Nawab Malik, Bombay High Court
ಜಾರಿ ನಿರ್ದೇಶನಾಲಯ (ಇ ಡಿ ) ತನಿಖೆ ನಡೆಸುತ್ತಿರುವ ಭೂಗತ ದೊರೆ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಸಂಪುಟ ಸಚಿವ ನವಾಬ್ ಮಲಿಕ್ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ನ್ಯಾಯಮೂರ್ತಿಗಳಾದ ಪ್ರಸನ್ನ ಬಿ ವರಾಲೆ ಮತ್ತು ಶ್ರೀರಾಮ್ ಎಂ ಮೋದಕ್ ಅವರ ಪೀಠವು ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮಲಿಕ್ ಅವರನ್ನು ಬಿಡುಗಡೆ ಮಾಡುವಂತೆ ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿಯಲ್ಲಿ ಮಧ್ಯಂತರ ಪ್ರಾರ್ಥನೆಯ ತೀರ್ಪು ನೀಡಿತು.
"ಕೆಲವು ಚರ್ಚಾಸ್ಪದ ವಿಷಯಗಳನ್ನು ಎತ್ತಿರುವುದರಿಂದ, ಈ ವಿಚಾರವನ್ನು ಸುದೀರ್ಘವಾಗಿ ಆಲಿಸಬೇಕಾಗಿದೆ. ನಿಗದಿಪಡಿಸಿದ ಆಧಾರಗಳನ್ನು ಪರಿಗಣಿಸಿ, ಮಧ್ಯಂತರ ಅರ್ಜಿಯಲ್ಲಿ ಪರಿಹಾರ ನೀಡಲು ನಾವು ಒಲವು ತೋರುತ್ತಿಲ್ಲ" ಎಂದು ನ್ಯಾಯಾಲಯ ಹೇಳಿತು.
"ತಮ್ಮ ವಿರುದ್ಧ ಸಲ್ಲಿಸಲಾಗಿರುವ ಜಾರಿ ಪ್ರಕರಣ ಮಾಹಿತಿ ವರದಿ (ಇಸಿಐಆರ್) ಹಾಗೂ ತಮ್ಮ ಬಂಧನ ಅಕ್ರಮ. ಇಂತಹ ಕಾನೂನು ಬಾಹಿರ ಕ್ರಮದಿಂದಾಗಿ ತಮ್ಮ ಸತತ ಬಂಧನ ಅಕ್ರಮ ಮತ್ತ ಅಧಿಕಾರ ವ್ಯಾಪ್ತಿಯನ್ನು ಮೀರುತ್ತದೆ. ಆದ್ದರಿಂದ ತಾನು ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಪುರಸ್ಕಾರಾರ್ಹ ಮತ್ತು ತಾನು ಬಿಡುಗಡೆಗೆ ಅರ್ಹ" ಎಂದು ಕಾನೂನು ಸಂಸ್ಥೆ ರಶ್ಮಿಕಾಂತ್ ಅಂಡ್ ಪಾರ್ಟ್‌ನರ್ಸ್ ಮೂಲಕ ಸಲ್ಲಿಸಲಾದ ಮನವಿಯಲ್ಲಿ ಮಲಿಕ್ ವಾದಿಸಿದ್ದರು.
ಆದರೆ ಇದಕ್ಕೆ ಇ ಡಿ ಬಲವಾದ ಆಕ್ಷೇಪ ಎತ್ತಿತ್ತು. ಮಾ. 11ರಂದು ತೀರ್ಪು ಕಾಯ್ದಿರಿಸಿದ್ದ ನ್ಯಾಯಾಲಯ ಇಂದು ಮಲಿಕ್ ಅವರಿಗೆ ಮಧ್ಯಂತರ ಪರಿಹಾರ ನಿರಾಕರಿಸಿ ಆದೇಶ ಹೊರಡಿಸಿದೆ.