KALSA Chairman and Justice G Narendar and HCLSC Chairman K Somashekar
KALSA Chairman and Justice G Narendar and HCLSC Chairman K Somashekar 
ಸುದ್ದಿಗಳು

ಜುಲೈ 8ಕ್ಕೆ ರಾಷ್ಟ್ರೀಯ ಲೋಕ ಅದಾಲತ್; ಟ್ರಾಫಿಕ್ ಚಲನ್ ಪ್ರಕರಣಗಳ ದಂಡದಲ್ಲಿ ಶೇ.50 ವಿನಾಯಿತಿ

Bar & Bench

ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್‌ಎಲ್‌ಎಸ್‌ಎ) ವತಿಯಿಂದ ಜುಲೈ 8ರಂದು (ಶನಿವಾರ) ಹೈಕೋರ್ಟ್ ಸೇರಿ ರಾಜ್ಯದ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದೆ ಎಂದು ಕೆಎಸ್‌ಎಲ್‌ಎಸ್‌ಎ ಕಾರ್ಯಕಾರಿ ಅಧ್ಯಕ್ಷರೂ ಆದ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಜಿ ನರೇಂದರ್ ಗುರುವಾರ ತಿಳಿಸಿದರು.

ಹೈಕೋರ್ಟ್‌ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಲೋಕ ಅದಾಲತ್‌ನಲ್ಲಿ ರಾಜಿ ಮಾಡಿಕೊಳ್ಳಬಹುದಾದ ನ್ಯಾಯಾಲಯಗಳಲ್ಲಿ ಬಾಕಿಯಿರುವ ಪ್ರಕರಣಗಳು ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದು ಎಂದರು.

ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮ್‌ಗಳು, ಮೋಟಾರು ಅಪಘಾತ ಪರಿಹಾರ ನ್ಯಾಯ ಮಂಡಳಿ ಪ್ರಕರಣ, ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಕರಣಗಳು, ಚೆಕ್‌ಬೌನ್ಸ್‌ ಪ್ರಕರಣಗಳು, ವೈವಾಹಿಕ/ಕೌಟುಂಬಿಕ ಪ್ರಕರಣ (ವಿಚ್ಛೇದನ ಹೊರತುಪಡಿಸಿ) ಸೇರಿ ರಾಜಿಯಾಗಬಲ್ಲ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಅದಾಲತ್‌ನಲ್ಲಿ ಪರಿಗಣಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಅಲ್ಲದೆ, ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ರಾಜ್ಯದಾದ್ಯಂತ ಎರಡು ಕೋಟಿಗೂ ಹೆಚ್ಚು ಟ್ರಾಫಿಕ್ ಚಲನ್ ಪ್ರಕರಣಗಳು ದಂಡ ವಸೂಲಾತಿಗೆ ಬಾಕಿಯಿದೆ. ಅವುಗಳಿಂದ ಸಾವಿರ ಕೋಟಿ ರೂಪಾಯಿಗಿಂತ ಹೆಚ್ಚು ದಂಡ ಪಾವತಿಸಿಕೊಳ್ಳಬಹುದಾಗಿದೆ. ಇದರಿಂದ ಕಾನೂನು ಸೇವೆಗಳ ಪ್ರಾಧಿಕಾರವು ಜೂನ್‌ 14ರಂದು ಸರ್ಕಾರದೊಂದಿಗೆ ಸಭೆ ನಡೆಸಿ ಟ್ರಾಫಿಕ್ ಚಲನ್ ಪ್ರಕರಣಗಳ ದಂಡದಲ್ಲಿ ಶೇ.50 ವಿನಾಯಿತಿ ನೀಡುವಂತೆ ಕೋರಿತ್ತು. ಅದಕ್ಕೆ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿ, 2023ರ ಫೆಬ್ರವರಿ 11ಕ್ಕೂ ಹಿಂದಿನ ಟ್ರಾಫಿಕ್ ಚಲನ್ ಪ್ರಕರಣಗಳಲ್ಲಿ ಶೇ.50 ದಂಡದ ಮೊತ್ತ ವಿನಾಯಿತಿ ನೀಡಿ ಜುಲೈ 5ರಂದು ಆದೇಶಿಸಿದೆ. ಅದನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿ ಜಿ.ನರೇಂದರ್ ಸಲಹೆ ನೀಡಿದ್ದಾರೆ.