cafe coffee day 
ಸುದ್ದಿಗಳು

ಕೆಫೆ ಕಾಫಿ ಡೇ ವಿರುದ್ಧದ ದಿವಾಳಿತನ ಪ್ರಕ್ರಿಯೆ: ಬೆಂಗಳೂರಿನ ಎನ್‌ಸಿಎಲ್‌ಟಿ ಆದೇಶಕ್ಕೆ ಚೆನ್ನೈನ ಎನ್‌ಸಿಎಲ್‌ಎಟಿ ತಡೆ

ಸಿಸಿಡಿ ಪ್ರಕರಣದಲ್ಲಿ ಕೋವಿಡ್‌ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ವಿಧಿಸಿದ್ದ ನಿಷೇಧವು ದಿವಾಳಿತನ ಪ್ರಕ್ರಿಯೆಗೆ ಅನ್ವಯವಾಗುವುದೆಯೇ ಎಂಬ ಪ್ರಶ್ನೆಯೂ ಸೇರಿದೆ.

Bar & Bench

ಬೆಂಗಳೂರಿನ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯ ಮಂಡಳಿಯು (ಎನ್‌ಸಿಎಲ್‌ಟಿ) ಕೆಫೆ ಕಾಫಿ ಡೇ (ಸಿಸಿಡಿ) ವಿರುದ್ಧ ಕಾರ್ಪೊರೇಟ್‌ ದಿವಾಳಿತನ ಅರ್ಜಿಯ ವಿಚಾರಣೆಗೆ ಅಂಗೀಕರಿಸಿರುವುದಕ್ಕೆ ಚೆನ್ನೈನ ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯ ಮಂಡಳಿಯು (ಎನ್‌ಸಿಎಲ್‌ಎಟಿ) ಶುಕ್ರವಾರ ತಡೆ ನೀಡಿದೆ.

ಸಿಸಿಡಿಯ ವಿರುದ್ಧದ ಎನ್‌ಸಿಎಲ್‌ಟಿ ಆದೇಶಕ್ಕೆ ನ್ಯಾಯಿಕ ಸದಸ್ಯರಾದ ನ್ಯಾ. ರಾಕೇಶ್‌ ಕುಮಾರ್‌ ಜೈನ್‌ ಮತ್ತು ತಾಂತ್ರಿಕ ಸದಸ್ಯ ಶ್ರೀಶಾ ಮೆರ್ಲಾ ಅವರ ನೇತೃತ್ವದ ಪೀಠವು ಸಿಸಿಡಿ ಮಾಜಿ ನಿರ್ದೇಶಕಿ ಮಾಳವಿಕಾ ಹೆಗ್ಡೆ ಅವರು ಸಲ್ಲಿಸಿರುವ ಮೇಲ್ಮನವಿಯ ಮುಂದಿನ ವಿಚಾರಣೆವರೆಗೆ ತಡೆ ನೀಡಿದೆ.

ಹಣಕಾಸು ಕ್ರೆಡಿಟರ್‌ ಇಂಡಸ್‌ ಇಂಡ್‌ ಬ್ಯಾಂಕ್‌ ಅರ್ಜಿ ಆಧರಿಸಿ ಎನ್‌ಸಿಎಲ್‌ಟಿ ಆದೇಶ ಮಾಡಿದ್ದು, ಇಂಡಸ್‌ ಇಂಡ್‌ ಬ್ಯಾಂಕ್‌ಗೂ ನೋಟಿಸ್‌ ಜಾರಿ ಮಾಡಿದೆ.

“ಮೇಲ್ಮನವಿಯಲ್ಲಿ ವಾದ ಮಾಡಬಹುದಾದ ಅಂಶಗಳು ಇರುವುದರಿಂದ ಈಗಾಗಲೇ ಕೇವಿಯಟ್‌ನಲ್ಲಿರುವ ಪ್ರತಿವಾದಿಗಳಿಗೆ ಔಪಚಾರಿಕವಾಗಿ ನೋಟಿಸ್‌ ಜಾರಿ ಮಾಡಲಾಗಿದೆ. ಸೆಪ್ಟೆಂಬರ್‌ 20ಕ್ಕೆ ಮುಂದಿನ ವಿಚಾರಣೆ ಇರಲಿದೆ. ಈ ಮಧ್ಯೆ, ಮುಂದಿನ ವಿಚಾರಣೆವರೆಗೆ ಆಕ್ಷೇಪಾರ್ಹ ಆದೇಶಕ್ಕೆ ತಡೆ ವಿಧಿಸಲಾಗಿದೆ” ಎಂದು ಎನ್‌ಸಿಎಲ್‌ಎಟಿ ಆದೇಶದಲ್ಲಿ ಹೇಳಿದೆ.

ಈ ಹಿಂದೆ ಸಿಸಿಡಿಯು ₹94 ಕೋಟಿ ಸಾಲದ ಮೊತ್ತವನ್ನು ಪಾವತಿಸಿಲ್ಲ ಎಂದು ಆಕ್ಷೇಪಿಸಿ ಇಂಡಸ್‌ ಇಂಡ್‌ ಬ್ಯಾಂಕ್‌ ಎನ್‌ಸಿಎಲ್‌ಟಿ ಮೆಟ್ಟಿಲೇರಿತ್ತು. ಇದನ್ನು ಆಧರಿಸಿ ಎನ್‌ಸಿಎಲ್‌ಟಿಯು ದಿವಾಳಿ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಿತ್ತು. ಈ ಆದೇಶವನ್ನು ಸಿಸಿಡಿಯ ಮಾಜಿ ನಿರ್ದೇಶಕಿ ಹಾಗೂ ವಿ ಜಿ ಸಿದ್ಧಾರ್ಥ ಅವರ ಪತ್ನಿ ಮಾಳವಿಕಾ ಹೆಗ್ಡೆ ಅವರು ಎನ್‌ಸಿಎಲ್‌ಎಟಿಯಲ್ಲಿ ಪ್ರಶ್ನಿಸಿದ್ದರು.

ಸಿಸಿಡಿ ಪ್ರಕರಣದಲ್ಲಿ ಕೋವಿಡ್‌ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ವಿಧಿಸಿದ್ದ ನಿಷೇಧವು ದಿವಾಳಿತನ ಪ್ರಕ್ರಿಯೆಗೆ ಅನ್ವಯವಾಗುವುದೆಯೇ ಎಂಬ ಪ್ರಶ್ನೆಯೂ ಸೇರಿದೆ.