ಸುದ್ದಿಗಳು

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್ ಗಾಂಧಿ ಪ್ರತಿಕ್ರಿಯೆಗೆ ಸೂಚಿಸಿದ ದೆಹಲಿ ಹೈಕೋರ್ಟ್

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ಮುಂದೆ ಹೆಚ್ಚುವರಿ ಸಾಕ್ಷ್ಯಗಳಿಂದ ಹೇಳಿಕೆ ಪಡೆಯಲು ಅವಕಾಶ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

Bar & Bench

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಹೆಚ್ಚುವರಿ ಸಾಕ್ಷ್ಯಗಳಿಂದ ಹೇಳಿಕೆ ಪಡೆಯಲು ಅವಕಾಶ ಕೋರಿ ಹಿರಿಯ ವಕೀಲ, ರಾಜಕಾರಣಿ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ ಪ್ರತಿಕ್ರಿಯಿಸಬೇಕೆಂದು ದೆಹಲಿ ಹೈಕೋರ್ಟ್‌ ಸೂಚಿಸಿದೆ.

ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರಿದ್ದ ಏಕ ಸದಸ್ಯ ಪೀಠವು ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿಗೊಳಿಸಿ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಇತರ ಆರೋಪಿಗಳಾದ ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೊಡಾ ಮತ್ತು ಯಂಗ್ ಇಂಡಿಯಾ ಸಂಸ್ಥೆಯಿಂದಲೂ ಪ್ರತಿಕ್ರಿಯೆ ಕೋರಿದೆ.

ನವದೆಹಲಿಯ ರೌಸ್ ಅವೆನ್ಯೂ ವಿಶೇಷ ನ್ಯಾಯಾಲಯದ ಮುಂದೆ ಬಾಕಿ ಇರುವ ವಿಚಾರಣೆಗೆ ಕೂಡ ದೆಹಲಿ ಹೈಕೋರ್ಟ್‌ ತಡೆ ನೀಡಿದೆ. ಪ್ರಕರಣ ಪೂರ್ವಾರೋಪ ಸಾಕ್ಷ್ಯಗಳ ಹಂತದಲ್ಲಿದೆ. ಕೆಲ ಸಾಕ್ಷ್ಯಗಳನ್ನು ದಾಖಲೆಯಲ್ಲಿ ಪರಿಗಣಿಸುವಂತೆ ಕೋರಿ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಸ್ವಾಮಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

".. ಸಿಆರ್‌ಪಿಸಿ ಸೆಕ್ಷನ್ 244 ರ ಅಡಿಯಲ್ಲಿ, ತ್ವರಿತ ಸಾಕ್ಷ್ಯ (ಗಳನ್ನು) ಮುಂದಿರಿಸಲು, ಯಾವುದೇ ಹಂತದಲ್ಲಿ ಸಾಕ್ಷಿ (ಗಳನ್ನು) ಕರೆಸಿಕೊಳ್ಳಲು ಅರ್ಜಿದಾರರು ನ್ಯಾಯಾಧೀಶರಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಲು ಎಸಿಎಂಎಂ (ವಿಶೇಷ ನ್ಯಾಯಾಲಯ) ವಿಫಲವಾಗಿದೆ" ಎಂಬುದಾಗಿ ಸ್ವಾಮಿ ಅವರ ಅರ್ಜಿಯಲ್ಲಿ ತಿಳಿಸಲಾಗಿದೆ. ಈ ಹಂತದಲ್ಲಿ ಅರ್ಜಿಗೆ ಅನುಮತಿ ನೀಡುವುದರಿಂದ ವಿಚಾರಣಾ ನ್ಯಾಯಾಲಯದ ಅಮೂಲ್ಯ ಸಮಯ ಉಳಿಸಬಹುದು ಎಂದು ಹೇಳಲಾಗಿದೆ. ಪೂರಕ ಅಥವಾ ಹೆಚ್ಚುವರಿ ಸಾಕ್ಷಿಗಳ ಪಟ್ಟಿ ಸ್ವೀಕರಿಸಲು ಮತ್ತು ಅವರಿಗೆ ಸಮನ್ಸ್ ಜಾರಿಗೊಳಿಸಿ ಸಾಕ್ಷ್ಯಗಳನ್ನು ದಾಖಲಿಸಲು ನ್ಯಾಯಾಲಯಕ್ಕೆ ಸೆಕ್ಷನ್ 244 ನೀಡಿರುವ ಅಧಿಕಾರ ಸಾಕಷ್ಟಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಸಾಕ್ಷ್ಯಗಳನ್ನು ಈಗಾಗಲೇ ಪಡೆದಿರುವುದರಿಂದ ಹೆಚ್ಚುವರಿ ಸಾಕ್ಷ್ಯಗಳನ್ನು ಅರ್ಜಿದಾರರ ಸಾಕ್ಷ್ಯಗಳ ವಿಚಾರಣೆಯ ನಂತರ ಪರಿಗಣಿಸಲಾಗುವುದು ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯ ಸ್ವಾಮಿ ಅವರ ಅರ್ಜಿಯನ್ನು ತಿರಸ್ಕರಿಸಿತ್ತು. ಇದೇ ರೀತಿಯ ಮನವಿಯನ್ನು ಹಿಂದಿನ ನ್ಯಾಯಾಧೀಶರೂ ತಿರಸ್ಕರಿಸಿದ್ದಾರೆ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿತ್ತು. ಪ್ರಕರಣ ಏಪ್ರಿಲ್ 12 ರಂದು ವಿಚಾರಣೆಗೆ ಬರಲಿದೆ.

ನ್ಯಾಷನಲ್‌ ಹೆರಾಲ್ಡ್‌ ಮಾಲೀಕ ಸಂಸ್ಥೆಯಾದ ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ಗೆ (ಎಜೆಎಲ್‌) ಕಾಂಗ್ರೆಸ್‌ 90 ಕೋಟಿ ರೂ ಮುಂಗಡ ಸಾಲ ನೀಡಿದ ಪ್ರಕರಣದ ಇದಾಗಿದೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೊರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೊಡಾ ಮತ್ತು ಗಾಂಧಿ ಕುಟುಂಬದ ಹಿಡಿತದಲ್ಲಿರುವ ಯಂಗ್‌ ಇಂಡಿಯಾ ಸಂಸ್ಥೆ ಮೋಸ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆದ್ರೋಹ ಮತ್ತು ಆಸ್ತಿ ದುರುಪಯೋಗಪಡಿಸಿಕೊಂಡಿವೆ ಎಂದು ಆರೋಪಿಸಿ ಸುಬ್ರಮಣಿಯನ್‌ ಸ್ವಾಮಿ ಖಾಸಗಿ ದೂರು ಸಲ್ಲಿಸಿದ್ದರು.