ಉದ್ಯಮಿ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಸಮೂಹದ ಭಾಗವಾಗಿದ್ದ ಜನಪ್ರಿಯ ರೇಡಿಯೊ ವಾಹಿನಿ ಬಿಗ್ ಎಫ್‌ಎಂ ಒಡೆತನ ಹೊಂದಿರುವ ಮತ್ತು ನಿರ್ವಹಿಸುವ ರಿಲಯನ್ಸ್ ಬ್ರಾಡ್‌ಕಾಸ್ಟ್ ನೆಟ್‌ವರ್ಕ್ ಲಿಮಿಟೆಡ್ ಸ್ವಾಧೀನಕ್ಕಾಗಿ ಸಫೈರ್ ಮೀಡಿಯಾ ಲಿಮಿಟೆಡ್ ರೂಪಿಸಿದ್ದ ಪರಿಹಾರ ಯೋಜನೆಯನ್ನು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ (ಎನ್‌ಸಿಎಲ್‌ಎಟಿ) ಸೋಮವಾರ ಎತ್ತಿಹಿಡಿದಿದೆ.
ಸಫೈರ್ ಮೀಡಿಯಾ ಸಲ್ಲಿಸಿದ ಪರಿಹಾರ ಯೋಜನೆಯನ್ನು ಅನುಮೋದಿಸಿದ್ದ ಮುಂಬೈನ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ನಿರ್ಧಾರ ಪ್ರಶ್ನಿಸಿ ಇಬ್ಬರು ಅರ್ಜಿದಾರರು ಸಲ್ಲಿಸಿದ್ದ ಮೇಲ್ಮನವಿಗಳನ್ನು ನ್ಯಾಯಮಂಡಳಿ ಅಧ್ಯಕ್ಷ ನಿವೃತ್ತ ನ್ಯಾಯಮೂರ್ತಿ ಅಶೋಕ್ ಭೂಷಣ್ ಮತ್ತು ತಾಂತ್ರಿಕ ಸದಸ್ಯ ಬರುನ್ ಮಿತ್ರ ಅವರಿದ್ದ ಪೀಠ ಸೋಮವಾರ ವಜಾಗೊಳಿಸಿದೆ.
ಯಶಸ್ವಿ ಪರಿಹಾರ ಅರ್ಜಿದಾರರ (ಎಸ್‌ಆರ್‌ಎ) ಅರ್ಹತೆಯ ಮೌಲ್ಯಮಾಪನದಲ್ಲಿ ಪರಿಹಾರ ವೃತ್ತಿಪರರಿಂದ (ರೆಸಲ್ಯೂಷನ್ ಪ್ರೊಫೆಷನಲ್ಸ್) ಅಕ್ರಮ ನಡೆದಿಲ್ಲ ಹೀಗಾಗಿ ಪರಿಹಾರ ಯೋಜನೆಯನ್ನು ಅನುಮೋದಿಸುವ ಆದೇಶದಲ್ಲಿ ಮಧ್ಯಪ್ರವೇಶಿಸಲು ದಿವಾಳಿ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಸೆಕ್ಷನ್ 61 (3) (ii) ರ ಪ್ರಕಾರ ಸಮರ್ಥನೀಯ ನೆಲೆ ಸಿಗುತ್ತಿಲ್ಲ ಎಂದು ಡಿಸೆಂಬರ್ 23ರ ಎನ್‌ಸಿಎಲ್‌ಎಟಿ ಆದೇಶ ತಿಳಿಸಿದೆ.
ಫೆಬ್ರವರಿ 2024ರಲ್ಲಿ ಐಡಿಬಿಐ ಟ್ರಸ್ಟಿಶಿಪ್ ಸರ್ವಿಸಸ್ ಲಿಮಿಟೆಡ್ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಕಾರ್ಪೊರೇಟ್ ದಿವಾಳಿ ಪರಿಹಾರ ಪ್ರಕ್ರಿಯೆಗೆ (ಸಿಐಆರ್‌ಪಿ) ರಿಲಯನ್ಸ್ ಬ್ರಾಡ್‌ಕಾಸ್ಟ್ ನೆಟ್‌ವರ್ಕ್ ಲಿಮಿಟೆಡ್ ಅನ್ನು ಒಳಪಡಿಸಲಾಗಿತ್ತು. ಸಫೈರ್ ಮೀಡಿಯಾ ರೂಪಿಸಿದ್ದ ಪರಿಹಾರ ಯೋಜನೆಯನ್ನು ಮೇ 2024 ರಲ್ಲಿ, ಎನ್‌ಸಿಎಲ್‌ಟಿ ಅಂಗೀಕರಿಸಿತ್ತು.
ಸಫೈರ್ ಮೀಡಿಯಾವನ್ನು ಯಶಸ್ವಿ ಪರಿಹಾರ ಅರ್ಜಿದಾರರಾಗಿ (ಎಸ್‌ಆರ್‌ಎ) ಆಯ್ಕೆ ಮಾಡುವುದನ್ನು ಮತ್ತು ಯೋಜನೆ ಅನುಮೋದನೆಯನ್ನು ಪ್ರಶ್ನಿಸಿ ಅಭಿಜಿತ್ ರಿಯಾಲ್ಟರ್ಸ್ ಮತ್ತು ಕ್ರಿಯೇಟಿವ್ ಚಾನೆಲ್ ಎಂಬೆರಡು ಕಂಪೆನಿಗಳು ಅರ್ಜಿ ಸಲ್ಲಿಸಿದ್ದವು. ಎನ್‌ಸಿಎಲ್‌ಟಿ ಈ ಅರ್ಜಿಯನ್ನು ವಜಾಗೊಳಿಸಿದ್ದರಿಂದ ಅರ್ಜಿದಾರರು ಎನ್‌ಸಿಎಲ್‌ಎಟಿ ಮೆಟ್ಟಿಲೇರಿದ್ದರು, ಬಿಡ್ಡಿಂಗ್ ಪ್ರಕ್ರಿಯೆಯ ವಿವಿಧ ಅಂಶಗಳನ್ನು ಪ್ರಶ್ನಿಸಿದ್ದ ಅರ್ಜಿದಾರ ಕಂಪೆನಿಗಳು ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಪರಿಹಾರ ಅರ್ಜಿದಾರರಾಗಿ ಸಫೈರ್ ಮೀಡಿಯಾದ ಅರ್ಹತೆಯನ್ನು ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಿದ್ದವು.
ಸವಾಲು ಪ್ರಕ್ರಿಯೆಯಲ್ಲಿ (ಬಿಡ್ಡಿಂಗ್ ಪ್ರಕ್ರಿಯೆ) ಯಾವುದೇ ದೌರ್ಬಲ್ಯ ಅಥವಾ ಕಾನೂನಿನ ಉಲ್ಲಂಘನೆ ಕಂಡುಬಂದಿಲ್ಲ ಎಂದ ಎನ್‌ಸಿಎಲ್‌ಎಟಿ ಸಿಐಆರ್‌ಪಿಯನ್ನು ನಿಯಮಾವಳಿಗಳ ಪ್ರಕಾರ ನಡೆಸಲಾಗಿಲ್ಲ ಎಂಬ ಅರ್ಜಿದಾರರ ಆರೋಪಗಳನ್ನು ತಳ್ಳಿಹಾಕಿತು. ಅಂತೆಯೇ ಸಫೈರ್ ಮೀಡಿಯಾ ಸಲ್ಲಿಸಿದ ಪರಿಹಾರ ಯೋಜನೆಯನ್ನು ಎತ್ತಿಹಿಡಿಯಿತು.