ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ತೇಜೋವಧೆ ಮಾಡುವ ಉದ್ದೇಶದಿಂದ ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳದ (ಎಸ್‌ಐಟಿ) ಪೊಲೀಸರಿಂದ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದ ನರೇಶ್ ಗೌಡ ಬಿ ಎಂ ಮತ್ತು ಆರ್ ಶ್ರವಣ್ ಕುಮಾರ್ ಅವರಿಗೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಕಳೆದ ಬುಧವಾರ ನಿರೀಕ್ಷಣಾ ಜಾಮೀನು ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಶ್ರೀಧರ್ ಗೋಪಾಲಕೃಷ್ಣ ಭಟ್ ಅವರು ತೀರ್ಪು ಕಾಯ್ದಿರಿಸಿದ್ದರು. ಹಿಂದಿನ ವಿಚಾರಣೆಯ ವೇಳೆ ಎಸ್‌ಐಟಿ ಪರ ಹಿರಿಯ ವಕೀಲ ಕಿರಣ್ ಜವಳಿ ಅವರು ನಿರೀಕ್ಷಣಾ ಜಾಮೀನಿಗೆ ತೀವ್ರ ವಿರೋಧ ದಾಖಲಿಸಿದ್ದರು. ಎಸ್‌ಐಟಿ ಆರೋಪಗಳನ್ನು ನಿರಾಕರಿಸಿದ್ದ ಹಿರಿಯ ವಕೀಲ ಎ ಎಸ್ ಪೊನ್ನಣ್ಣ ಅವರು ನರೇಶ್ ಮತ್ತು ಶ್ರವಣ್ ಜಾಮೀನಿಗೆ ಅರ್ಹರು ಎಂದು ವಾದಿಸಿದ್ದರು.
“ನಮ್ಮ ಕಕ್ಷಿದಾರರ ವಿರುದ್ಧದ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ. ಅತ್ಯಾಚಾರ ಆರೋಪಿಯಾಗಿರುವ ರಮೇಶ್ ಜಾರಕಿಹೊಳಿ ಅವರನ್ನು ರಕ್ಷಿಸಲು ನಮ್ಮ ಕಕ್ಷಿದಾರರನ್ನು ಗುರಿಯಾಗಿಸಿ, ಕಿರುಕುಳ ನೀಡಲಾಗುತ್ತಿದೆ. ಎಸ್‌ಐಟಿ ಪೊಲೀಸರ ಈ ತನಿಖೆಯಿಂದಾಗಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಜಾರಕಿಹೊಳಿ ಅವರು ಫಿರ್ಯಾದಿ ಸ್ಥಾನಕ್ಕೆ ಬಂದಿದ್ದಾರೆ. ಹೀಗಾಗಿ, ಪ್ರಾಸಿಕ್ಯೂಷನ್ ಸಾಕ್ಷಿ ಎಂದು ಜಾರಕಿಹೊಳಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ” ಎಂದು ಪೊನ್ನಣ್ಣ ಪೀಠದ ಗಮನ ಸೆಳೆದಿದ್ದರು.