NCLT Bangalore 
ಸುದ್ದಿಗಳು

ಇಂಡಿಯಾ ಬುಲ್ಸ್‌ ಅರ್ಜಿ: ಮಂತ್ರಿ ಡೆವಲಪರ್ಸ್‌ ವಿರುದ್ಧ ದಿವಾಳಿತನ ಪ್ರಕ್ರಿಯೆಗೆ ಎನ್‌ಸಿಎಲ್‌ಟಿ ಚಾಲನೆ

ಮಂತ್ರಿ ಡೆವಲಪರ್ಸ್‌ ₹450 ಕೋಟಿ ಸಾಲವನ್ನು ಮರುಪಾವತಿ ಮಾಡಿಲ್ಲ ಎಂದು ಆಕ್ಷೇಪಿಸಿ ಸೆಕ್ಷನ್‌ 7ರ ಅಡಿ ಎನ್‌ಸಿಎಲ್‌ಟಿಗೆ ಇಂಡಿಯಾ ಬುಲ್ಸ್‌ ಅರ್ಜಿ ಸಲ್ಲಿಸಿದೆ.

Bar & Bench

ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯ ಮಂಡಳಿಯು (ಎನ್‌ಸಿಎಲ್‌ಟಿ) ಕಳೆದ ವಾರ ಮಂತ್ರಿ ಡೆವಲಪರ್ಸ್‌ ವಿರುದ್ಧ ಕಾರ್ಪೊರೇಟ್‌ ದಿವಾಳಿತನ ನಿಲುವಳಿ ಪ್ರಕ್ರಿಯೆಯನ್ನು (ಸಿಐಆರ್‌ಪಿ) ಆರಂಭಿಸಿದೆ.

ಮಂತ್ರಿ ಡೆವಲಪರ್ಸ್‌ ₹450 ಕೋಟಿ ಸಾಲವನ್ನು ಮರುಪಾವತಿ ಮಾಡಿಲ್ಲ ಎಂದು ಆಕ್ಷೇಪಿಸಿ ಋಣಬಾಧ್ಯತೆ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಸೆಕ್ಷನ್‌ 7ರ ಅಡಿ ಇಂಡಿಯಾ ಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ ಸಲ್ಲಿಸಿದ್ದ ಅರ್ಜಿಯನ್ನು ನಿವೃತ್ತ ನ್ಯಾಯಮೂರ್ತಿ ಟಿ ಕೃಷ್ಣವಲ್ಲಿ ಮತ್ತು ತಾಂತ್ರಿಕ ಸದಸ್ಯರಾದ ಕುಮಾರ್‌ ದುಬೆ ಅವರ ಕೋರಂ ವಿಚಾರಣೆಗೆ ಪರಿಗಣಿಸಿದೆ.

“ಮೇಲೆ ಚರ್ಚಿಸಲಾದ ವಾಸ್ತವಿಕ ವಿಚಾರಗಳನ್ನು ಪರಿಗಣಿಸಿ, ಸಾಲ ಮರುಪಾವತಿ ಮೊತ್ತವು ಒಂದು ಕೋಟಿ ರೂಪಾಯಿ ಮೀರಿದ್ದು, ಐಬಿಸಿ ಸೆಕ್ಷನ್‌ ಅಡಿ ಮಂತ್ರಿ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ ವಿರುದ್ಧದ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲಾಗಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಮಂತ್ರಿ ಡೆವಲಪರ್ಸ್‌ ಸಾಲದ ಕರಾರಿನ ಅನ್ವಯ ಸಮಯಕ್ಕೆ ತಕ್ಕಂತೆ ನಿರ್ದಿಷ್ಟ ದಿನಾಂಕದಂದು ಇಂಡಿಯಾ ಬುಲ್ಸ್‌ಗೆ ಹಣ ಪಾವತಿಸಲು ವಿಫಲವಾಗಿದೆ. ಹಲವು ನೋಟಿಸ್‌ಗಳನ್ನು ನೀಡಿದ ಬಳಿಕವೂ ಸಾಲಗಾರ ಅಥವಾ ಸಹ ಸಾಲಗಾರರು ಬಾಕಿ ಹಣವನ್ನು ಪಾವತಿಸಿಲ್ಲ ಎಂದು ಇಂಡಿಯಾ ಬುಲ್ಸ್‌ ಅರ್ಜಿಯಲ್ಲಿ ಆಕ್ಷೇಪಿಸಿದೆ.

