ಸುದ್ದಿಗಳು

ನ್ಯಾಯಾಂಗ ನಿಂದನೆ ವ್ಯಾಪ್ತಿಯ ಅರ್ಥೈಸುವಿಕೆ, ವಿಶ್ಲೇಷಣೆ, ತಾರ್ಕಿಕತೆಯಲ್ಲಿ ಸುಪ್ರೀಂ ಕೋರ್ಟ್ ಎಡವಿದೆ: ಸೀರ್ವಾಯ್

“ಭೂಷಣ್ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ತೀರ್ಪು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಪ್ರಹಾರ. ಭೂಷಣ್‌ರನ್ನು ಉದಾಹರಣೆಯನ್ನಾಗಿಸುವ ಮೂಲಕ ಮಹತ್ತರ ಸಂದೇಶ ರವಾನಿಸುವ ಕಾರ್ಯದಲ್ಲಿ ಕೋರ್ಟ್ ಯಶಸ್ವಿಯಾಗಿದೆ,” ಎಂದು ಸೀರ್ವಾಯ್ ಹೇಳಿದ್ದಾರೆ

Bar & Bench

ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಿರಿಯ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಭೂಷಣ್ ಅವರನ್ನು ದೋಷಿ ಎಂದು ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ನಿರ್ಧಾರದ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಹಿರಿಯ ವಕೀಲ ನವ್ರೋಜ್ ಸೀರ್ವಾಯ್ ಅವರು ಕೋರ್ಟ್ ಪ್ರಕ್ರಿಯೆಗಳ ಬಗ್ಗೆ ತಿಳಿದಿರುವವರಿಗೆ ತೀರ್ಪು ನಾಗರಿಕ ಸಮಾಜದ ಮೇಲಿನ ಗದಾಪ್ರಹಾರದಂತೆ ಭಾಸವಾಗುತ್ತಿದೆ ಎಂದಿದ್ದಾರೆ.

ಪ್ರಶಾಂತ್ ಭೂಷಣ್ ಅವರ ಎರಡು ವಿವಾದಾತ್ಮಕ ಟ್ವೀಟ್ ಗಳಿಗೆ ಸಂಬಂಧಿಸಿದಂತೆ ದಾಖಲಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಅವರನ್ನು ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ದೋಷಿ ಎಂದು ತೀರ್ಪು ನೀಡಿತ್ತು. 108 ಪುಟಗಳ ಸುದೀರ್ಘ ತೀರ್ಪು ನೀಡಿದ್ದ ನ್ಯಾಯಪೀಠವು ನ್ಯಾಯಾಲಯದ ಮೇಲಿನ ಈ ಪರಿಯ ದಾಳಿಯನ್ನು ಸಮರ್ಥವಾಗಿ ನಿಭಾಯಿಸದಿದ್ದರೆ ಇದು ರಾಷ್ಟ್ರೀಯ ಗೌರವ ಮತ್ತು ಘನತೆಗೆ ಚ್ಯುತಿ ಉಂಟು ಮಾಡಬಹುದು ಅಭಿಪ್ರಾಯಪಟ್ಟಿತ್ತು.

ವಿಚಾರಣೆಯ ಸಂದರ್ಭದಲ್ಲಿ ಪೀಠವು ಹೀಗೆ ಹೇಳಿತ್ತು:

ಧಾರಾಳತೆಯನ್ನು ಹೆಚ್ಚು ವಿಸ್ತರಿಸಲಾಗದು. ಏಕೆಂದರೆ, ಇದರಿಂದ ನ್ಯಾಯಾಂಗದ ತಳಹದಿಯ ಮೇಲೆ ನಡೆಯುವ ದುರುದ್ದೇಶಪೂರಿತ, ಭಯಾನಕ ಮತ್ತು ವ್ಯವಸ್ಥಿತ ದಾಳಿಗಳನ್ನು ಹತ್ತಿಕ್ಕಲಾದ ದುರ್ಬಲ ಸ್ಥಿತಿ ನಿರ್ಮಾಣವಾಗಬಹುದು.
ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ

ಹಿರಿಯ ವಕೀಲ ನವ್ರೋಜ್ ಸೀರ್ವಾಯ್ ತಮ್ಮ ಹೇಳಿಕೆಯಲ್ಲಿ ಹೀಗೆ ತಿಳಿಸಿದ್ದಾರೆ:

ಸುಪ್ರೀಂ ಕೋರ್ಟ್ ತೀರ್ಪು ನ್ಯಾಯಾಲಯದ ಘನತೆ ಮತ್ತು ಸಾರ್ವಭೌಮತೆ ಎತ್ತಿಹಿಡಿಯುವ ನೆಪದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸಿರುವ ಪ್ರಹಾರವಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿದೆ. ಇದರ ಜೊತೆಗೆ ತೀರ್ಪು ನಾಗರಿಕ ಸಮಾಜದ ಒಂದು ನಿರ್ದಿಷ್ಟ ಗುಂಪಿನ ಮೇಲೆ ವ್ಯವಸ್ಥಿತ ದಾಳಿಯಂತೆ ಭಾಸವಾಗುತ್ತಿದೆ.
ನವ್ರೋಜ್ ಸೀರ್ವಾಯ್

ನ್ಯಾಯಾಲಯದ ಚಟುವಟಿಕೆಗಳ ಬಗ್ಗೆ ತಿಳಿದಿರುವ, ಕೋರ್ಟಿನ ಒಳಗೆ ಮತ್ತು ಹೊರಗೆ ನ್ಯಾಯಾಮೂರ್ತಿಗಳ ನಡವಳಿಕೆಯ ಬಗ್ಗೆ ಅರಿತಿರುವ ಕಾನೂನು ವೃತ್ತಿಯಲ್ಲಿರುವರನ್ನೇ ಗುರಿಯಾಗಿಸಿಕೊಂಡು ನಡೆಸಿದ ಪ್ರಹಾರದಂತೆ ಈ ತೀರ್ಪು ಭಾಸವಾಗುತ್ತಿದೆ ಎಂದು ಸೀರ್ವಾಯ್ ಹೇಳಿದ್ದಾರೆ.

