Navjot Singh Siddu and APS Deol (Punjab) 
ಸುದ್ದಿಗಳು

ಪಂಜಾಬ್‌ ಸರ್ಕಾರದ ಕಾರ್ಯಾಚರಣೆಗೆ ನವಜೋತ್‌ ಸಿಂಗ್‌ ಸಿಧು ಅಡ್ಡಿ, ಕಾಂಗ್ರೆಸ್‌ ವರ್ಚಸ್ಸಿಗೆ ಧಕ್ಕೆ: ಎಜಿ ಡಿಯೋಲ್‌

ಮಾದಕ ವಸ್ತು ಪ್ರಕರಣಗಳು ಮತ್ತು ಧಾರ್ಮಿಕ ನಂಬಿಕೆಗಳಿಗೆ ಅಪಚಾರವೆಸಗಿದ ಪ್ರಕರಣಗಳಲ್ಲಿ ನ್ಯಾಯಕೊಡಿಸುವ ಸರ್ಕಾರದ ಪ್ರಯತ್ನಕ್ಕೆ ತಮ್ಮ ಹೇಳಿಕೆಗಳ ಮೂಲಕ ಸಿಧು ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಡಿಯೋಲ್‌ ಆರೋಪಿಸಿದ್ದಾರೆ.

Bar & Bench

ಪಂಜಾಬ್‌ ಸರ್ಕಾರದ ಕಾರ್ಯನಿರ್ವಹಣೆಗೆ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು ಧಕ್ಕೆ ಉಂಟು ಮಾಡುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕೆಲವು ಸ್ಥಾಪಿತ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಕಾಂಗ್ರೆಸ್‌ನ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತಿವೆ ಎಂದು ಪಂಜಾಬ್‌ನ ಅಡ್ವೊಕೇಟ್‌ ಜನರಲ್‌ (ಎಜಿ) ಎಪಿಎಸ್‌ ಡಿಯೋಲ್‌ ಶನಿವಾರ ಹೇಳಿದ್ದಾರೆ.

ಮಾದಕ ವಸ್ತು ಮತ್ತು ಧಾರ್ಮಿಕ ನಂಬಿಕೆಗಳಿಗೆ ಅಪಚಾರವೆಸಗಿದ ಪ್ರಕರಣಗಳಲ್ಲಿ ನ್ಯಾಯಕೊಡಿಸುವ ಸರ್ಕಾರದ ಪ್ರಯತ್ನಕ್ಕೆ ಪುನರಾವರ್ತಿತ ಹೇಳಿಕೆಗಳ ಮೂಲಕ ಧಕ್ಕೆ ಉಂಟು ಮಾಡುವ ಕೆಲಸವನ್ನು ಸಿಧು ಮಾಡುತ್ತಿದ್ದಾರೆ ಎಂದು ಡಿಯೋಲ್‌ ಆರೋಪಿಸಿದ್ದಾರೆ.

“ತಮ್ಮ ಸಹೋದ್ಯೋಗಿಗಳ ವಿರುದ್ಧ ರಾಜಕೀಯವಾಗಿ ಮೇಲುಗೈ ಸಾಧಿಸಲು ನವಜೋತ್‌ ಸಿಂಗ್‌ ಸಿಧು ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ. ಪಂಜಾಬ್‌ನ ಅಡ್ವೊಕೇಟ್-ಜನರಲ್ ಅವರ ಸಾಂವಿಧಾನಿಕ ಕಚೇರಿಯನ್ನು ರಾಜಕೀಯಗೊಳಿಸುವ ಮೂಲಕ ತಮ್ಮ ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಪಂಜಾಬ್‌ನಲ್ಲಿ ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಕಾರ್ಯನಿರ್ವಹಣೆಗೆ ಚ್ಯುತಿ ಉಂಟು ಮಾಡಲು ಪಟ್ಟಭದ್ರ ಹಿತಾಸಕ್ತಿಗಳಿಂದ ಸಂಘಟಿತ ಪ್ರಯತ್ನ ನಡೆಯುತ್ತಿದೆ” ಎಂದು ಎಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡಿಯೋಲ್‌ ಅವರನ್ನು ಅಡ್ವೊಕೇಟ್‌ ಜನರಲ್‌ ಆಗಿ ನೇಮಕ ಮಾಡಿದ್ದಕ್ಕೆ ಆಕ್ಷೇಪಿಸಿದ್ದ ಸಿಧು ಅವರು ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಕಳೆದ ತಿಂಗಳು ರಾಜೀನಾಮೆ ನೀಡಿದ್ದರು.

ಬೆಹ್ಬಲ್‌ ಕಾಲನ್‌ ಪೊಲೀಸ್‌ ಗೋಲಿಬಾರ್‌ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಮಾಜಿ ಡಿಜಿಪಿ ಸುಮೇಧ್‌ ಸಿಂಗ್‌ ಸೈನಿ ಮತ್ತು ಪರಮರಾಜ್‌ ಸಿಂಗ್‌ ಉಮರಾನಂಗಲ್ ಅವರನ್ನು ಡಿಯೋಲ್‌ ಪ್ರತಿನಿಧಿಸಿದ್ದರು ಎಂದು ಸಿಧು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಎಜಿ ಹುದ್ದೆಗೆ ಡಿಯೋಲ್‌ ಅವರು ರಾಜೀನಾಮೆ ಸಲ್ಲಿಸಿದ್ದರು. ಆದರೆ, ಅದನ್ನು ಮುಖ್ಯಮಂತ್ರಿ ಕಚೇರಿ ಒಪ್ಪಿಕೊಂಡಿರಲಿಲ್ಲ ಎಂದು ವರದಿಯಾಗಿತ್ತು.