲ್‌ಎ ವಿಶೇಷ ನ್ಯಾಯಾಲಯ ರಿಮಾಂಡ್ ಆದೇಶ ನೀಡಿಲ್ಲ ಎಂದು ಅಫಿಡವಿಟ್ ಪ್ರತಿಪಾದಿಸಿದೆ.