ಮತ್ತೊಂದು ಕಡೆ, ಸಾಲದ ಹಣ ಮಂಜೂರು ಮಾಡಲು ಇಂಡಿಯಾ ಬುಲ್ಸ್‌ ತಡ ಮಾಡಿದ್ದು, ಹಣದ ಕೊರತೆಯಿಂದ ತನ್ನ ಪ್ರಾಜೆಕ್ಟ್‌ ಜಾರಿ ತಡವಾಯಿತು. ಈ ವಿಚಾರಣಾ ಪ್ರಕ್ರಿಯೆಗಳನ್ನು (ದಿವಾಳಿತನ) ಆರಂಭಿಸಿದ ಬಳಿಕವೂ ಇಂಡಿಯಾ ಬುಲ್ಸ್‌ ತನಗೆ ಹಣಕಾಸು ಸೌಕರ್ಯ ಕಲ್ಪಿಸಿತ್ತು. ಆ ಮೂಲಕ ಮಂತ್ರಿ ಡೆವಲಪರ್ಸ್‌ ಯಾವುದೇ ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿರಲಿಲ್ಲ ಎಂಬುದನ್ನು ಅವರ ನಡತೆಯ ಮೂಲಕ ಸಾಬೀತುಪಡಿಸಿದೆ ಎಂದು ಮಂತ್ರಿ ಡೆವಲಪರ್ಸ್‌ ವಾದಿಸಿದೆ.

ಸಾಲದ ಹಣ ಹಿಂದಿರುಗಿಸುವ ಸಾಧ್ಯತೆಗೆ ಸಂಬಂಧಿಸಿದಂತೆ ಉಭಯ ಪಕ್ಷಕಾರರ ನಡುವೆ ಸಾಕಷ್ಟು ಒಪ್ಪಂದಗಳು ಆಗಿದ್ದು, ಅವುಗಳಾವುವು ಜಾರಿಗೆ ಬರಲಿಲ್ಲ. ರಾಜಿ ಮಾತುಕತೆಯಲ್ಲಿ ಮೇಲುಗೈ ಸಾಧಿಸಲು ಪ್ರಕ್ರಿಯೆ ಆರಂಭಿಸಲಾಗಿದೆ ಎಂದೂ ಮಂತ್ರಿ ಡೆವಲಪರ್ಸ್‌ ವಾದಿಸಿದೆ.

ಮಧ್ಯಂತರ ನಿಲುವಳಿ ವೃತ್ತಿಪರರಾಗಿ ಅಹ್ಸಾನ್‌ ಅಹ್ಮದ್‌ ಅವರನ್ನು ನ್ಯಾಯ ಮಂಡಳಿಯು ನೇಮಕ ಮಾಡಿದ್ದು, ಸಾರ್ವಜನಿಕ ನೋಟಿಸ್‌ ಸೇರಿದಂತೆ ವಿವಿಧ ವೆಚ್ಚ ಭರಿಸಲು ₹2 ಲಕ್ಷವನ್ನು ಅಹ್ಮದ್‌ ಅವರಲ್ಲಿ ಠೇವಣಿ ಇಡಲು ಇಂಡಿಯಾ ಬುಲ್ಸ್‌ಗೆ ಆದೇಶ ಮಾಡಲಾಗಿದೆ.

ಇಂಡಿಯಾ ಬುಲ್ಸ್‌ ಪರವಾಗಿ ಹಿರಿಯ ವಕೀಲ ಸಿ ಕೆ ನಂದಕುಮಾರ್‌, ವಕೀಲರಾದ ವಿ ಜಿ ಪ್ರಶಾಂತ್‌, ಲೇಖಾ ಹಾಜರಾಗಿದ್ದರು. ಮಂತ್ರಿ ಡೆವಲಪರ್ಸ್‌ ಅನ್ನು ಹಿರಿಯ ವಕೀಲ ಎಂ ಎಸ್‌ ಶ್ಯಾಮ್‌ಸುಂದರ್‌, ವಕೀಲರಾದ ಕೃತಿಕಾ ರಾಘವನ್‌, ಸಮೀಕ್ಷಾ ಪಾಟೀಲ್‌ ಮತ್ತು ಮೋಹ್ನಿಶ್‌ ಮೋಹನ್‌ ಪ್ರತಿನಿಧಿಸಿದ್ದರು.