ಘನ ನ್ಯಾಯಾಲಯದ ತೀರ್ಪಿನ ಉದ್ದೇಶವು ಭೂಷಣ್ ಅವರನ್ನು ಉದಾಹರಣೆಯನ್ನಾಗಿಸುವ ಮೂಲಕ ಕಾನೂನು ವೃತ್ತಿಯಲ್ಲಿರುವ ಇತರರಿಗೆ ಗಂಭೀರ ಸಂದೇಶ ರವಾನಿಸುವುದಾಗಿದೆ. ಸದರಿ ತೀರ್ಪು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಘನ ನ್ಯಾಯಾಲಯದ ತೀರ್ಪು ಬಹುಶಃ ತನ್ನ ಉದ್ದೇಶ ಮತ್ತು ಪರಿಣಾಮದಲ್ಲಿ ಯಶಸ್ವಿಯಾಗಿದೆ. ಇದು ದೇಶದ ದುರಂತ.
ನವ್ರೋಜ್ ಸೀರ್ವಾಯ್

ವಲಸೆ ಕಾರ್ಮಿಕ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನಿಲುವು ಭಾರೀ ಟೀಕೆಗೆ ಒಳಗಾಗಿತ್ತು. ಭೂಷಣ್ ಪ್ರಕರಣದ ತೀರ್ಪು ಮುಂದಿನ ದಿನಗಳಲ್ಲಿ ಒಂದು ಪೀಠಿಕೆಯಾಗಿ ಬಳಕೆಯಾಗಲಿದ್ದು, ಇದನ್ನು ಪ್ರಸ್ತಾಪಿಸುವ ಮೂಲಕ ನ್ಯಾಯಾಂಗವನ್ನು ಟೀಕಾತೀತಗೊಳಿಸುವ ಯತ್ನ ನಡೆಸಲಾಗಿದೆ ಎಂದು ಸೀರ್ವಾಯ್ ಅಭಿಪ್ರಾಯಪಟ್ಟಿದ್ದಾರೆ.

ಸಾರ್ವಜನಿಕರ ದೃಷ್ಟಿಯಲ್ಲಿ ನ್ಯಾಯಾಂಗದ ಘನತೆ ಮತ್ತು ಸಾರ್ವಭೌಮತೆಯನ್ನು ಎತ್ತಿಹಿಡಿಯುವಂತೆ ಬಿಂಬಿಸುತ್ತಲೇ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ನಡೆಸುತ್ತಿರುವುದು ತೀರ್ಪಿನಿಂದ ಸ್ಪಷ್ಟವಾಗಿದೆ. ನ್ಯಾಯಂಗ ನಿಂದನೆ ವ್ಯಾಪ್ತಿಯ ಕುರಿತ ಅರ್ಥೈಸುವಿಕೆ, ವಿಶ್ಲೇಷಣೆ ಮತ್ತು ತಾರ್ಕಿಕತೆಯಲ್ಲಿ ಕೋರ್ಟ್ ಸಂಪೂರ್ಣವಾಗಿ ಎಡವಿದೆ. ನ್ಯಾಯಾಂಗ ನಿಂದನೆಯ ಕುರಿತು ಸುಪ್ರೀಂ ಕೋರ್ಟ್ ಕಳೆದ ಕೆಲವು ವರ್ಷಗಳಲ್ಲಿ ನೀಡಿರುವ ತೀರ್ಪನ್ನು ಗಮನಿಸಿದರೆ ಹಾಲಿ ತೀರ್ಪು ಆಶ್ಚರ್ಯ ಮೂಡಿಸುವಂಥದ್ದೇನಲ್ಲ. ಸಂವಿಧಾನದತ್ತವಾಗಿ ಸುಪ್ರೀಂ ಕೋರ್ಟ್ ಗೆ ದೊರೆತಿರುವ ಅಧಿಕಾರವನ್ನು ಬಳಕೆ ಮಾಡುವಲ್ಲಿ ನ್ಯಾಯಾಲಯವು ಪಕ್ಷಪಾತಿಯಾಗಿದೆ ಎಂದು ಸಾಂವಿಧಾನಿಕ ಕಾನೂನು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಜಿ ಕಾನೂನು ಸಚಿವ ಪಿ ಶಿವ ಶಂಕರ್, ಇಎಂಎಸ್ ನಂಬೂದಿರಿಪಾದ್ ಅಥವಾ ಅರುಂಧತಿ ರಾಯ್ ಪ್ರಕರಣದಲ್ಲಿ ವ್ಯತ್ಯಾಸ ಗುರುತಿಸಬಹುದಾಗಿದೆ ಎಂದು ಸಿರ್ವಾಯ್ ತಮ್ಮ ವಿವರವಾದ ಹೇಳಿಕೆಯಲ್ಲಿ ತಿಳಿಸಿದ್ದಾರೆ.