Air India  
ಸುದ್ದಿಗಳು

ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಜೊತೆ ಏರ್ ಏಷ್ಯಾ ವಿಲೀನ: ಎನ್‌ಸಿಎಲ್‌ಟಿ ಅಸ್ತು

ನಾಗರಿಕ ವಿಮಾನಯಾನ ಸಚಿವಾಲಯದಿಂದ ಅಗತ್ಯ ಅನುಮೋದನೆ ಪಡೆಯಲಾಗಿದೆ ಎಂಬುದನ್ನು ಗಮನಿಸಿದ ಚಂಡೀಗಢದ ನ್ಯಾಯಮಂಡಳಿ ಎರಡೂ ವಿಮಾನಯಾನ ಕಂಪನಿಗಳ ನಡುವಿನ ವಿಲೀನಕ್ಕೆ ಸಮ್ಮತಿ ಸೂಚಿಸಿತು.

Bar & Bench

ಏರ್ ಏಷ್ಯಾ ಏರ್‌ಲೈನ್ಸ್‌ನ ಮಾಲೀಕ ಎಐಎಕ್ಸ್‌ ಕನೆಕ್ಟ್ ಪ್ರೈವೇಟ್ ಲಿಮಿಟೆಡ್ ಅನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲಿಮಿಟೆಡ್ ಕಂಪನಿಯೊಂದಿಗೆ ವಿಲೀನಗೊಳಿಸಲು ಚಂಡೀಗಢದಲ್ಲಿರುವ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಸಮ್ಮತಿ ಸೂಚಿಸಿದೆ.

 ಕಂಪನಿಗಳ ರಿಜಿಸ್ಟ್ರಾರ್ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಸೇರಿದಂತೆ ವಲಯ ನಿಯಂತ್ರಕರು ವಿಲೀನ ಪ್ರಸ್ತಾವನೆಗೆ ಅನುಮತಿ ನೀಡಿದ್ದಾರೆ ಎಂಬುದನ್ನು ನ್ಯಾಯಾಂಗ ಸದಸ್ಯ ಹರ್ನಾಮ್ ಸಿಂಗ್ ಠಾಕೂರ್ ಮತ್ತು ತಾಂತ್ರಿಕ ಸದಸ್ಯ ಎಲ್ಎನ್ ಗುಪ್ತಾ ಅವರಿದ್ದ ಪೀಠ ಗಮನಿಸಿತು.  

ಅದರಂತೆ, 2013ರ ಕಂಪನಿ ಕಾಯಿದೆಯ ಸೆಕ್ಷನ್ 230 ರಿಂದ 232 ರ ಅಡಿಯಲ್ಲಿ ಎರಡು ಕಂಪನಿಗಳ ವಿಲೀನದ ಯೋಜನೆಗೆ ಅದು ಅನುಮತಿಸಿತು.

ಎರಡೂ ವಿಮಾನಯಾನ ಕಂಪನಿಗಳು ವಿಮಾನ ಪ್ರಯಾಣಿಕರು ಮತ್ತು ಸರಕು ಸೇವೆಗಳ ವ್ಯವಹಾರದಲ್ಲಿ ತೊಡಗಿದ್ದುಏರ್ ಇಂಡಿಯಾ ಲಿಮಿಟೆಡ್‌ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಗಳಾಗಿವೆ.

ಎಐಎಕ್ಸ್‌ ಕನೆಕ್ಟ್ ಮಾಲೀಕತ್ವದ ಏರ್ ಏಷ್ಯಾ ಭಾರತದಲ್ಲಿ 19 ಸ್ಥಳಗಳಿಗೆ ಜಾಲ ವಿಸ್ತರಿಸುವುದರೊಂದಿಗೆ ದೇಶೀಯ ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

ಗಲ್ಫ್ ಮತ್ತು ಆಗ್ನೇಯ ಏಷ್ಯಾದಲ್ಲಿನ ಕಡಿಮೆ/ಮಧ್ಯಮ ಅಂತರದ ಅಂತಾರಾಷ್ಟ್ರೀಯ ಮಾರ್ಗಗಳಿಗೆ ಕೈಗೆಟುಕುವ ದರದಲ್ಲಿ 34 ಸ್ಥಳಗಳನ್ನು ಕಾರ್ಯಕ್ಷೇತ್ರವಾಗಿರಿಸಿಕೊಂಡು ಅನುಕೂಲಕರ ಸಂಪರ್ಕ ಒದಗಿಸುವ ಉದ್ದೇಶದಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಂತಾರಾಷ್ಟ್ರೀಯ ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ.

ಕಂಪನಿಗಳು ಸಲ್ಲಿಸಿದ ವಿಲೀನ ಯೋಜನೆ ಪ್ರಕಾರ ಎಐಎಕ್ಸ್‌ ಕನೆಕ್ಟ್‌ನ ವ್ಯವಹಾರವನ್ನು ರದ್ದುಗೊಳಿಸದೆಯೇ ಎರಡೂ ಕಂಪನಿಗಳು ವಿಲೀನವಾಗಲಿವೆ. ಪರಿಣಾಮವಾಗಿ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಾತ್ರ ಮೂಲ ಕಂಪನಿಯಲ್ಲಿ 100% ಷೇರು  ಹೊಂದಲಿದೆ.

ವಿಲೀನ ಯೋಜನೆ ಅನುಮೋದಿಸಲು ತಮ್ಮ ಆಕ್ಷೇಪಣೆ ಇಲ್ಲ ಎಂದು ಉತ್ತರ ಪ್ರದೇಶದ ಪ್ರಾದೇಶಿಕ ನಿರ್ದೇಶಕರು, ದೆಹಲಿ ಮತ್ತು ಹರಿಯಾಣದ ಕಂಪನಿಗಳ ರಿಜಿಸ್ಟ್ರಾರ್, ಪಂಜಾಬ್ ಮತ್ತು ಹರಿಯಾಣದ ಹೈಕೋರ್ಟ್‌ ಸೂಚಿಸಿರುವ ಅಧಿಕೃತ ಬರಖಾಸ್ತುದಾರರು, ಆದಾಯ ತೆರಿಗೆ ಇಲಾಖೆ,  ನಾಗರಿಕ ವಿಮಾನಯಾನ ಸಚಿವಾಲಯ  ಹಾಗೂ ನಾಗರಿಕ ವಿಮಾನಯಾನ ಮಹಾನಿರ್ದೇಶಕರು (DGCA) ತಿಳಿಸಿರುವುದನ್ನು ನ್ಯಾಯಮಂಡಳಿ ಗಮನಕ್ಕೆ ತರಲಾಯಿತು. ಅಂತೆಯೇ ಅರ್ಜಿ ಸಲ್ಲಿಸಿದ 9 ತಿಂಗಳೊಳಗೆ  ವಿಲೀನಕ್ಕೆ ಎನ್‌ಸಿಎಲ್‌ಟಿ ಅನುಮತಿ ನೀಡಿತು.