ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಿರುವ ಆದೇಶಕ್ಕೆ ಬೆಂಬಲ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮತ್ತು ಗೋವಾ ಬಾರ್ ಕೌನ್ಸಿಲ್ ನಡೆಯನ್ನು ಹಿರಿಯ ವಕೀಲ ನವ್ರೋಜ್ ಸೀರ್ವಾಯ್ ಬಲವಾಗಿ ಖಂಡಿಸಿದ್ದಾರೆ. “ಮಹಾರಾಷ್ಟ್ರ ಮತ್ತು ಗೋವಾ ಬಾರ್ ಕೌನ್ಸಿಲ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರನ್ನು ಸಂತುಷ್ಟಗೊಳಿಸುವ ಗುಲಾಮಿತನದ ಮೂಲಕ ಸ್ವ ಹಿತಾಸಕ್ತಿ ಕಾಯ್ದುಕೊಳ್ಳಲು ಮುಂದಾಗಿವೆ” ಎಂದು ಕಟುವಾಗಿ ಟೀಕಿಸಿದ್ದಾರೆ.
ಕೋರ್ಟ್ ಆದೇಶದ ವಿರುದ್ಧ ಹೇಳಿಕೆ ನೀಡುವ ಮೂಲಕ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಆರೋಪಿಸಿ ವಕೀಲರ ಒಕ್ಕೂಟವು ಬುಧವಾರ ಗೊತ್ತುವಳಿ ಮಂಡಿಸಿತ್ತು.
ಮಹಾರಾಷ್ಟ್ರ ಮತ್ತು ಗೋವಾದಲ್ಲಿ ಕೋರ್ಟ್ ಕಾರ್ಯ-ಕಲಾಪಗಳಲ್ಲಿ ಭಾಗವಹಿಸುವ 1.75 ಲಕ್ಷ ವಕೀಲರ ಹಿತಾಸಕ್ತಿ ಪ್ರತಿನಿಧಿಸುವುದಾಗಿ ಹೇಳಿಕೊಂಡಿರುವ ಮಹಾರಾಷ್ಟ್ರ ಮತ್ತು ಗೋವಾ ಬಾರ್ ಕೌನ್ಸಿಲ್ ಹೇಳಿಕೆಗೆ ಗುರುವಾರ ಹೇಳಿಕೆ ಬಿಡುಗಡೆ ಮಾಡಿ ಸೀರ್ವಾಯ್ ಪ್ರತಿಭಟನೆ ದಾಖಲಿಸಿದ್ದಾರೆ.
ನೋಂದಾಯಿತ ವಕೀಲರ ಪರವಾಗಿ ಮಾತನಾಡುತ್ತಿರುವುದಾಗಿ ಹೇಳಿಕೊಂಡಿರುವ ಮಹಾರಾಷ್ಟ್ರ ಮತ್ತು ಗೋವಾ ಬಾರ್ ಕೌನ್ಸಿಲ್ ದುರಾಡಳಿತ ಪ್ರದರ್ಶನ ನಡೆಸುತ್ತಿದೆ. ಕೌನ್ಸಿಲ್ ಗೆ ಯಾವುದೇ ಸಂಸ್ಥೆಯು ನಿರ್ದಿಷ್ಟ ನಿರ್ಧಾರ ಕೈಗೊಳ್ಳುವ ಅಧಿಕಾರ ನೀಡಿಲ್ಲ. ಕೌನ್ಸಿಲ್ ದುರ್ನಡೆ ಇಟ್ಟಿದೆ ಎಂಬುದಕ್ಕೆ ಅದರ ಬೇಜಾವಾಬ್ದಾರಿತನ ಸಾಕ್ಷಿಯಾಗಿದೆ ಎಂದು ಸೀರ್ವಾರ್ಯ್ ಹೇಳಿದ್ದಾರೆ.
ತಮ್ಮ ಹೇಳಿಕೆಯಲ್ಲಿ ಮುಂದುವರೆದು ವಿವರಿಸಿರುವ ಸೀರ್ವಾಯ್ ಅವರು ಗೋವಾ ಮತ್ತು ಮಹಾರಾಷ್ಟ್ರ ವಕೀಲರ ಒಕ್ಕೂಟ ಹಾಗೂ ವಕೀಲರು, ಮಹಾರಾಷ್ಟ್ರ ಹಾಗೂ ಗೋವಾ ಬಾರ್ ಕೌನ್ಸಿಲ್ ಗೊತ್ತುವಳಿಯನ್ನು ಪ್ರಬಲವಾಗಿ ಖಂಡಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಹೀಗೆಂದಿದ್ದಾರೆ:
“ಪ್ರಶಾಂತ್ ಭೂಷಣ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿಗೆ ಸಂಬಂಧಿಸಿದಂತೆ ಬಾರ್ ನನ್ನ ಹೇಳಿಕೆಯನ್ನು ಪ್ರತಿನಿಧಿಸಲು ಮುಂದಾಗಿರುವುದನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತೇನೆ. ಇಲ್ಲಿನ ಹೇಳಿಕೆಯು ಸಾರ್ವಜನಿಕವಾಗಿ ನಾನು ಬಿಡುಗಡೆ ಮಾಡಿರುವ ಹೇಳಿಕೆಗೆ ವಿರುದ್ಧವಾಗಿದೆ”ನವ್ರೋಜ್ ಸೀರ್ವಾಯ್, ಹಿರಿಯ ವಕೀಲ
ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಹೇಳಿಕೆಯನ್ನು ಪ್ರತಿನಿಧಿಸುವುದಾಗಿ ಹೇಳುತ್ತಿರುವ ಕೌನ್ಸಿಲ್ ನಡೆಯನ್ನು ಭವ್ಯ ಕಲ್ಪನೆ ಎಂದಿರುವ ಸೀರ್ವಾಯ್, ಈ ರೀತಿಯಲ್ಲಿ ನಡೆದುಕೊಳ್ಳಲು ಕೌನ್ಸಿಲ್ ಗೆ ಯಾವುದೇ ತೆರನಾದ ಅಧಿಕಾರವಿಲ್ಲ ಎಂದಿದ್ದಾರೆ.